ಲಂಡನ್ : ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆಗೈದು ವಿದೇಶಕ್ಕೆ ಪಲಾಯನ ಮಾಡಿದ್ದ ಹಾಗೂ ಇಂದು ಬುಧವಾರ ಲಂಡನ್ ಪೊಲೀಸರಿಂದ ಬಂಧಿಸಲ್ಪಟ್ಟಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ನೀರವ್ ಮೋದಿಗೆ ಬೇಲ್ ಮಂಜೂರು ಮಾಡಲು ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿರಾಕರಿಸಿದೆ.
ನೀರವ್ ಮೋದಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವ ನ್ಯಾಯಾಲಯ, ಕೇಸಿನ ಮುಂದಿನ ವಿಚಾರಣೆಯನ್ನು ಮಾರ್ಚ್ 29ಕ್ಕೆ ನಿಗದಿಸಿದೆ.
ನೀರವ್ ಮೋದಿ ತನ್ನ ವಾದವನ್ನು ಕೋರ್ಟಿನಲ್ಲಿ ಮಂಡಿಸಲು ಸಮಯಾವಕಾಶ ಕೋರಿರುವುದಾಗಿ ಮೂಲಗಳು ತಿಳಿಸಿವೆ.
ನೀರವ್ ಮೋದಿ ಇಂದು ಪೊಲೀಸರ ಕೈಗೆ ಸಿಕ್ಕಿ ಬಿದ್ದದ್ದು ಒಬ್ಬ ಬ್ಯಾಂಕ್ ಕ್ಲರ್ಕ್ ನಿಂದಾಗಿ. ನೀರವ್ ಮೋದಿಯನ್ನು ಗುರುತಿಸಿದ ಆ ಬ್ಯಾಂಕ್ ಕ್ಲರ್ಕ್ ಒಡನೆಯೇ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದ.
ನೀರವ್ ಮೋದಿ ಬಂಧನಕ್ಕೆ ಈಗಾಗಲೇ ತಮ್ಮ ಕೈಯಲ್ಲಿ ಕೋರ್ಟ್ ವಾರೆಂಟ್ ಹಿಡಿದುಕೊಂಡಿದ್ದ ಲಂಡನ್ ಪೊಲೀಸರು, ಸಲೀಸಾಗಿ ಆತನನ್ನು ಬಂಧಿಸಿದರು.
ನೀರವ್ ಮೋದಿ ಪ್ರಾಮಾಣಿಕನಾಗಿರುವುದರಿಂದಲೇ ಆತ ಲಂಡನ್ ನಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದ ಎಂದು ಆತನ ವಕೀಲರು ಕೋರ್ಟಿಗೆ ತಿಳಿಸಿದರು.
ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ನೀರವ್ ಮೋದಿಯನ್ನು ಮಾರ್ಚ್ 29ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.