Advertisement

ನಿಮ್ಮಿಂದ ವಿದ್ಯಾದಾನ ಅಭಿಯಾನಕ್ಕೆ ಕೈಜೋಡಿಸಿ

02:18 PM Jul 04, 2022 | Team Udayavani |

ಮೈಸೂರು: ಪರಿಸರ ಕಾಳಜಿ ಹಾಗೂ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದೊಂದಿಗೆ ಭಾರತೀಯ ಜೈನ್‌ ಸಂಘಟನೆ ನಿಮ್ಮಿಂದ ವಿದ್ಯಾದಾನ ಎಂಬ ಅಭಿಯಾನವನ್ನು ಮತ್ತೆ ಆರಂಭಿಸಿದ್ದು, ಆಸಕ್ತರು ತಾವು ಬಳಸಿದ ಪಠ್ಯಪುಸ್ತಕಗಳನ್ನು ನೀಡುವ ಮೂಲಕ ವಿದ್ಯಾ ದಾನಿಗಳಾಗಬಹುದು.

Advertisement

ಪಿಯುಸಿ, ಪದವಿ ಶಿಕ್ಷಣ ಹಾಗೂ ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷಣ ಪೂರೈಸಿದವರು, ತಾವು ಬಳಸಿದ ಪಠ್ಯ ಪುಸ್ತಕಗಳನ್ನು ಮನೆಯ ಮೂಲೆಗೆ ಎಸೆಯದೆ ಅಥವಾ ತೂಕಕ್ಕೆ ಹಾಕದೆ ದಾನ ನೀಡುವ ಮೂಲಕ ಪುಸ್ತಕ ಖರೀದಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ನೆರವಾಗಬಹುದು. ಅದಕ್ಕಾಗಿ ಭಾರತೀಯ ಜೈನ್‌ ಸಂಘಟನೆ ನಿಮ್ಮಿಂದ ವಿದ್ಯಾದಾನ ಅಭಿಯಾನ ಆರಂಭಿಸಿದ್ದು, ನಗರದ ಮೂರು ಕೇಂದ್ರಗಳಲ್ಲಿ ಪುಸ್ತಕ ಸಂಗ್ರಹಕ್ಕೆ ಮುಂದಾಗಿದೆ.

ನೀವೂ ಪುಸ್ತಕ ನೀಡಬಹುದು: ಕೊರೊನಾ ಹಿನ್ನೆಲೆ ಕಳೆದರೆಡು ವರ್ಷಗಳಿಂದ ಸ್ಥಗಿತವಾಗಿದ್ದ ನಿಮ್ಮಿಂದ ವಿದ್ಯಾದಾನ ಅಭಿಯಾನವನ್ನು ಜೈನ್‌ ಸಂಘಟನೆ ಈ ಬಾರಿ ಮತ್ತೆ ಆರಂಭಿಸಿದೆ. ನಗರದ ಎಂಜಿ ರಸ್ತೆಯಲ್ಲಿರುವ ಥೇರಾಪಂತ್‌ ಭವನ, ಇಟ್ಟಿಗೆಗೂಡು ಬಳಿಯ ಕುಂತುನಾಥ ಭವನ, ಹಳ್ಳದಕೇರಿಯ ಸ್ಥಾನಿಕ್‌ ಭವನದಲ್ಲಿ ಜು.03, 10, 17 ಮತ್ತು 24 ರಂದು ಪ್ರತಿ ಭಾನುವಾರ ಬೆಳಗ್ಗೆ 9.30ರಿಂದ 2ರವರೆಗೆ ಪುಸ್ತಕ ಸಂಗ್ರಹ ಮತ್ತು ವಿತರಣೆ ಕಾರ್ಯವನ್ನು ಮಾಡಲಿದೆ. ಆಸಕ್ತರು ಪ್ರಥಮ, ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿದವರು ಅಥವಾ ಪದವಿ ಸೇರಿದಂತೆ ಇತರೆ ಉನ್ನತ ಶಿಕ್ಷಣ ಪೂರ್ಣಗೊಳಿಸಿದವರು ಭಾರತೀಯ ಜೈನ್‌ ಸಂಘಟನೆಗೆ ಪುಸ್ತಕಗಳನ್ನು ನೀಡಬಹುದಾಗಿದೆ.

ಅಭಿಯಾನದ ಹಿಂದಿದೆ ಪರಿಸರ ಪ್ರೀತಿ: ಪುಸ್ತಕಕ್ಕೆ ಬಳಸುವ ಕಾಗದವನ್ನು ಮುದ್ರಿಸಲು ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ಪರಿಸರಕ್ಕೆ ಹಾನಿಯಾಗಲಿದೆ. ಇದನ್ನು ಮನಗಂಡ ಭಾರತೀಯ ಜೈನ್‌ ಸಂಘಟನೆ ಮಕ್ಕಳು ವಿದ್ಯಾಭ್ಯಾಸ ಮುಗಿಸಿದ ಮೇಲೆ ಪಠ್ಯಪುಸ್ತಕಗಳನ್ನು ತೂಕಕ್ಕೆ ಹಾಕುವುದು ಅಥವಾ ಮೂಲೆಗೆ ಎಸೆಯುವುದು ಸಾಮಾನ್ಯ. ಇದರಿಂದ ಈ ಪುಸ್ತಕಗಳು ಮರುಬಳಕೆಯಾಗುವುದಿಲ್ಲ. ಹಾಗಾಗಿ ಬಳಸಿದ ಪುಸ್ತಕಗಳ ಮರುಬಳಕೆಗೆ ನಿಮ್ಮಿಂದ ವಿದ್ಯಾದಾನ ಎಂಬ ಅಭಿಯಾನ ಆರಂಭಿಸಿ, ವಿದ್ಯಾಭ್ಯಾಸ ಪೂರೈಸಿದವರಿಂದ ಪುಸ್ತಕ ಪಡೆದು, ಪುಸ್ತಕ ಕೊಳ್ಳಲಾಗದವರಿಗೆ ವಿತರಿಸುತ್ತಿದೆ. ಈ ಮೂಲಕ ಹೊಸ ಪುಸ್ತಕಗಳಿಗೆ ಬೇಕಾಗುವ ಹಾಳೆಗಳಿಗೆ ಮರ ಕಡಿಯುವುದು ತಪ್ಪಲಿದೆ ಎಂಬುದು ಸಂಘಟನೆಯ ಅಭಿಮತ.

ಭಾರತೀಯ ಜೈನ್‌ ಸಂಘಟನೆ 2017ರಲ್ಲಿ ಆರಂಭಿಸಿದ ನಿಮ್ಮಿಂದ ವಿದ್ಯಾದಾನ ಅಭಿಯಾನದಿಂದ ಪಿಯುಸಿ, ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆಯುತ್ತಿ ರುವ ನೂರಾರು ಬಡ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳು ಉಚಿತವಾಗಿ ಲಭ್ಯವಾಗುತ್ತಿವೆ.

Advertisement

ಪುಸ್ತಕ ವಿತರಣೆ ಹೇಗೆ: ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವ ಸಂದರ್ಭ ಜೈನ್‌ ಸಂಘಟನೆ ಆಯಾಯ ಕಾಲೇಜುಗಳಿಗೆ ಭೇಟಿ ನೀಡಿ, ಬಡವರು, ಪುಸ್ತಕ ಖರೀದಿಸಲು ಸಾಧ್ಯವಾಗದವರನ್ನು ಗುರುತಿಸಿ ಆಹ್ವಾನಿಸುತ್ತದೆ. ಬಳಿಕ ಬುಕ್‌ ಬ್ಯಾಂಕ್‌ಗೆ ಭೇಟಿ ನೀಡುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಅಗತ್ಯವಿರುವ ಪುಸ್ತಕಗಳನ್ನು ಆರಿಸಿಕೊಳ್ಳಬಹುದು. ಈ ವೇಳೆ ಆಧಾರ್‌ ಕಾರ್ಡ್‌ ಪ್ರತಿ ಮತ್ತು ಕಾಲೇಜಿನ ಪ್ರಾಂಶುಪಾಲರ ಸಹಿ ಇರುವ ಅಂಕಪಟ್ಟಿ ಪ್ರತಿ ನೀಡಬೇಕು. ಹೀಗೆ ಪುಸ್ತಕ ಪಡೆದವರು ವರ್ಷದ ಬಳಿಕ ಆ ಪುಸ್ತಕಗಳನ್ನು ವಾಪಾಸ್‌ ನೀಡಿ ಮುಂದಿನ ವರ್ಷಕ್ಕೆ ಬೇಕಾಗುವ ಪುಸ್ತಕಗಳನ್ನು ಪಡೆದುಕೊಳ್ಳುತ್ತಾರೆ. 2017ರಲ್ಲಿ ಆರಂಭವಾದ ಈ ಅಭಿಯಾನದಿಂದ ನಗರದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲ ವಾಗಿದ್ದು, 2017, 18 ಮತ್ತು 19ರ ಶೈಕ್ಷಣಿಕ ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸಂಗ್ರವಾಗಿದ್ದು, 7 ಸಾವಿರ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಸಂಘಟನೆ ಪತ್ರಿಕೆಗೆ ತಿಳಿಸಿದೆ.

ಪರಿಸರ ಕಾಳಜಿಯೊಂದಿಗೆ ಬಳಸಿದ ಪುಸ್ತಕಗಳನ್ನು ಎಸೆಯದೆ ಅಗತ್ಯವಿರುವವರಿಗೆ ತಲುಪಿಸಲು ಭಾರತೀಯ ಜೈನ್‌ ಸಂಘಟನೆ ನಿಮ್ಮಿಂದ ವಿದ್ಯಾದಾನ ಅಭಿಯಾನ ಆರಂಭಿಸಿ 10 ಸಾವಿರಕ್ಕೂ ಹೆಚ್ಚು ಪುಸ್ತಗಳನ್ನು ಸಂಗ್ರಹಿಸಿದೆ. ಜೊತೆಗೆ 7 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದೇವೆ. ಈ ಮೂಲಕ ಮಕ್ಕಳಲ್ಲಿ ಶೇರಿಂಗ್‌ ಮನೋಭಾವ ಹೆಚ್ಚಲು ಸಹಕಾರಿಯಾಗಲಿದೆ. – ಜೈನ್‌ ಪ್ರಕಾಶ್‌ ಗುಲೇಚ, ಅಧ್ಯಕ್ಷ ಭಾರತೀಯ ಜೈನ್‌ ಸಂಘಟನೆ

 

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next