Advertisement

ನಿಪ: ಜಾಗೃತಿ ಮೂಡಿಸಲು ಸೂಚನೆ

02:57 PM May 27, 2018 | |

ವಿಜಯಪುರ: ನಿಪ ವೈರಾಣು ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ನಿಪ ವೈರಾಣು ಜ್ವರ ಹರಡಲಿದ್ದು ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಿಪ ವೈರಾಣು ರೋಗ ತಡೆಗಟ್ಟುವ ಚಾಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಪ ವೈರಾಣು ಜ್ವರ ಹೊಸದಾಗಿ ಕಂಡು ಬಂದ ವೈರಾಣು ಸೋಂಕಾಗಿದ್ದು, ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳೂ ಕಚ್ಚಿದ ಹಣ್ಣು ಹಂಪಲು ಸೇವಿಸುವುದರಿಂದ ಇತರೆ ಪ್ರಾಣಿಗಳಿಗೂ ಈ ಸೋಂಕು ಹರಡುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ತಿಳಿಸಿದ ಅವರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಈ ಕುರಿತು ಸೂಕ್ತ ಅರಿವು ಮೂಡಿಸುವ ಜೊತೆಗೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಲಕ್ಕಣ್ಣವರ ಮಾತನಾಡಿ, ನಿಪ ವೈರಾಣು ಜ್ವರ ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಭಾದಿಸುತ್ತದೆ. ಮಲೇಷಿಯಾ, ಸಿಂಗಾಪುರ ಹಾಗೂ ಬಾಂಗ್ಲಾ ದೇಶಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಹರಡುತ್ತದೆ. ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹರಡುತ್ತದೆ. ಕಾರಣ ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಶೇಂದಿ, ನೀರು ಕುಡಿಯಬಾರದೆಂದು ತಿಳಿಸಿದರು.

ಅನಾರೋಗ್ಯದ ಹಂದಿ ಮತ್ತು ಪ್ರಾಣಿಗಳೊಂದಿಗೆ ನೇರ ಸಂಪರ್ಕ ತಪ್ಪಿಸಬೇಕು. ಬಾವಲಿಗಳ ಪ್ರವೇಶವನ್ನು ತಪ್ಪಿಸಲು ತೆರೆದ ಬಾವಿಗಳಿಗೆ ಜಾಲರಿಯನ್ನು ಅಳವಡಿಸಬೇಕು. ಕೈಗಳನ್ನು ಸಂಪೂ ರ್ಣವಾಗಿ ಶುದ್ಧವಾಗಿಟ್ಟುಕೊಳ್ಳಬೇಕು. ನಿಪ ವೈರಸ್‌ ಸೋಂಕಿತ ರೋಗಿಯು ಉಪಯೋಗಿಸಿದ ಬಟ್ಟೆ ಮತ್ತು ಇತರ ಪದಾರ್ಥಗಳನ್ನು ಬಳಸಬಾರದು.

Advertisement

ಸೋಂಕಿತ ರೋಗಿಯು ಕನಿಷ್ಠ 15 ದಿನಗಳು ಮನೆಯಲ್ಲಿ ಮತ್ತು ಚಿಕಿತ್ಸೆ ಅವಯಲ್ಲಿ ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ನೋಡಿಕೊಳ್ಳಬೇಕು. ಬಾವಲಿಗಳಿರುವ ಬಾವಿಯ ನೀರನ್ನು ಕುದಿಸದೇ ಉಪಯೋಗಿಸಬಾರದು. ಸೋಂಕಿತ ರೋಗಿಗಳನ್ನು ನಿರ್ವಹಿಸುವಾಗ ಆಸ್ಪತ್ರೆಯ ಸಿಬ್ಬಂದಿ ವಿಶೇಷ ಆರೈಕೆ, ಬಳಕೆ, ಮುಖವಾಡ ಮತ್ತು ಕೈಗವಚಗಳನ್ನು ಧರಿಸಿರಬೇಕು.

ಎಲಿಸಾ ಆಧಾರಿತ ರಕ್ತ ಪರೀಕ್ಷೆಯಿಂದ ನಿಪ ವೈರಾಣುಗಳನ್ನು ಗುರುತಿಸಬಹುದಾಗಿದ್ದು, ಆರ್‌ ಟಿಪಿಸಿಆರ್‌ ಪರೀಕ್ಷೆಯಿಂದ ಈ ರೋಗವನ್ನು ದೃಢಪಡಿಸಲಾಗುತ್ತದೆ. ಜ್ವರ, ತಲೆನೊವು, ತಲೆ ಸುತ್ತುವಿಕೆ, ದಿಗ್ಭ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ಹಾಗೂ ಸಾವು ಸಂಭವಿಸಬಹುದಾದ ರೋಗ ಲಕ್ಷಣಗಳು ಇದಾಗಿದ್ದು ಕೇರಳ ರಾಜ್ಯದಲ್ಲಿ 16ಕ್ಕೂ ರೋಗಿಗಳ ನಿಪ ವೈರಾಣು ದೃಢಪಡಿಸಲಾಗಿದ್ದು, 12 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ: ನಿಪ ವೈರಾಣು ಜ್ವರಕ್ಕೆ ಸಂಬಂಧಿಸಿದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು
ಕೈಗೊಳ್ಳಲಾಗಿದೆ. ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ರ್ಯಾಪಿಡ್‌ ರೆಸ್ಪಾನ್ಸ್‌ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಈ ರೋಗದ ಕುರಿತು ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲಿ ಸೂಕ್ತ ಜಾಗೃತಿ ಮೂಡಿಸಲಾಗಿದೆ.

ಜಿಲ್ಲೆಯ ಎಲ್ಲ ವೈದ್ಯಕೀಯ, ಎಂಜಿನಿಯರಿಂಗ್‌ ಹಾಗೂ ನರ್ಸಿಂಗ್‌ ಕಾಲೇಜ್‌ಗಳಲ್ಲಿ ಕೇರಳ ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಇತರೆ ವಿದ್ಯಾರ್ಥಿಗಳಲ್ಲಿ ಈ ಕುರಿತು ಸೂಕ್ತ ಎಚ್ಚರ ವಹಿಸುವಂತೆ ಸುತ್ತೋಲೆ ಸಹ ಹೊರಡಿಸಲಾಗುತ್ತಿದೆ. ಜನಸಾಮಾನ್ಯರು ಸಹ ಈ ಕುರಿತು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು. ಹೆಚ್ಚಿನ ಮಾಹಿತಿಗಾಗಿ 24×7 ಉಚಿತ ಆರೋಗ್ಯ ಸಹಾಯವಾಣಿ 104ಗೆ ಕರೆ ಮಾಡಬಹುದು ಎಂದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಸಂಪತ್‌ ಗುಣಾರಿ ಡೆಂಘೀ ಜ್ವರ ನಿಯಂತ್ರಣ ಕುರಿತ ಅವಶ್ಯಕ ಮಾಹಿತಿ ನೀಡಿದರು. ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಚವ್ಹಾಣ, ಡಾ| ಗೊಲಗೇರಿ, ಡಾ| ಜ್ಯೋತಿ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next