Advertisement

UV Fusion: ಶಾಂಭವಿಯ ಮಡಿಲಲ್ಲಿ

03:52 PM May 09, 2024 | Team Udayavani |

ಕರಾವಳಿ… ನದಿ, ಸಾಗರ, ಸಮುದ್ರಗಳೊಡಗೂಡಿದ ಸೃಷ್ಟಿಯ ಅದ್ಭುತ. ಕಡಲಿನ ಪ್ರಶಾಂತ ವಾತಾವರಣ ಪರಿಸರ ಪ್ರೇಮಿ ಮನಸಿಗೆ ಮುದ ನೀಡುತ್ತದೆ. ನದಿಯ ಪ್ರಶಾಂತತೆ ನೋಡುಗರ ಕಣ್ಣಿಗೆ ತಂಪೆರೆಯುತ್ತದೆ. ಇಳಿ ಸಂಜೆಯ ನದಿ ತೀರದ ಸುಂದರ ನೋಟ ಪ್ರವಾಸಿಗರಿಗೆ ಅಚ್ಚು ಮೆಚ್ಚು. ಇಲ್ಲಿನ ಒಂದೊಂದು ನದಿಗಳು ಒಂದೊಂದು ವೈಶಿಷ್ಟ್ಯ. ಇತ್ತೀಚೆಗೆ ಕರಾವಳಿ ಜನ ಭೇಟಿ ನೀಡಲು ಹೆಚ್ಚು ಇಷ್ಟ ಪಡುವ ನದಿಯೇ “ಶಾಂಭವಿ’.

Advertisement

ಶಾಂಭವಿ ನದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಈ ನದಿಯ ಉಗಮ ಸ್ಥಾನ. ಶಾಂಭವಿ ನದಿಯು ಸಿಹಿ, ಉಪ್ಪು ನೀರುಗಳ ಮಿಶ್ರಣ. ಆ ಕಾರಣಕ್ಕಾಗಿ ಇಲ್ಲಿನ ನದಿ ಮೀನುಗಳಿಗೆ ಬೇಡಿಕೆ ತುಸು ಹೆಚ್ಚು. ಹಲವರ ಪ್ರಕಾರ ಈ ನದಿಗೆ ಮೀನುಗಳು ಮರಿ ಇಡುವ ಉದ್ದೇಶಕ್ಕಾಗಿ ಸಮುದ್ರದಿಂದ ಬರುತ್ತವೆ.

ಕ್ಯಾವಜ್‌, ಮುಡಾವ್‌, ಪಾರೆ, ಕಾಣೆ, ಏರಿ, ತೊರಕೆ, ಸಿಗಡಿ ಸೇರಿದಂತೆ ನೂರಕ್ಕೂ ಹೆಚ್ಚು ಮೀನು ಸಂಕುಲ ಈ ನದಿಯಲ್ಲಿ ಕಂಡು ಬರುತ್ತದೆ. ಇಲ್ಲಿ ಕೇವಲ ಮೀನುಗಳು ಮಾತ್ರ ಅಲ್ಲ. ಮರ್ವಾಯಿ, ಕಲ್ಲಾ ಎನ್ನುವ ಚಿಪ್ಪು ರೂಪದ ಆಹಾರ ಪದಾರ್ಥಗಳು ಕೂಡ ಸಿಗುತ್ತೆ. ಇಲ್ಲಿನ ಮೀನುಗಳಿಗೆ ಮಳೆಗಾಲದ ಸಮಯದಲ್ಲಿ ಮಾರುಕಟ್ಟೆ ಬೇಡಿಕೆ ಹೆಚ್ಚು. ಹಾಗಾಗಿ ಶಾಂಭವಿ ತೀರದ ಮೀನುಗಾರರಿಗೆ ಶಾಂಭವಿ ನದಿ ಅನ್ನದಾತ ಎಂದೇ ಹೇಳಬಹುದು.

ದಿನದಲ್ಲಿ 3-4 ಬಾರಿ ಇಲ್ಲಿನ ನೀರು ಇಳಿಕೆಯಾಗುತ್ತದೆ. ಈ ಸಮಯದಲ್ಲಿ ಶಾಂಭವಿ ನದಿ ಮತ್ತೆ ನಂದಿನಿ ನದಿ ಸಂಗಮವಾಗುವ ಸ್ಥಳದಲ್ಲಿ ಮರುವಾಯಿ ಹೆಕ್ಕಲೆಂದೇ ಒಂದಷ್ಟು ಜನ ಆಗಮಿಸುತ್ತಾರೆ. ಈ ನದಿ ಸಮುದ್ರಕ್ಕೆ ಸೇರುವ 7ಗಂಟೆಯ ಹೊತ್ತು ಬಹು ಅಪಾಯಕಾರಿ. ಆ ಸಮಯದಲ್ಲಿ ನದಿಗೆ ಇಳಿಯುವ ಜನರ ಸಂಖ್ಯೆ ಕೂಡ ಕಮ್ಮಿ.

Advertisement

ಇಷ್ಟೇ ಅಲ್ಲ ಈ ನದಿಯಲ್ಲಿ ಮೀನು ಸಾಕಾಣಿಕೆ ಮತ್ತು ಸಿಗಡಿ ಸಾಕಾಣಿಕೆ ಕೂಡ ನಡೆಯುತ್ತೆ. ಬೋಟಿಂಗ್‌, ಸರ್ಫಿಂಗ್‌ ನಡೆಯುತ್ತದೆ. ಮೂಲ್ಕಿಯ ಕೊಳಚಿ ಕಂಬಳ ಬಳಿ ಮಂತ್ರ ಸರ್ಫ್ ಕ್ಲಬ್‌ ಮತ್ತು ಕಯಕ ಬಾಯ್ ಎಂಬ ಸೆಂಟರ್‌ಗಳಿವೆ.

ಪ್ರಾಕೃತಿಕ ಸೌಂದರ್ಯದ ಜತೆಗೆ ಶಾಂಭವಿ ನದಿಗೆ ಪೌರಾಣಿಕ ಹಿನ್ನೆಲೆ ಕೂಡ ಇದೆ. ಈ ನದಿಗೆ ಹತ್ತಿರದಲ್ಲಿರುವ ಬಪ್ಪನಾಡು ದೇವಸ್ಥಾನಕ್ಕೆ ಮತ್ತೆ ನದಿಗೆ ನಂಟಿದೆ. ಬಪ್ಪಬ್ಯಾರಿಗೆ ದೇವಿ ಲಿಂಗದ ರೂಪದಲ್ಲಿ ಸಿಕ್ಕಿದ್ದು ಇದೇ ನದಿಯಿಂದ ಎಂಬ ಐತಿಹ್ಯವಿದೆ.

ಒಮ್ಮೆ ಬನ್ನಿ… ಮೀನು ಪ್ರಿಯರಾಗಿ, ಪ್ರಕೃತಿ ಪ್ರೇಮಿಗಳಾಗಿ, ನದಿ ತೀರದ ನಿಜ ಸೌಂದರ್ಯ ಸವಿಯಲು ಶಾಂಭವಿ ನದಿತೀರಕ್ಕೆ ಭೇಟಿಕೊಡಿ.

- ಕಾರ್ತಿಕ್‌ ಮೂಲ್ಕಿ

ಎಸ್‌.ಡಿ.ಎಂ. ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next