ಲಕ್ನೋ : ಉಳುವ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರು ಗುಂಡೇಟಿಗೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಇಲ್ಲಿನ ಸೋನ್ ಭದ್ರಾ ಜಿಲ್ಲೆಯ ಮುರಾಟಿಯಾ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಇದೇ ಗ್ರಾಮದ ಗ್ರಾಮ ಪ್ರಧಾನ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
ಉಳುವ ಭೂಮಿಗೆ ಸಂಬಂಧಿಸಿದಂತೆ ಆ ಗ್ರಾಮದ ಗ್ರಾಮ ಪ್ರಧಾನ್ ಮತ್ತು ಗ್ರಾಮಸ್ಥರ ಮಧ್ಯೆ ಇದ್ದ ವಿವಾದ ಜಗಳಕ್ಕೆ ತಿರುಗಿ ಒಂದು ಹಂತದಲ್ಲಿ ವಿಕೋಪಕ್ಕೆ ಹೋಯಿತು. ಈ ಸಂದರ್ಭದಲ್ಲಿ ಆರೋಪಿಯು ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆಯಲ್ಲಿ ಆರು ಜನ ಪುರುಷರು ಮತ್ತು ಮೂರು ಜನ ಮಹಿಳೆಯರು ಮೃತಪಟ್ಟಿದ್ದಾರೆ.
ಜಿಲ್ಲೆಯ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಸುದ್ದಿ ಸಂಸ್ಥೆಗೆ ನೀಡಿರುವ ಮಾಹಿತಿಯಂತೆ ಘಟನೆ ನಡೆದ ತಕ್ಷಣ ಗಂಡೇಟಿಗೆ ಒಳಗಾದವರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಅವರಲ್ಲಿ ಕೆಲವರು ಗಾಯಗೊಂಡಿದ್ದರು ಹಾಗೂ ಆರು ಜನ ಮೃತಪಟ್ಟಿದ್ದರು. ಘಟನಾ ಸ್ಥಳದಿಂದ ಗುಂಡೇಟಿಗೆ ಒಳಗಾದ ಎಲ್ಲರನ್ನು ಆಸ್ಪತ್ರೆಗೆ ಕರೆತಂದ ಬಳಿಕವಷ್ಟೇ ಸಾವಿನ ನಿಖರ ಸಂಖ್ಯೆ ತಿಳಿದುಬರಲು ಸಾಧ್ಯ ಎಂಬುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಘಟನೆಯನ್ನು ಖುದ್ದು ಪರಿಶೀಲಿಸುವಂತೆ ಮುಖ್ಯಮಂತ್ರಿಯವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆಯನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಛೇರಿಯ ಮೂಲಗಳು ತಿಳಿಸಿವೆ. ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲು ಸೂಚನೆ ನೀಡುವಂತೆಯೂ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.