Advertisement

ನಾಳೆ ಮಾಘ ಶುದ್ಧ ಹುಣ್ಣಿಮೆ : ನಿಮಿಷಾಂಬದಲ್ಲಿ ಭರದ ಸಿದ್ಧತೆ

08:44 PM Feb 26, 2021 | Team Udayavani |

ಶ್ರೀರಂಗಪಟ್ಟಣ: ಮಾಘ ಶುದ್ಧ ಹುಣ್ಣಿಮೆ ಸ್ನಾನ ಮಾಡಲು ಶ್ರೀ ನಿಮಿಷಾಂಬ ದೇವಾಲಯಕ್ಕೆ ಫೆ.27 ರಂದು ಹೆಚ್ಚು ಮಂದಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮೂಲ ಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ದೇಗುಲ ಪ್ರಭಾರ ಇಒ ತಹಶೀಲ್ದಾರ್‌ ಎಂ.ವಿ.ರೂಪಾ ಹೇಳಿದರು.

Advertisement

ಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬ ದೇವಾಲಯದ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಫೆ.26ರ ಮಧ್ಯರಾತ್ರಿಯಿಂದ ಮತ್ತು ಫೆ.27ರ ರಾತ್ರಿವರೆಗೂ 2 ದಿನ ನಡೆಯುವ ಮಾಘಸ್ನಾನ ಹಾಗೂ ಮಾಘ ಪೂರ್ಣಿಮೆ ಪೂಜೆಗೆ ಸುಮಾರು 50 ರಿಂದ 60ಸಾವಿರ ವರೆಗೂ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಭಕ್ತರಿಗೆ ಯಾವುದೇ ಮೂಲಭೂತ ಸೌಕರ್ಯ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಸ್ವತ್ಛತೆಗೆ ಆದ್ಯತೆ: ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡುವುದರ ಜತೆಗೆ ನದಿ ತೀರದಲ್ಲಿ ವಿದ್ಯುತ್‌ ದೀಪ ಅಳವಡಿಕೆ, ಬೀದಿ ದೀಪಗಳ ದುರಸ್ತಿ, ಭಕ್ತರಿಗೆ ಮೈಸೂರು ಮಂಡ್ಯದಿಂದ ನೇರ ಸಾರಿಗೆ ವ್ಯವಸ್ಥೆ, ಭಕ್ತರಿಗೆ ಪ್ರಸಾದ, ಕುಡಿಯುವ ನೀರು, ಸ್ವತ್ಛತೆಗೆ ಆದ್ಯತೆ ನೀಡ ಲಾಗಿದೆ. ಭಕ್ತರ ಪ್ರಸಾದಕ್ಕೆ 50 ಸಾವಿರ ಲಾಡು ತಯಾರಿಸಲಾಗಿದೆ. ಬೆಂಗಳೂರಿನ ದಾನಿಯೊಬ್ಬರು ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ: ಫೆ.26ರ ರಾತ್ರಿಯಿಂದ ವಿವಿಧ ಕಲಾತಂಡಗಳಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಮೈಸೂರಿನ ತಂಡದಿಂದ ಸುಗಮ ಸಂಗೀತ, ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ವಿಶೇಷ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಜತೆಗೆ ಫೆ. 27ರ ಬೆಳಗಿನ ಜಾವ 1ಗಂಟೆಗೆ ದೇವಿಗೆ ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ, ಬೆಳಗ್ಗೆ 8.30ರಿಂದ 12ರವರೆಗೆ ಗಣಹೋಮ, ದುರ್ಗಾಹೋಮ, ಸತ್ಯ ನಾರಾ ಯಣ ಪೂಜೆಯನ್ನು ಲೋಕ ಕಲ್ಯಾಣಾರ್ಥ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಕಾವೇರಿ ನದಿಗೆ ಹೆಚ್ಚುವರಿ ನೀರು ಬಿಡಲು ಕೋರಿಕೆ

Advertisement

ಕಾವೇರಿ ನೀರಾವರಿ ನಿಗಮದಿಂದ ಕಾವೇರಿ ನದಿಗೆ ಎರಡು ದಿನ ಹೆಚ್ಚುವರಿ ನೀರು ಹರಿಯಬಿಡಲು ಕೋರಲಾಗಿದ್ದು ಭಕ್ತರು ನದಿಯಲ್ಲಿ ಸ್ನಾನ ಮಾಡಲು ಅಗತ್ಯ ಮೂಲಕ ಸೌಕರ್ಯ ಕಲ್ಪಿಸಲಾಗಿದೆ. ಮಹಿಳೆಯರು ಬಟ್ಟೆ ಬದಲಾಯಿಸಲು ಹೆಚ್ಚುವರಿ ಸ್ನಾನ ಗೃಹ ನಿರ್ಮಾಣ ಮಾಡಲಾಗಿದೆ. ಸ್ಥಳದಲ್ಲೇ ನುರಿತ ಈಜುಗಾರರು, ಅಗ್ನಿ ಶಾಮಕ ದಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ, ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ನೀಡದಂತೆ ಪೊಲೀಸ್‌ ನಿಯೋಜನೆ ಮಾಡಲಾಗಿದೆ ಎಂದು ತಹಶೀಲ್ದಾರ್‌ ರೂಪಾ ಮಾಹಿತಿ ನೀಡಿದರು.

ದೇವಾಲಯದ ಅರ್ಚಕರಾದ ಸೂರ್ಯನಾರಾಯಣ ಭಟ್‌, ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next