Advertisement
– ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೆಸರು ಉಲ್ಲೇಖೀಸದೆ, ಕಾಂಗ್ರೆಸ್ ಮೇಲೆ ನಡೆಸಿದ ವಾಗ್ಧಾಳಿ ಈ ಪರಿ. ರಾಜ್ಯಸಭೆ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆಗಳಿಗೆ ಉತ್ತರಿಸುತ್ತಲೇ, ವಿಪಕ್ಷಗಳ ಆರೋಪಕ್ಕೆ ಪ್ರತ್ಯಾಘಾತ ನೀಡಿದರು.
Related Articles
Advertisement
“ಪ್ರತೀ ಮನೆಯಲ್ಲೂ ಅಳಿಯ ಇರುತ್ತಾನೆ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಅಳಿಯನಿಗೆ ವಿಶೇಷ ಮರ್ಯಾದೆಯೇ ಇದೆ’ ಎಂದು ಆರೋಪಿಸಿದರು. ಇದೇ ವೇಳೆ, ಬಜೆಟ್‌ನ ಅಂಕಿ-ಅಂಶಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟೀಕೆಗೂ ಉತ್ತರಿಸಿದರು. ಎಂನರೇಗಾಕ್ಕೆ ಕಡಿಮೆ ಅನುದಾನ ನೀಡಿರುವ ಕಾಂಗ್ರೆಸ್
ಆರೋಪಕ್ಕೆ ಉತ್ತರಿಸುತ್ತಾ, 2009- 2014ರವರೆಗೆ ಕಾಂಗ್ರೆಸ್ ನೀಡಿದ್ದಕ್ಕಿಂತ ಹೆಚ್ಚು ಅನುದಾನ
ನೀಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
ದೂರದೃಷ್ಟಿಯ ಬಜೆಟ್: ಭಾಷಣದುದ್ದಕ್ಕೂ ಬಜೆಟ್ ಅನ್ನು ಸಮರ್ಥಿಸಿಕೊಂಡ ಸಚಿವೆ, “ಬಜೆಟ್ ಸಂಪೂರ್ಣವಾಗಿ ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ರೂಪುಗೊಂಡಿದೆ. ಬಡವರು, ದಲಿತರು, ಬುಡಕಟ್ಟು ಜನಾಂಗ, ವಿದ್ಯಾರ್ಥಿಗಳಿಗೆ ಇಲ್ಲಿ ಹೆಚ್ಚು ಪ್ರಾಮುಖ್ಯ ನೀಡಲಾಗಿದೆ. ದೇಶದ ಮಧ್ಯಮ ಮತ್ತು ಸುದೀರ್ಘ ಅವಧಿಯ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದ್ದೇವೆ’ ಎಂದು ಹೇಳಿದರು. ಬಜೆಟ್‌ನ ಮಹತ್ವ ಯೋಜನೆಗಳ ಅಂಕಿ-ಅಂಶ ಸಹಿತ ಸಾಕಷ್ಟು ವಿವರಣೆ ನೀಡಿದರು.
ಬಜೆಟ್‌ಗೆ ದೇವೇಗೌಡರ ಮೆಚ್ಚುಗೆ :
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ಗೆ ಮಾಜಿ ಪ್ರಧಾನಿ ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ದೇಶದ ಆರ್ಥಿಕ ವಲಯವನ್ನು ಕಾಪಾಡಿದೆ. ಸಂಕಷ್ಟದ ಸಮಯದಲ್ಲಿ ಅದು ಹಲವಾರು ಮಂದಿಗೆ ಉದ್ಯೋಗ ನೀಡಿದೆ. ಆದರೆ ಬಜೆಟ್‌ನಲ್ಲಿ ಅದಕ್ಕೆ ನೀಡಲಾಗಿರುವ ಮೊತ್ತವನ್ನು ಕಡಿಮೆ ಮಾಡಲಾಗಿದೆ ಎಂದರು. ಕೃಷಿ ಕ್ಷೇತ್ರಕ್ಕೆ ನೀಡಲಾಗಿರುವ ನೆರವು ಬಜೆಟ್‌ನಲ್ಲಿ ಕಡಿಮೆ. ಹೀಗಾಗಿ, ಅದು ಕೃಷಿ ವಲಯದಿಂದ ದೂರವಾಗುತ್ತಿದೆ ಎಂಬ ಭಾವನೆ ವ್ಯಕ್ತವಾಗಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿರು.
ಇಂದು ಬೆಳಗ್ಗೆ ಕಲಾಪ
ಲೋಕಸಭೆಯ ಕಲಾಪ ಶನಿವಾರ ಸಂಜೆ 4 ಗಂಟೆಗೆ ಬದಲಾಗಿ ಬೆಳಗ್ಗೆ 10 ಗಂಟೆಯಿಂದ ಶುರುವಾಗ ಲಿದೆ. ಈ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ. ರಾಜ್ಯಸಭೆಯ ಕಲಾಪ ಫೆ.8ಕ್ಕೆ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಬೆಳಗ್ಗಿನ ಅವಧಿಯಲ್ಲಿ ರಾಜ್ಯಸಭೆ, ಸಂಜೆಯ ಬಳಿಕ ಲೋಕಸಭೆ ಕಲಾಪ ನಡೆಸಲಾಗುತ್ತಿದೆ.
ಸಂಸದ ಸ್ಥಾನಕ್ಕೆ ಟಿಎಂಸಿ ತ್ರಿವೇದಿ ಗುಡ್‌ಬೈ ;
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಂಗಾಲ ಸಿಎಂ ಮಮತಾ ಬ್ಯಾನರ್ಜಿಗೆ ಮತ್ತೂಂದು ಹಿನ್ನಡೆ ಆಗಿದ್ದು, ಟಿಎಂಸಿ ಪ್ರಭಾವಿ ಮುಖಂಡ ಮತ್ತು ಸಂಸದ ದಿನೇಶ್ ತ್ರಿವೇದಿ ಅವರು ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಟಿಎಂಸಿಯ ಪ್ರಮುಖ ಮುಖವಾಗಿದ್ದ ದಿನೇಶ್ ತ್ರಿವೇದಿ, ಸಂಸತ್‌ನಲ್ಲಿ ಶುಕ್ರವಾರ ರಾಜೀನಾಮೆ ಘೋಷಿಸಿದ್ದಾರೆ. “ರಾಜಕೀಯದ ಎಬಿಸಿಡಿ ಗೊತ್ತಿಲ್ಲದವರು ನಮ್ಮ ಟಿಎಂಸಿಯ ನೇತಾರರಾಗಿದ್ದಾರೆ. ಅವರಿಗೆ ಯಾರ ಮಾತೂ ಕೇಳಿಸಿಕೊಳ್ಳುವಷ್ಟು ವ್ಯವಧಾನವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರಧಾನಿ ಮೋದಿಯವರನ್ನು ಶ್ಲಾ ಸಿ, “ಪಶ್ಚಿಮ ಬಂಗಾಲದಲ್ಲಿ ಈಗ ಹಿಂಸಾತ್ಮಕ ಘಟನೆಗಳು ಹೆಚ್ಚಾ ಗಿವೆ. ಅಲ್ಲಿ ಮಾತನಾಡಲು ಸಾಧ್ಯವಿಲ್ಲದ ಸ್ಥಿತಿ’ ಇದೆ ಎಂದು ಹೇಳಿದ್ದಾರೆ. 2019ರಲ್ಲಿ ಬರ್ರಾಕ್‌ಪೋರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಸಂಸದರಾಗಿದ್ದರು.
ಬಿಜೆಪಿಗೆ ತ್ರಿವೇದಿ?: ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ತ್ರಿವೇದಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ತ್ರಿವೇದಿ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. “ಯಾವುದಕ್ಕೂ ಮೊದಲು ನನ್ನೊಂದಿಗೆ ನಾನು ಸೇರುತ್ತೇನೆ’ ಎಂದಷ್ಟೇ ಹೇಳಿದ್ದಾರೆ. ಅವರು ಪಕ್ಷಕ್ಕೆ ಬರುವುದಿದ್ದೆ ಸ್ವಾಗತವಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ತಿಳಿಸಿದ್ದಾರೆ.
ಟಿಎಂಸಿ ಹೇಳುವುದೇನು?: “ತ್ರಿವೇದಿ ಅವರನ್ನು ಸಂಪರ್ಕಿಸಲು ಯತ್ನಿಸಿದೆವು. ಆದರೆ, ಅವರು ಬೇರೆಯವರೊಂದಿಗೆ ಮಾತಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅವರ ರಾಜೀನಾಮೆಯಿಂದ ಟಿಎಂಸಿಗೆ ಹಿನ್ನಡೆ ಆಗದು’ ಎಂದು ಪಕ್ಷದ ವಕ್ತಾರ ವಿವೇಕ್ ಗುಪ್ತಾ ತಿಳಿಸಿದ್ದಾರೆ.