Advertisement

‘ಅತ್ಯಾಚಾರಿಗಳನ್ನು ನಾನೇ ಗಲ್ಲಿಗೇರಿಸುವೆ’: ಶಾಗೆ ರಕ್ತದಲ್ಲಿ ಪತ್ರ ಬರೆದ ವರ್ತಿಕಾ ಸಿಂಗ್‌

09:55 AM Dec 17, 2019 | Hari Prasad |

ಲಕ್ನೋ/ಹೊಸದಿಲ್ಲಿ: ನಿರ್ಭಯಾ ಗ್ಯಾಂಗ್‌ ರೇಪ್‌ನ ಅಪರಾಧಿಗಳನ್ನು ಆದಷ್ಟು ಬೇಗ ಗಲ್ಲಿಗೇರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿರುವಂತೆಯೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಪತ್ರ ಬರೆದಿರುವ ಶೂಟರ್‌ ವರ್ತಿಕಾ ಸಿಂಗ್‌ ಅವರು, ‘ಅತ್ಯಾಚಾರಿಗಳನ್ನು ನೇಣುಗಂಬಕ್ಕೇರಿಸುವ ಅವಕಾಶವನ್ನು ನನಗೇ ನೀಡಿ’ ಎಂದು ಕೋರಿದ್ದಾರೆ.

Advertisement

ವಿಶೇಷವೆಂದರೆ, ವರ್ತಿಕಾ ಅವರು ಈ ಪತ್ರವನ್ನು ರಕ್ತದಲ್ಲೇ ಬರೆದಿದ್ದು, ಅದನ್ನು ಮಾಧ್ಯಮಗಳಿಗೂ ತೋರಿಸಿದ್ದಾರೆ. ಅತ್ಯಾಚಾರಿಗಳಿಗೆ ಮಹಿಳೆಯೇ ಶಿಕ್ಷೆ ನೀಡಿದ್ದಾರೆ ಎಂಬ ಸಂದೇಶ ವಿಶ್ವಕ್ಕೇ ರವಾನೆಯಾಗಬೇಕು. ಮಹಿಳಾ ಸಂಸದರು, ಕ್ರೀಡಾಪಟುಗಳು ನನ್ನ ಬೇಡಿಕೆಗೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ತಿಹಾರ್‌ ಜೈಲಧಿಕಾರಿಗಳು ಮಾತನಾಡಿ, ನಾಲ್ವರನ್ನು ಗಲ್ಲಿಗೇರಿಸುವ ಬಗ್ಗೆ ಸ್ವಯಂ ಪ್ರೇರಿತ ಮನವಿಗಳು ಬರುತ್ತಿವೆ ಎಂದಿದ್ದಾರೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಿಂದ ಎಸ್‌.ಸುಭಾಶ್‌ ಶ್ರೀನಿ ವಾಸನ್‌, ಮೀರತ್‌ ಜೈಲಲ್ಲಿ ಗಲ್ಲಿಗೇರಿಸುವ ವೃತ್ತಿಯ ಪವನ್‌ ಎಲ್ಲದ್‌ ಎಂಬಿಬ್ಬರು ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಶಿಕ್ಷೆಯ ಪ್ರಮಾಣ ಶೇ.32: ಬಲು ಭೀಕರ ನಿರ್ಭಯಾ ಅತ್ಯಾಚಾರ – ಹತ್ಯೆ ಘಟನೆ ನಡೆದು ಸೋಮವಾರಕ್ಕೆ 7 ವರ್ಷಗಳು ಪೂರ್ತಿಯಾಗಿವೆ. ಇದರ ಹೊರತಾಗಿಯೂ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಶೇ.32 ಮಾತ್ರ ಎಂಬ ವಿಚಾರವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ (ಎನ್‌ಸಿಆರ್‌ಬಿ) ಬಹಿರಂಗಪಡಿಸಿದೆ.

2017ರ ಮಾಹಿತಿ ಪ್ರಕಾರ, ಕೋರ್ಟ್‌ ಮೆಟ್ಟಿಲೇರಿದ 1,46,201 ಪ್ರಕರಣಗಳ ಪೈಕಿ 5,822 ಕೇಸುಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿವೆ. ಕಳವಳಕಾರಿ ಅಂಶವೆಂದರೆ ಶಿಕ್ಷೆಗೆ ಒಳಗಾಗುವ ಪ್ರಕರಣದ ಪ್ರಮಾಣ ಅಲ್ಪ ಮಾತ್ರದಲ್ಲಿ ಹೆಚ್ಚಳವಾಗಿದೆ.

Advertisement

ನಿಮಗೆ ಬೇಕಾದ್ದು ಬರೆದುಕೊಳ್ಳಿ: ನಾಲ್ವರು ಅತ್ಯಾಚಾರಿಗಳ ಕುಟುಂಬ ಇರುವ ಹೊಸದಿಲ್ಲಿಯ ಆರ್‌.ಕೆ.ಪುರಂ ವ್ಯಾಪ್ತಿಯ ಕೊಳೆಗೇರಿಯಲ್ಲಿ ಮೌನ ಆವರಿಸಿದೆ. ಜೈಲಲ್ಲಿರುವ ನಾಲ್ವರ ಪೈಕಿ ವಿನಯ ಶರ್ಮಾ ಎಂಬಾತನ ತಾಯಿ ಪತ್ರಕರ್ತರ ಜತೆಗೆ ಮಾತನ್ನೂ ಆಡಲಿಲ್ಲ. ನಿಮಗೆಲ್ಲಾ ಗೊತ್ತಲ್ಲವೇ? ಬೇಕಾದ ರೀತಿ ಬರೆದುಕೊಳ್ಳಿ. ಹೇಳಬೇಕಾಗಿರುವುದನ್ನೆಲ್ಲ ಹೇಳಿದ್ದೇವೆ. ಯಾರೂ ನಮ್ಮ ಅಳಲು ಕೇಳುವುದೇ ಇಲ್ಲ ಎಂದಿದ್ದಾರೆ.

ಮುಕೇಶ್‌ ಸಿಂಗ್‌ ಮತ್ತು ರಾಮ್‌ ಸಿಂಗ್‌ನ ತಾಯಿ ಮನೆ ಖಾಲಿ ಮಾಡಿ ರಾಜಸ್ಥಾನ ದಲ್ಲಿರುವ ತನ್ನ ಕುಟುಂಬ ಸೇರಿಕೊಂಡಿದ್ದಾರೆ. ಅವರು ಇರುವ ರವಿದಾಸ ಕಾಲನಿಯಲ್ಲಿ ‘ಶೀಘ್ರವೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗುತ್ತದೆ’ ಎಂಬ ಮಾತುಗಳು ಚರ್ಚೆಯಾಗುತ್ತಿವೆ.

ಆಸ್ಪತ್ರೆಯಲ್ಲಿ ಸ್ವಾತಿ ಮಲಿವಾಲ್‌
ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ 13 ದಿನಗಳಿಂದ ಆಹಾರ ತ್ಯಜಿಸಿ ಪ್ರತಿಭಟಿಸುತ್ತಿರುವ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ರ ಆರೋಗ್ಯ ರವಿವಾರ ಕ್ಷೀಣಿಸಿದೆ. ಹೀಗಾಗಿ, ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಮೂಲಕ ಅವರ ಪ್ರತಿಭಟನೆ ಮುಕ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next