ಚಿಕ್ಕೋಡಿ: ನಿಪ್ಪಾಣಿ ತಾಲೂಕಾ ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ದಿ.11 ರಂದು ಗಡಿ ಭಾಗದ ಭೋಜ ಗ್ರಾಮದಲ್ಲಿ ನಡೆಯಲಿದೆ ಎಂದು ನಿಪ್ಪಾಣಿ ತಾಲೂಕಾ ಕಸಾಪ ಅಧ್ಯಕ್ಷ ಈರಣ್ಣ ಶಿರಗಾವಿ ತಿಳಿಸಿದರು.
ಭೋಜ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಜರಾಯಿ ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಗಡಿ ಭಾಗದಲ್ಲಿ ಒಂದು ದಿನ ಅದ್ದೂರಿಯಾಗಿ ಅಕ್ಷರ ಜಾತ್ರೆ ನಡೆಯಲಿದೆ. ಈ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಾಹಿತಿ ಅದ್ವಯಾನಂದ ಗಳತಗೆ ವಹಿಸಲಿದ್ದಾರೆ. ಖ್ಯಾತ ಚಿತ್ರ ನಟ, ನಿರ್ದೇಶಕ ಟಿ.ಎಸ್.ನಾಗಾಭರಣ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ, ಖಡಕಲಾಟದ ಶವಬಸವ ಸ್ವಾಮೀಜಿ, ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಜರು ಸಾನಿಧ್ಯವನ್ನು ವಹಿಸಲಿದ್ದಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿ ಮಾತನಾಡಲಿದ್ದಾರೆ. ರಾಜ್ಯಸಭೆ ಮಾಜಿ ಸದಸ್ಯ ಡಾ,ಪ್ರಭಾಕರ ಕೋರೆ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಚಿವೆ ಶಶಿಕಲಾ ಜೊಲ್ಲೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮುಂತಾದವರು ಆಗಮಿಸಲಿದ್ದಾರೆ ಎಂದರು.
ರವಿವಾರ ಬೆಳಗ್ಗೆ 7.30ಕ್ಕೆ ತಹಶೀಲ್ದಾರ್ ಪ್ರವೀಣ ಕಾರಂಡೆ ರಾಷ್ಟ್ರಧ್ವಜಾರೋಹಣ ನೇರವೇರಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಪರಿಷತ್ ಧ್ವಜಾರೋಹಣ ನೇರವೇರಿಸಲಿದ್ದಾರೆ. ಕಸಾಪ ನಿಪ್ಪಾಣಿ ಅಧ್ಯಕ್ಷ ಈರಣ್ಣ ಶಿರಗಾವಿ ನಾಡ ಧ್ವಜಾರೋಹಣ ನೇರವೇರಿಸಲಿದ್ದಾರೆ. ನಂತರ ಸರ್ವಾಧ್ಯಕ್ಷರ ಭವ್ಯ ಸ್ವಾಗತ, ಕನ್ನಡಾಂಬೆ ಶ್ರೀ ಭುವನೇಶ್ವರಿ ದೇವಿ ಪೂಜೆ ನಡೆಯಲಿದೆ. ನಂತರ 300 ಅಡಿ ಉದ್ದ ಕನ್ನಡ ಭಾವುಟ ಮೆರವಣಿಗೆ ನಡೆಯಲಿದೆ ಎಂದರು.
12 ಗಂಟೆಗೆ ಕನ್ನಡ ಕನ್ನಡಿಗ ಕರ್ನಾಟಕ ಚಿಂತನ ಗೋಷ್ಠಿ, ಮಧ್ಯಹ್ನ ಕವಿಗೋಷ್ಠಿ ನಡೆಯಲಿದೆ. ಸಮ್ಮೇಳನ ಸರ್ವಾಧ್ಯಕ್ಷರೊಂದಿಗೆ ಸಂವಾದ, ಸಾಧಕರ ಸನ್ಮಾನ, ಸಮಾರೋಪ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಬ್ಯಾಂಕಿನ ಅಧ್ಯಕ್ಷ ಜಯಾನಂದ ಜಾಧವ, ಅಪ್ಪಾಸಾಹೇಬ ಜೊಲ್ಲೆ, ನಿಪ್ಪಾಣಿ ಕಸಾಪ ಕೋಶಾಧ್ಯಕ್ಷ ಶಿವಾನಂದ ಪುರಾಣಿಕಮಠ, ಗೌರವ ಕಾರ್ಯದರ್ಶಿ ಮಿಥುನ ಅಂಕಲಿ, ಸರೋಜನಿ ಸಮಾಜೆ ಮುಂತಾದವರು ಇದ್ದರು.