Advertisement

ಸಿರಿಧಾನ್ಯ ರಫ್ತಿಗೆ ಚಿನ್ನದ ಮೌಲ್ಯ: ನಿರ್ಮಲಾ ಸೀತಾರಾಮನ್‌

07:59 PM Sep 29, 2022 | Team Udayavani |

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಸಿರಿಧಾನ್ಯ ರಫ್ತಿಗೆ ಚಿನ್ನದ ಮೌಲ್ಯವಿದೆ. ಸಂಸ್ಕರಣಾ ಘಟಕಗಳ ಮೌಲ್ಯವರ್ಧನೆಗೆ ಲೆಕ್ಕಾಧಿಕಾರಿಗಳು, ತೆರಿಗೆ ಸಂಗ್ರಹಕಾರರು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ರೈತರಿಗೆ ಸಕ್ರಿಯ ಚಿಂತನೆಗಳನ್ನು ತುಂಬುವ ಮೂಲಕ ಹೆಚ್ಚಿನ ಲಾಭ ತಂದುಕೊಡಲು ಶ್ರಮಿಸಬೇಕಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಲಹೆ ನೀಡಿದರು.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಕೆಂಪೇಗೌಡ ರಸ್ತೆಯಲ್ಲಿರುವ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವಸದಸ್ಯರ 105ನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕಡಿಮೆ ದರದಲ್ಲಿ ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿಕೊಡುವ ಮೂಲಕ ರೈತರಿಗೆ ಭರ್ಜರಿ ಲಾಭ ಗಳಿಸಲು ಮತ್ತು ಮಾರುಕಟ್ಟೆ ಕಲ್ಪಿಸಲು ಸಹಕಾರಿಯಾಗಿದೆ. ಇದೇ ರೀತಿ ಆವಿಷ್ಕಾರ ಎಂದಾಕ್ಷಣ ಕೇವಲ ಸಾಫ್ಟ್ವೇರ್‌, ಐಟಿ ಸಂಬಂಧಿಸಿದ ಕ್ಷೇತ್ರಗಳು, ವೈದ್ಯಕೀಯ ಉಪಕರಣಗಳು ಮಾತ್ರವಲ್ಲ. ಸಿರಿಧಾನ್ಯದಂತಹ ಉತ್ಪಾದನಾ ಘಟಕಗಳಿಗೂ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

ಆವಿಷ್ಕಾರಗಳು ಭವಿಷ್ಯದ ಹಲವು ಸಮಸ್ಯೆಗಳಿಗೆ ಮತ್ತು ಆರ್ಥಿಕ ಸ್ಥಿತಿ ಬದಲಾವಣೆಗೆ ಪರಿಹಾರವಾಗಿದೆ. ಆವಿಷ್ಕಾರ ಮತ್ತು ನವೋದ್ಯಮಗಳಲ್ಲಿ ಬೆಂಗಳೂರು ಈಗಾಗಲೇ ಮುಂಚೂಣಿಯಲ್ಲಿದೆ. ಇದಕ್ಕೆ ಬೇಕಾದ ಪ್ರೋತ್ಸಾಹ ಮತ್ತು ಸಹಕಾರವನ್ನು ರಾಜ್ಯ ಸರ್ಕಾರ ನೀಡುತ್ತಿರುವುದು ಶ್ಲಾಘನೀಯ. “ಬಿಯಾಂಡ್‌ ಬೆಂಗಳೂರು’ ಹೆಜ್ಜೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಫ್ಕೆಸಿಸಿಸಿಐ ಅಧ್ಯಕ್ಷ ಡಾ.ಐ.ಎಸ್‌.ಪ್ರಸಾದ್‌, ನೂತನ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ, ಮಾಜಿ ಅಧ್ಯಕ್ಷರಾದ ಡಾ. ಪೆರಿಕಾಲ್‌ ಸುಂದರ್‌ ಉಪಸ್ಥಿತರಿದ್ದರು.

ಅಟಲ್‌ ಥಿಂಕರಿಂಗ್‌ ಲ್ಯಾಬ್‌ :

Advertisement

ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಂಶೋಧನಾ ಮನೋಭಾವ ರೂಢಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು “ಅಟಲ್‌ ಥಿಂಕರಿಂಗ್‌ ಲ್ಯಾಬ್‌’ ಆರಂಭಿಸಿದೆ. ಮಕ್ಕಳು ಶಾಲೆಯಲ್ಲಿಯೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹಾಗೂ ತಮ್ಮಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಈ ಲ್ಯಾಬ್‌ ಸಹಕಾರಿಯಾಗಲಿದೆ. ಮಂಗಳೂರು ವಿಶ್ವವಿದ್ಯಾಲಯದ ಹೃದಯ ಭಾಗದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಸಂಸದರು ಅಟಲ್‌ ಥಿಂಕರಿಂಗ್‌ ಮತ್ತು ನಾವಿನ್ಯತಾ ಕೇಂದ್ರಗಳಿಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next