Advertisement

ಸಹಕಾರಿ ರತ್ನ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ನಿರಂಜನ್‌ ಬಾವಂತಬೆಟ್ಟು ನಿಧನ

11:54 PM Feb 12, 2024 | Team Udayavani |

ಉಪ್ಪಿನಂಗಡಿ/ಬೆಳ್ತಂಗಡಿ: ಹಿರಿಯ ಸಹಕಾರಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ (ಎಸ್‌ಸಿಡಿಸಿಸಿ ಬ್ಯಾಂಕ್‌) ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರು, ಸಹಕಾರ ರತ್ನ ಬಿ. ನಿರಂಜನ್‌ ಬಾವಂತಬೆಟ್ಟು (76) ಅವರು ಫೆ. 12ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಬಾವಂತಬೆಟ್ಟು ನಿವಾಸಿಯಾಗಿರುವ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು 1987ರಿಂದ ಈವರೆಗೆ ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿದ್ದರು. ಅವರು ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆರಂಭಗೊಂಡ 1983ರಿಂದ ಸುದೀರ್ಘ‌ 41 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಾಖಲೆ ಅವರದ್ದಾಗಿದೆ. ದ.ಕ. ಜಿ.ಪಂ. ಸದಸ್ಯರಾಗಿ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಡಾ| ಡಿ. ವೀರೇಂದ್ರ ಹೆಗ್ಗಡೆ ಸಂತಾಪ
ಹಿರಿಯ ಸಹಕಾರಿ ಧುರೀಣ ಬಾವಂತಬೆಟ್ಟು ನಿರಂಜನ್‌ ಅವರ ನಿಧನದ ಸುದ್ದಿ ತಿಳಿದು ವಿಷಾದವಾಯಿತು. ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಹಕಾರಿ ರಂಗದಲ್ಲಿ ಅವರು ಉತ್ತಮ ಸೇವೆ-ಸಾಧನೆ ಮಾಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುವುದಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.

ಡಾ| ಎಂ.ಎನ್‌.ಆರ್‌. ಸಂತಾಪ
ಹಿರಿಯ ಸಹಕಾರಿಯಾಗಿ, ಆದರ್ಶ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದ ನಿರಂಜನ್‌ ಅವರು ಸರಳ ಸಜ್ಜನ ವ್ಯಕ್ತಿ. ಎಲ್ಲರಿಗೂ ಆತ್ಮೀಯರಾಗಿದ್ದ ಅವರು ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಸುಮಾರು 37 ವರ್ಷಗಳಿಂದ ನಿರ್ದೇಶಕರಾಗಿದ್ದು ಬ್ಯಾಂಕಿನ ಬಲವರ್ಧನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ರಂಗದಲ್ಲಿ ಅಜಾತಶತ್ರು ಆಗಿದ್ದ ಅವರ ನಿಧನಕ್ಕೆ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸಂತಾಪ ಸೂಚಿಸಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ಮಾಜಿ ಶಾಸಕ ಕೆ. ವಸಂತ ಬಂಗೇರ, ವಿ.ಪ.ಸದಸ್ಯರಾದ ಕೆ. ಹರೀಶ್‌ ಕುಮಾರ್‌, ಕೆ.ಪ್ರತಾಪಸಿಂಹ ನಾಯಕ್‌, ಮಾಜಿ ಸಚಿವ ಕೆ. ಗಂಗಾಧರ ಗೌಡ, ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಉಪಾಧ್ಯಕ್ಷರಾದ ಎಸ್‌.ಬಿ .ಜಯರಾಮ ರೈ, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ ಡಿ. ಮತ್ತು ಸಿಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟು ಮುಚ್ಚಿ ಸಂತಾಪ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಕರಾಯ ಗ್ರಾಮದ ಕಲ್ಲೇರಿ ಪೇಟೆ ಸಹಿತ ಸಹಕಾರಿ ಸಂಸ್ಥೆಯವರು, ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next