ಉಡುಪಿ: ಕನ್ನಡದ ಹೊಸ ನಿರ್ಮಾಣ ಸಂಸ್ಥೆ “ವರುಣ್ ಸಿನಿ ಕ್ರಿಯೇಷನ್ಸ್’ ತನ್ನ ಮೊದಲ ಚಲನಚಿತ್ರ “ನಿಮ್ಮೆಲ್ಲರ ಆರ್ಶೀರ್ವಾದ’ದ ಶೀರ್ಷಿಕೆಯನ್ನು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಬಿಡುಗಡೆಗೊಳಿಸಿದರು. ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಸಿನೆಮಾದ ಪೋಸ್ಟರ್ ಬಿಡುಗಡೆ ಮಾಡಿದರು.
ಯುವ ನಿರ್ದೇಶಕ ರವಿಕಿರಣ್ ಮಾತನಾಡಿ, ಲಾಕ್‌ಡೌನ್ ಅವಧಿಗೂ ಮುನ್ನ ಚಲನಚಿತ್ರದ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದವು. ಕರಾವಳಿಯ ವಿವಿಧ ಭಾಗಗಳಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸರಕಾರದ ನಿಯಮಾನುಸಾರ ನಡೆಯುತ್ತಿದೆ. ಮುಂದಿನ ನಿರ್ಧಾರಗಳನ್ನು ಚಿತ್ರತಂಡ ಶೀಘ್ರವೇ ಹಂಚಿಕೊಳ್ಳಲಿದೆ ಎಂದರು.
ಈ ಚಿತ್ರದ ಮೂಲಕ ವರುಣ್ ಹೆಗ್ಡೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಾಯಕ ನಟಿಯಾಗಿ ನಟಿಯಾಗಿ “ಭಿನ್ನ’ ಸಿನೆಮಾ ಖ್ಯಾತಿಯ ಪಾಯಲ್ ರಾಧಾಕೃಷ್ಣ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಪ್ರತೀಕ್ ಶೆಟ್ಟಿ ಹೊಸ ಪರಿಚಯ ಆಗಲಿದ್ದಾರೆ. ಚಿತ್ರರಂಗದ ಹಿರಿಯ ಮತ್ತು ಅನುಭವಿ ನಟರಾದ ಎಂ.ಎನ್.ಲಕ್ಷ್ಮೀದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಮತ್ತಿತರರು ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
ಈ ಚಲನಚಿತ್ರವು ಕೌಟುಂಬಿಕ ಕಥಾಹಂದರ ಹೊಂದಿದ್ದು, ಪೊಲೀಸ್ ಅಧಿಕಾರಿಯೊಬ್ಬನ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ತೆರೆದಿಡುವಂತಿದೆ. ಸರಳ ಮತ್ತು ಸಹಜ ಜೀವನವನ್ನು ಕರಾವಳಿಯ ಹಿನ್ನೆಲೆಯಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ ಎಂದರು.
ಚಿತ್ರಕ್ಕೆ ಸರವಣನ್ ಜಿ.ಎನ್.ಛಾಯಾಗ್ರಹಣ ಮಾಡಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರೂಪೇಂದ್ರ ಆಚಾರ್ ಕಲಾ ನಿರ್ದೇಶನದ ಕೆಲಸ ಮಾಡಿದ್ದಾರೆ. ಸುನಾದ್ ಗೌತಮ್ ಸಂಗೀತ ಮತ್ತು ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ರಾಜ್ಯ ಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಆರುಮುಗಂ ಅವರ ಎಡಿಟಿಂಗ್ ಕೆಲಸ ಚಿತ್ರದ ಅಂದ ಹೆಚ್ಚಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವರುಣ್ ಹೆಗ್ಡೆ, ಪ್ರತೀಕ್ ಶೆಟ್ಟಿ ಉಪಸ್ಥಿತರಿದ್ದರು.