Advertisement

ಕ್ಯಾಟ್‌: ಮಣಿಪಾಲದ ನಿರಂಜನ ಪ್ರಸಾದ್‌ ರಾಷ್ಟ್ರಮಟ್ಟದ ಸಾಧನೆ 

06:23 AM Jan 07, 2019 | |

ಉಡುಪಿ: ರಾಷ್ಟ್ರಮಟ್ಟದ “ಕ್ಯಾಟ್‌’ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಮಣಿಪಾಲದ ನಿರಂಜನ ಪ್ರಸಾದ್‌ ದೇಶದಲ್ಲೇ ಅತ್ಯುನ್ನತ ಅಂಕಗಳನ್ನು ಪಡೆದ 11 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಈ ಸಾಧನೆ ಮಾಡಿದ ದ. ಭಾರತದ ಏಕೈಕ ವಿದ್ಯಾರ್ಥಿ ಇವರು. 

Advertisement

ನವೆಂಬರ್‌ನಲ್ಲಿ ಜರಗಿದ “ಕ್ಯಾಟ್‌’ ಪರೀಕ್ಷೆಯನ್ನು 2 ಲಕ್ಷ ಮಂದಿ ಉತ್ತರಿಸಿದ್ದರು. ಈ ಪೈಕಿ ಮಹಾರಾಷ್ಟ್ರದ 7, ಪ.ಬಂಗಾಲದ 2, ಬಿಹಾರ ಮತ್ತು ಕರ್ನಾಟಕದ ತಲಾ ಒಬ್ಬರು ಅತ್ಯುನ್ನತ ಅಂಕಗಳ ಈ ಸಾಧನೆ ಮಾಡಿದ್ದಾರೆ. 300 ಅಂಕಗಳ ಪರೀಕ್ಷೆ ಎರಡು ವಿಭಾಗಗಳಲ್ಲಿ ನಡೆಯುತ್ತದೆ. ಉತ್ತೀರ್ಣರಾದರೆ ಪ್ರತಿಷ್ಠಿತ ಐಐಎಂಗಳಿಗೆ ಪ್ರವೇಶ ಸುಲಭಸಾಧ್ಯ. 

ಮೂಡುಬಿದಿರೆ ಮೈಟ್‌ ಇನ್‌ಸ್ಟಿಟ್ಯೂಟ್‌ನ ಎಂಬಿಎ ವಿಭಾಗದ ಮುಖ್ಯಸ್ಥ, “ಉದಯವಾಣಿ’ ಅಂಕಣಕಾರ ಜಯದೇವ ಪ್ರಸಾದ ಮೊಳೆಯಾರ ಮತ್ತು ಮಾಹೆಯ ಪ್ರಾಧ್ಯಾಪಕಿ ಕೀರ್ತನಾ ಪ್ರಸಾದ್‌ ಪುತ್ರನಾಗಿರುವ ನಿರಂಜನ ಪ್ರಸಾದ್‌, ಬ್ರಹ್ಮಾವರದ ಲಿಟ್ಲ ರಾಕ್‌ನಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ. ಮದ್ರಾಸ್‌ ಐಐಟಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಅಂತಿಮ ವರ್ಷದ ವಿದ್ಯಾರ್ಥಿ. “ನಿರಂಜನ್‌ ಹೈಸ್ಕೂಲ್‌ನಲ್ಲಿದ್ದಾಗಲೇ ಎನ್‌ಟಿಎಸ್‌ಇನಲ್ಲಿ ಟಾಪ್‌ 100ನೇ ಸ್ಥಾನ ಪಡೆದಿದ್ದ. ಕೆವಿಪಿವೈ ಪರೀಕ್ಷೆಯಲ್ಲೂ ವಿಶೇಷ ಸಾಧನೆ ಮಾಡಿದ್ದ ಎನ್ನುತ್ತಾರೆ ಜಯದೇವ ಪ್ರಸಾದ ಮೊಳೆಯಾರ.

ಸಾಧನೆಗಳ ಮೇಲೆ ಸಾಧನೆ 
ಕ್ಯಾಟ್‌ ಪರೀಕ್ಷೆ ಸಾಧನೆಯಿಂದ ದೇಶದ ಪ್ರತಿಷ್ಠಿತ ಐಐಎಂನಲ್ಲಿ ಪ್ರವೇಶ ಪಡೆಯುವುದು ಸುಲಭವಾಗಲಿದೆ. ನಿರಂಜನ ಸಿಇಟಿಯಲ್ಲಿ 29ನೇ ರ್‍ಯಾಂಕ್‌, ಮಾಹೆಯ ಸಿಇಟಿಯಲ್ಲಿ 13ನೇ ರ್‍ಯಾಂಕ್‌ ಪಡೆದಿದ್ದ. ಜಿಆರ್‌ಇ (ಗ್ರಾಜುಯೇಟ್‌ ರೆಕಾರ್ಡ್‌ ಎಕ್ಸಾಮಿನಿಷೇನ್‌) ಪರೀಕ್ಷೆಯಲ್ಲಿ ಶೇ. 99.9 ಅಂಕಗಳನ್ನು ಗಳಿಸಿದ್ದ. ಅಮೆರಿಕದ ಉನ್ನತ ವಿವಿ ಪ್ರವೇಶಾವಕಾಶಗಳೂ ನಿರಂಜನ್‌ ಮುಂದಿವೆ. ಜಿಆರ್‌ಇನಲ್ಲಿ 340ರಲ್ಲಿ 338 ಅಂಕ ಗಳಿಸಿದ್ದ.
ಜಯದೇವ ಪ್ರಸಾದ ಮೊಳೆಯಾರ ಅವರೂ ಇದೇ ರೀತಿಯ ಪರೀಕ್ಷೆ ಬರೆದು 1989ರಲ್ಲಿ ಅಹಮದಾಬಾದ್‌ನ ಐಐಎಂನಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ಸಮಯ ನಿರ್ವಹಣೆ, ವಿಷಯ ಜ್ಞಾನ ಮುಖ್ಯ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಬೇಕಾದರೆ ಸಮಯ ನಿರ್ವಹಣೆ ಮತ್ತು ವಿಷಯ ಜ್ಞಾನ ಎರಡೂ ಮುಖ್ಯ. ಎಲ್ಲರಿಗೂ ಪರೀಕ್ಷೆ ಬರೆಯುವ ಒಂದೊಂದು ಶೈಲಿ ಇರುತ್ತದೆ. ನಾನು ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸುತ್ತೇನೆ. ಆಮೇಲೆ ಬೇರೆ ಪ್ರಶ್ನೆಗಳು. ಜಿಆರ್‌ಇನಲ್ಲಿ ಉತ್ತಮ ಅಂಕಗಳು ಬಂದಿರುವುದರಿಂದ ಮತ್ತು “ಕ್ಯಾಟ್‌’ನಲ್ಲೂ ಟಾಪರ್‌ ಆಗಿರುವ ಕಾರಣ ಅಮೆರಿಕ ವಿವಿಯಲ್ಲಿ ತಾಂತ್ರಿಕ ಶಿಕ್ಷಣ “ಆಪರೇಷನ್‌ ರಿಸರ್ಚ್‌’ ಅಥವಾ ಐಐಎಂನಲ್ಲಿ ಎಂಬಿಎ ಪೂರೈಸುವುದೋ ಎಂದು ನಿರ್ಧರಿಸಿಲ್ಲ. ತಂದೆ, ತಾಯಿ, ಸೀನಿಯರ್‌ಗಳ ಜತೆ ಚರ್ಚಿಸಿ ನಿರ್ಖರಿಸುವೆ. ಬೆಂಗಳೂರು ಸಹಿತ ಐಐಎಂಗಳಿಂದ ಕರೆ ಬರುವ ಸಾಧ್ಯತೆ ಇದೆ ಎಂದರು  ನಿರಂಜನ್‌ ಪ್ರಸಾದ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next