ಕಲಬುರಗಿ: ನೀರಾ ಮೇಲಿನ ನಿಷೇಧ ಹಿಂದೆ ಪಡೆದು ಸರ್ಕಾರ ನೀರಾ ಇಳಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನೀರಾ ಮೂರ್ತೆದಾರರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ನೀರಾ ಮೂರ್ತೆದಾರರು ತಲತಲಾಂತರದಿಂದ ನೀರಾ ಇಳಿಸಿ ಮಾರಾಟ ಮಾಡಿ ಉಪಜೀವನ ಸಾಗಿಸುತ್ತಾ ಬಂದಿದ್ದಾರೆ.
ರಾಜ್ಯ ಸರ್ಕಾರ ನೀರಾ ಮೇಲೆ ನಿಷೇಧ ಹೇರಿದ ನಂತರ ಅವರ ಬದುಕು ಅತಂತ್ರವಾಗಿದ್ದು, ಉದ್ಯೋಗಕ್ಕಾಗಿ ಪಕ್ಕದ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ. ರಾಜ್ಯ ಸರ್ಕಾರ 2004ರಿಂದ ನೀರಾ ಮೇಲಿನ ನಿಷೇಧ ಹಿಂದೆ ಪಡೆಯುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರು ಯಾವ ಪ್ರಯೋಜನವಾಗಿಲ್ಲ.
ಕಾರಣ ಸರ್ಕಾರ ಕೂಡಲೇ ನೀರಾ ಮೇಲಿನ ನಿಷೇಧ ಹಿಂದೆ ಪಡೆದು ನೀರಾ ಮೂರ್ತೆದಾರರ ಜೀವನ ಸುಧಾರಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ನೀರಾ ನೀತಿ ಪ್ರಕಟಿಸಿದೆ. ಆದರೂ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈಚಲು ಮರಗಳಿದ್ದರೂ ನೀರಾ ಇಳಿಸಲು ಅನುಮತಿ ನೀಡುತ್ತಿಲ್ಲ.
ಈ ಬೇಧಭಾವ ಏಕೆ? ಕೆಲವರು ರಾಸಾಯನಿಕ ಬೆರೆಸಿದ ನೀರಾ ಮಾರಾಟ ಮಾಡುತ್ತಾ ಜನರನ್ನು ವಂಚಿಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ನೀರಾ ಇಳಿಸುವುದನ್ನು ಕುಲಕಸುಬು ಮಾಡಿಕೊಂಡ ಲಕ್ಷಾಂತರ ಜನ ಮೂರ್ತೆದಾರರ ಹೊಟ್ಟೆ ಮೇಲೆ ಬರ ಎಳೆಯುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸರ್ಕಾರ ನಡೆಸಿದ ಸಮೀಕ್ಷೆಯಂತೆ ಸೇಡಂ ತಾಲೂಕಿನಲ್ಲಿ ಸುಮಾರು 3.41 ಲಕ್ಷ ಈಚಲು ಗಿಡಗಳಿವೆ. ಇನ್ನು ಚಿತ್ತಾಪುರ, ಚಿಂಚೋಳಿ ತಾಲೂಕು ಸೇರಿದಂತೆ ಯಾದಗಿರಿ ಹಾಗೂ ರಾಯಚೂರ ಜಿಲ್ಲೆಗಳಲ್ಲಿ ಈಚಲು ಗಿಡಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅವುಗಳಿಂದ ನೀರಾ ಇಳಿಸಲು ಅನುಮತಿ ನೀಡುವಂತೆ ಒತ್ತಾಯಿಸಿದರು.
ಮಾಜಿ ಸಚಿವ ಎಸ್.ಕೆ. ಕಾಂತಾ, ಜಿಪಂ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಬಸಯ್ಯ ಗುತ್ತೇದಾರ, ನೀರಾ ಮೂರ್ತೆದಾರರ ಹೋರಾಟ ಸಮಿತಿ ಸೇಡಂ ಘಟಕದ ಅಧ್ಯಕ್ಷ ಶರಣಯ್ಯಗೌಡ ದುಗನೂರು, ಕಾರ್ಯದರ್ಶಿ ಮಹೇಶ ಎಸ್. ಗೌಡ, ನರಸಯ್ಯ ಗೌಡ ಕೋಡ್ಲಾಸೇರಿದಂತೆ ಮಹಿಳೆಯರು ಹಾಗೂ ನೀರಾ ಮೂರ್ತೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.