ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ತಾನು ಘಟನೆ ನಡೆದ ಸಂದರ್ಭದಲ್ಲಿ ಬಾಲಾಪರಾಧಿಯಾಗಿದ್ದೆ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
20102ರಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ತಾನು ಅಪ್ರಾಪ್ತನಾಗಿದ್ದೆ ಎಂದು ಮನವಿ ಸಲ್ಲಿಸಿದ್ದ. ಈ ಅರ್ಜಿಯನ್ನು ಇಂದು ಹೈಕೋರ್ಟ್ ಬೆಳಗ್ಗೆ ವಿಚಾರಣೆ ನಡೆಸಿ ಅಪರಾಧಿ ಪವನ್ ಗುಪ್ತಾ ಪರ ವಕೀಲರಿಗೆ ಸೂಕ್ತ ದಾಖಲೆ ನೀಡಲು ಒಂದು ತಿಂಗಳ ಕಾಲಾವಕಾಶ ನೀಡಿ 2020ರ ಜನವರಿ 24ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.
ಈ ಬೆಳವಣಿಗೆಗೆ ನಿರ್ಭಯಾ ಪೋಷಕರು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ನಿರ್ಭಯಾ ಪರ ವಕೀಲರು ಕೋರ್ಟ್ ಗೆ ತಿಳಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಂದೂಡಿಕೆ ಆದೇಶವನ್ನು ಹಿಂಪಡೆದು ಇಂದೇ ಪ್ರಕರಣದ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿತ್ತು.
ನಂತರ ಕೋರ್ಟ್ ಮಾಸ್ಟರ್ ಪವನ್ ಕುಮಾರ್ ಪರ ವಕೀಲರಿಗೆ ಇಂದೇ ವಿಚಾರಣೆ ನಡೆಯಲಿದೆ ಎಂದು ಮಾಹಿತಿ ನೀಡಲು ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸಿದ ನಂತರ ದಿಢೀರನೆ ಸಂಪರ್ಕ ಕಡಿತಗೊಂಡು ನಂತರ ಸಂಪರ್ಕ ಸಾಧ್ಯವಾಗಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಪ್ರಕರಣದ ನಡೆದ ಸಂದರ್ಭದಲ್ಲಿ ದೋಷಿ ಬಾಲಾಪರಾಧಿ ಅಲ್ಲ ಎಂಬ ಪುರಾವೆಯನ್ನು ಪರಿಶೀಲಿಸಲಾಗಿದೆ. ಹೀಗಾಗಿ ಬಾಲಾಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಅಪರಾಧಿಗೆ ಗಲ್ಲುಶಿಕ್ಷೆಯನ್ನು ತಡೆಯುವ ವಕೀಲರ ತಂತ್ರಗಾರಿಕೆ ಎಂದು ಹೇಳಿದ್ದು, ಸಕಾಲಕ್ಕೆ ಕೋರ್ಟ್ ಗೆ ಆಗಮಿಸದ ಗುಪ್ತಾ ಪರ ವಕೀಲರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.