Advertisement

ಅಪೂರ್ವಅನುಭವ ನೀಡಿದ ನರ್ತನಾವರ್ತನ 

03:19 PM Feb 02, 2018 | Team Udayavani |

ವಿದ್ವಾನ್‌ ದೀಪಕ್‌ ಕುಮಾರ್‌ ನೇತೃತ್ವದ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ(ರಿ.) ದಶಮಾನೋತ್ಸವ ವರ್ಷದ ಆಚರಣೆಯನ್ನು ನರ್ತನಾವರ್ತನವೆಂಬ ಪರಿಕಲ್ಪನೆಯಲ್ಲಿ ಹತ್ತು ವರ್ಷಗಳ ಹಿಂದೆ ಆಚರಿಸಿತ್ತು. ಇದೀಗ ವಿಂಶತಿ ವರ್ಷಾಚರಣೆಯ ಸಂದರ್ಭದಲ್ಲಿ ಅದೇ ಹೆಸರಿನಲ್ಲಿ ಪುನರಾವರ್ತಿಸಿದೆ. ಕಳೆದ ವರ್ಷ ಪ್ರಾರಂಭವಾದ ವಿಂಶತಿ ವರ್ಷಾಚರಣೆ ಇತ್ತೀಚೆಗೆ ಸಮಾರೋಪಗೊಂಡಿದ್ದು, ಇದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ.13 ಹಾಗೂ 14ರ ಎರಡು ದಿನಗಳ ಕಾರ್ಯಕ್ರಮದ ಮೊದಲಿನ ಭಾಗ ದೀಪಕ್‌ ಕುಮಾರ್‌ ಸಂಯೋಜಿತ ನೃತ್ಯ ರೂಪಕ ಕೊಲ್ಲೂರು ಶ್ರೀ ಮೂಕಾಂಬಿಕೆ. ಶ್ರೀ ಕ್ಷೇತ್ರ ಕೊಲ್ಲೂರಿನ ಕ್ಷೇತ್ರ ಪುರಾಣಕ್ಕೆ ಸಂಬಂಧಿಸಿದಂತೆ ಪ್ರಚಲಿತವಿರುವ ಆಖ್ಯಾಯಿಕೆಗಳಿಂದ ಆಯ್ದ ಭಕ್ತಾಭೀಷ್ಟಪ್ರದಾತೆಯಾದ ತಾಯಿ ಮೂಕಾಂಬಿಕೆ ದುಷ್ಟ ಮೂಕಾಸುರನ್ನು ವಧಿಸಿ ಆದಿ ಶಂಕರರ ಪ್ರಯತ್ನದಿಂದ ಧರೆಗಿಳಿದು ಕೊಲ್ಲೂರಲ್ಲಿ ನೆಲೆಸಿರುವ ಕಥಾನಕ ಇದರ ಹೂರಣ. ಪಾರಂಪರಿಕವಾಗಿ ಇಂದ್ರನ ಆಯುಧವಾದ ಝರ್ಝರವನ್ನು ವಿಘ್ನ ನಿವಾರಣೆಯ ಭದ್ರತೆಯೊಂದಿಗೆ ರಂಗದಲ್ಲಿ ಸ್ಥಾಪಿಸಿ ಪುಷ್ಪಾಂಜಲಿ ನೆರವೇರಿಸಿ ಮುಂದೆ ಲಾಸ್ಯ ನಿರೂಪಣೆಯ ನೃತ್ಯದ ವಿವಿಧ ಪಿಂಡಿಬಂಧಗಳ ಮೂಲಕ ಸಾಗಿ ಮೂಕಾಂಬಿಕೆಯ ಸ್ತುತಿ ಮಾಡಿ ನಾಟ್ಯಶಾಸ್ತ್ರದ ಪ್ರಾರಂಭದ ವಿಧಿಗಳನ್ನು ಪಾಲಿಸಲಾಯಿತು. ಮುಂದೆ ಕೋಲ ಮಹರ್ಷಿಯ ಯಜ್ಞಯಾಗಾದಿಗಳ ನಾಶಕ್ಕಾಗಿ ಕಂಹಾಸುರನ ಪ್ರವೇಶ. ಮುಂದೆ ಇಂದ್ರನ ಸೋಲು, ಅಧಿಕ ಶಕ್ತಿಗಾಗಿ ಕಂಹಾಸುರನ ತಪಸ್ಸು, ಶಿವ ಪ್ರತ್ಯಕ್ಷನಾಗುವುದು, ವಾಗೆªàವಿ ಸರಸ್ವತಿಯ ಕಾರಣದಿಂದ ಮೂಕನಾದದ್ದು-ಮೂಕಾಸುರನೆಂದು ಅನ್ವರ್ಥಗೊಂಡದ್ದು, ಮುಂದೆ ಬ್ರಹ್ಮಾಣಿ, ವೈಷ್ಣವಿ, ಶಾಂಭವಿ, ಇಂದ್ರಾಣಿ, ಕೌಮಾರಿ ಹಾಗೂ ವಾರಾಹಿಗಳೆಂಬ ಆರು ಶಕ್ತಿಗಳು ಸಿಂಹವಾಹಿನಿಯಾದ ದೇವಿಯಲ್ಲಿ ಲೀನವಾಗಿ ಆಕೆ ಮೂಕಾಸುರನನ್ನು ಸಂಹರಿಸಿ ಮೂಕಾಂಬಿಕೆಯಾಗಿ ಮುಂದೆ ಆದಿಶಂಕರರಿಗೊಲಿದು ಕೊಲ್ಲೂರಿನಲ್ಲಿ ನೆಲೆಯಾದ ಕಥಾನಕವಿದು. ಮೂವತ್ತಕ್ಕೂ ಅಧಿಕ ಕಲಾವಿದರನ್ನು ತರಬೇತುಗೊಳಿಸಿ ವಿವಿಧ ಹಂತಗಳಲ್ಲಿ ದುಡಿಸಿಕೊಂಡ ವಿಧಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ದೇವಿ ಹಾಗೂ ಅಸುರ ಪಾತ್ರಧಾರಿಗಳಾಗಿ ಕಲಾ-ದೀಪ ದಂಪತಿಯ ನಿರ್ವಹಣೆ ಉತ್ತಮ ಮಟ್ಟದಲ್ಲಿತ್ತು. ವರ್ಣಾಲಂಕಾರ, ರಂಗಸಜ್ಜಿಕೆಯಲ್ಲಿ ಭಾವನಾ ಕಲಾ ಆರ್ಟ್ಸ್ನ ಕಲಾವಿದರು ಪೌರಾಣಿಕದ ಪರಿಕಲ್ಪನೆ ಬರುವಂತೆ ಮಾಡಿದರೆ, ಧ್ವನಿ,ಬೆಳಕಿನಲ್ಲಿ ಮಂಗಳೂರಿನ ದೇವ್‌ ಸೌಂಡ್ಸ್‌ ಅಂಡ್‌ ಲೈಟ್ಸ್‌ ನವರು ವೇದಿಕೆಯಲ್ಲಿ ಒಂದು ಕಾಲ್ಪನಿಕ ಲೋಕವನ್ನು ಸೃಷ್ಟಿಸಿದ್ದರು. 

Advertisement

ಎರಡನೆಯ ದಿನದ ಕಾರ್ಯಕ್ರಮ ನಡೆಸಿಕೊಟ್ಟವರು ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ. ವಿದುಷಿ ಡಾ| ಜಾನಕಿ ರಂಗರಾಜನ್‌ ಚೆನ್ನೆç ಇವರು. ವಲ್ಲಭಾಚಾರ್ಯ ವಿರಚಿತ ರಾಗಮಾಲಿಕೆ ಹಾಗೂ ಆದಿತಾಳದಲ್ಲಿ ನಿಬದ್ಧವಾದ ಮಧುರಾಷ್ಟಕಂನಿಂದ ಕೈಗೆತ್ತಿಕೊಂಡು ಮುಂದೆ ಪದವರ್ಣದೆಡೆಗೆ ಸಾಗಿದರು. ಶ್ರೀ ಪಟ್ಣಂ ಸುಬ್ರಹ್ಮಣ್ಯಂ ಅಯ್ಯರ್‌ರವರಿಂದ ರಚಿತವಾದ ಈ ಪದವರ್ಣ ದರ್ಬಾರ್‌ ರಾಗದಲ್ಲಿದ್ದು ಖಂಡ ಅಟತಾಳದಲ್ಲಿ ನಿಬದ್ಧವಾಗಿದೆ. ಪಾರಮಾರ್ಥಿಕ ನಾಯಕ-ನಾಯಕಿ ಭಾವಕ್ಕಿಂತ ಕಲಾವಿದೆಯೇ ಪ್ರಚುರಪಡಿಸಿದಂತೆ ಲೌಕಿಕ ನಾಯಕ-ನಾಯಕಿ ಭಾವ ಪ್ರಸ್ತುತಿ ವಿಶೇಷವೆನಿಸಿತು.ಅಣ ಮಾಚಾರ್ಯರ ಸಂಕೀರ್ತನ ಜಂಜುರುಟಿ ರಾಗದಲ್ಲಿದ್ದು ಅಭಿನಯ ಪ್ರಧಾನವಾಗಿ ಮೆಚ್ಚುಗೆ ಪಡೆಯಿತು. ಟಿ.ವೈದ್ಯನಾಥ ಭಾಗವತರ ಪೂರ್ವಿರಾಗದ ತಿಲ್ಲಾನದೊಂದಿಗೆ ಮುಕ್ತಾಯಗೊಳಿಸಿದರು. ತಾನು ಪ್ರದರ್ಶಿಸಿದ ನೃತ್ಯದ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಕಲಾವಿದೆಯು ನೀಡಿರುವುದು ಪ್ರದರ್ಶನವನ್ನು ಪ್ರೇಕ್ಷಕರು ಅರ್ಥೈಸಲು ಹಾಗೂ ಕಲಾವಿದೆಯೊಂದಿಗೆ ಸಂವಹನಗೊಳ್ಳಲು ಸಹಾಯಕವಾಯಿತು.                 

ವಿ| ರಾಮಕೃಷ್ಣ ಭಟ್ಟ ಯು.ಎಸ್‌.                    

Advertisement

Udayavani is now on Telegram. Click here to join our channel and stay updated with the latest news.

Next