ಜೋಧಪುರ: ಇತ್ತೀಚೆಗಷ್ಟೇ, ನೌಕಾಪಡೆಯ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಪ್ರಯಾಣಿಸುವ ಮೂಲಕ ನೌಕಾಪಡೆಯ ಕಾರ್ಯವೈಖರಿ ಅರಿಯುವ ಪ್ರಯತ್ನ ಮಾಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಬುಧವಾರ, ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ, ಈ ಸಾಹಸಗೈದ ಭಾರತದ ಮೊದಲ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬುಧವಾರ ಬೆಳಗ್ಗೆ ಜೋಧಪುರ ವಾಯು ನೆಲೆಯಿಂದ ಸುಖೋಯ್-30 ಎಂಕೆಐ ವಿಮಾನದಲ್ಲಿ ಪೈಲಟ್ ಜತೆ ಗಗನಕ್ಕೆ ಹಾರಿದ ಸೀತಾರಾಮನ್, ಸುಮಾರು 45 ನಿಮಿಷಗಳ ಕಾಲ ಆಕಾಶದಲ್ಲಿ ಸಂಚರಿಸಿ ಹಿಂದಿರುಗಿದರು.
ಹಾರಾಟಕ್ಕೂ ಮೊದಲು, ನಿರ್ಮಲಾ ಅವರಿಗೆ ಸೂಕ್ತ ತಿಳಿವಳಿಕೆ ನೀಡಲಾಯಿತು. ಇಬ್ಬರು ಕುಳಿತುಕೊಳ್ಳಬಹುದಾದ ಕಾಕ್‌ಪಿಟ್‌ನಲ್ಲಿ ಪೈಲಟ್‌ನ ಹಿಂಬದಿಯ ಸೀಟಿನಲ್ಲಿ ಕುಳಿತ ನಿರ್ಮಲಾ ಅವರಿಗೆ ಪೈಲಟ್ ಕೆಲವಾರು ಸೂಚನೆಗಳನ್ನು ನೀಡಿದರು. ಆನಂತರ, ಅವರನ್ನು ಪೈಲಟ್ ಆಕಾಶಕ್ಕೆ ಕರೆದೊಯ್ದರು.
ಇಂದಿನ ನನ್ನ ಪಯಣ, ಸುಖೋಯ್‌ನಲ್ಲಿ ಹಾರಾಡುವ ಯೋಧರ ಬಗೆಗಿನ ಗೌರವವನ್ನು ಹೆಚ್ಚಿಸಿದೆ. ಇಂಥ ಸ್ಮರಣೀಯ ಪಯಣದ ಅವಕಾಶ ನೀಡಿದ ವಾಯು ಸೇನೆಗೆ ಧನ್ಯವಾದ.
ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ
ಈ ಹಿಂದೆ ಯುದ್ಧವಿಮಾನಗಳಲ್ಲಿ ಪಯಣಿಸಿದ ಗಣ್ಯರು
ವರ್ಷ ಹೆಸರು ಸ್ಥಾನ ವಿಮಾನ
2003 ಜಾರ್ಜ್ ಫೆರ್ನಾಂಡಿಸ್ ರಕ್ಷಣಾ ಸಚಿವ ಮಿಗ್-21
2006 ಅಬ್ದುಲ್ ಕಲಾಂ ರಾಷ್ಟ್ರಪತಿ ಸುಖೋಯ್-30
2009 ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಸುಖೋಯ್-30
2016 ಕಿರಣ್ ರಿಜಿಜು ಕೇಂದ್ರ ಸಚಿವ ಸುಖೋಯ್-30