ವಾರದಿಂದ ವಾರಕ್ಕೆ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಅದರಲೂ ಮೇ ಮೊದಲ ವಾರದಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಬಿಡುಗಡೆಯ ಅಬ್ಬರ ಜೋರಾಗಿದೆ.
ಮೇ ತಿಂಗಳಿನಲ್ಲಿ ಕನ್ನಡದಲ್ಲಿ ಯಾವುದೇ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳ ಬಿಡುಗಡೆ ಇಲ್ಲದಿರುವುದರಿಂದ, ಕಳೆದ ಎರಡು- ಮೂರು ವರ್ಷಗಳಿಂದ ಬಿಡುಗಡೆಗಾಗಿ ಎದುರು ನೋಡುತ್ತಿದ್ದ ಬಹುತೇಕ ಹೊಸಬರ ಸಿನಿಮಾಗಳು ಮೇ ತಿಂಗಳಿನಲ್ಲಿ ತೆರೆಗೆ ಬರಲು ಮುಂದಾಗಿವೆ. ಹೀಗಾಗಿ ಚಿತ್ರರಂಗ ಮತ್ತು ಪ್ರೇಕ್ಷಕರ ನಿರೀಕ್ಷೆಯಂತೆ ಮೇ ತಿಂಗಳಿನಲ್ಲಿ ಸಂಪೂರ್ಣವಾಗಿ ಹೊಸಬರ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ರಂಗು ಹೆಚ್ಚಿಸಲಿವೆ ಅನ್ನೋದರಲ್ಲಿ ಎರಡು ಮಾತಿಲ್ಲ.
ಮೇ ಮೊದಲ ಶುಕ್ರವಾರ (ಮೇ. 6ಕ್ಕೆ) “ಅವತಾರ ಪುರುಷ’, “ಟಕ್ಕರ್’, “ಪುರುಷೋತ್ತಮ’, “ದ್ವಿಮುಖ’, “ನೆನಪಾಗುತ್ತಿಲ್ಲ’, ಮತ್ತು “ಮ್ಯಾನ್ ಆಫ್ ದಿ ಮ್ಯಾಚ್’ (ಓಟಿಟಿ) ಆರು ಸಿನಿಮಾಗಳು ಬಿಡುಗಡೆ ಯಾಗಿದ್ದವು. ಮೇ ಎರಡನೇ ಶುಕ್ರವಾರ (ಮೇ. 13) “ಕಸ್ತೂರಿ ಮಹಲ್’ “ಕ್ರಿಟಿಕಲ್ ಕೀರ್ತನೆಗಳು’, “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಮತ್ತು “ಅತ್ಯುತ್ತಮ’ ಎಂಬ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿದ್ದವು.
ಇನ್ನು ಮೇ ಮೂರನೇ ಶುಕ್ರವಾರ (ಮೇ. 20) “ಟ್ವೆಂಟಿ ಒನ್ ಅವರ್’, “ಗರುಡ’, “ಸಾರಾವಜ್ರ’, “ದಾರಿ ಯಾವುದಯ್ಯ ವೈಕುಂಠಕೆ’, “ಆ್ಯಂಗರ್’, “ಕಂಡ್ಹಿಡಿ ನೋಡನ’, “ಕಟ್ಟಿಂಗ್ ಶಾಪ್’, “ಸಕುಟುಂಬ ಸಮೇತ’, “ಪ್ರಾರಂಭ’, “ಚಕ್ರಾಧಿಪತಿ’ ಸೇರಿ 10 ಸಿನಿಮಾಗಳು ತಮ್ಮ ಬಿಡುಗಡೆಯಾಗಿವೆ.
ಈಗ ಮೇ ಕೊನೆ ವಾರ (27) ಮತ್ತೆ ಒಂಭತ್ತು ಸಿನಿಮಾಗಳು ತೆರೆಗೆ ಬರಲು ಅಣಿಯಾಗಿವೆ. “ಕಿರಿಕ್ ಶಂಕರ’, “ಫಿಸಿಕ್ಸ್ ಟೀಚರ್’, “ವೀಲ್ ಚೇರ್ ರೋಮಿಯೋ’, “ಪ್ರೀತ್ಸು’, “ಅಂಜನ್’, “ಧೀರನ್’, “ಕಾಣೆಯಾದವರ ಬಗ್ಗೆ ಪ್ರಕಟಣೆ’, “ಚೇಳ್ಳಗುರ್ಕಿ ಶ್ರೀ ಏರ್ರಿತಾತಯ್ಯನ ಮಹಿಮೆ’, “ಸೀತಾಯಣ’ ಚಿತ್ರಗಳು ಈಗಾಗಲೇ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದೇ ರೀತಿ ಬಿಡುಗಡೆಯ ಭರಾಟೆ ಮುಂದುವರೆದರೆ ವರ್ಷಾಂತ್ಯಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾದಂತಾಗುತ್ತದೆ