Advertisement

ನೀಳವೇಣಿಯ ಸಮಸ್ಯೆಗಳು

03:50 AM Mar 24, 2017 | |

ಅಮ್ಮಾ … ‘ ನನ್ನ ಒಂದೂವರೆ ವರ್ಷದ ಮಗಳ ಚೀರಾಟ ಕೇಳಿ, ಅಡುಗೆ ಮನೆಯಲ್ಲಿದ್ದ ನಾನು ಧಾವಂತದಿಂದ ಓಡಿ ಬಂದೆ. ಕೈಯನ್ನು ಮುಂದಕ್ಕೆ ಚಾಚಿ ಅಳುತ್ತಾ ಕುಳಿತಿದ್ದಳು. ಕೈಗೆ ಏಟು ಮಾಡಿಕೊಂಡಿದ್ದಾಳೇನೋ ಎಂದು ಆತುರಾತುರವಾಗಿ ಬಂದು ನೋಡಿದರೆ, ಕೈಗೆ ಅಂಟಿಕೊಂಡಿದ್ದ ಕೂದಲನ್ನು ತೋರಿಸುತ್ತ, ಅಳುವನ್ನು ತಾರಕಕ್ಕೆ ಏರಿಸಿದಳು. ಇದು ನಮ್ಮ ಮನೆಯಲ್ಲಿ ನಡೆಯುವ ದಿನನಿತ್ಯದ ಪ್ರಸಂಗ. ಯಾವತ್ತಿನಿಂದ ನನ್ನ ಕೂದಲು ಉದುರಲು ಪ್ರಾರಂಭಿಸಿದೆಯೋ, ಅಂದಿನಿಂದ ನಾನು ಕ್ಷಣ ಕ್ಷಣವೂ ಆತಂಕದಿಂದ ಕಳೆಯುವ ಪರಿಸ್ಥಿತಿ ಬಂದುಬಿಟ್ಟಿದೆ.

Advertisement

“ಅಮ್ಮಾ ಇಲ್ಲಿ ನೋಡು ನಿನ್ನ ಕೂದಲು, ನನಗೆ ಈ ತಿಂಡಿ ಬೇಡ’ ಎನ್ನುತ್ತಾನೆ ನನ್ನ ಮೂರು ವರ್ಷದ ಮಗ. ಅವನು ಕುಳಿತುಕೊಂಡ ಆಸುಪಾಸಿನಲ್ಲಿ ಎಲ್ಲಿಯೂ ಕೂದಲನ್ನು ಕಂಡರೆ, ತಿಂಡಿಯನ್ನು ತ್ಯಜಿಸಿಯೇ ಬಿಡುತ್ತಾನೆ. ಇನ್ನು ತಟ್ಟೆಯಲ್ಲಿ ಕೂದಲು ಸಿಕ್ಕಿದರಂತೂ ನನ್ನ ಕತೆ ಮುಗಿದಂತೆ. ಆದ್ದರಿಂದ ಅಡುಗೆ ಸಮಯದಲ್ಲಿ, ಊಟ ಬಡಿಸುವ ಸಮಯದಲ್ಲಿ ವಿಶೇಷ ಎಚ್ಚರಿಕೆ ವಹಿಸುತ್ತೇನೆ. ಆದರೂ ಅದು ಹೇಗೋ ನನ್ನ ಹದ್ದುಕಣ್ಣನ್ನೂ ಮೀರಿ, ಕೂದಲು ಅಲ್ಲಿ ಇಲ್ಲಿ ತನ್ನ ಇರುವನ್ನು ಪ್ರಸ್ತುತ ಪಡಿಸುತ್ತಿರುತ್ತದೆ. ಅದು ಬಿಡಿ, ಹೊಟೇಲ್‌ ತಟ್ಟಯಲ್ಲೇನಾದರೂ ಕೂದಲು ಕಾಣಸಿಕ್ಕರೂ, ಅದು ನನ್ನದೇ ಕೂದಲು ಎಂಬ ಅನುಮಾನ ನನ್ನ ಜೊತೆಯಲ್ಲಿದ್ದವರಿಗೆ. ಆದರೆ ನನ್ನ ಮಗ ಅದನ್ನು ಪರೀಕ್ಷಿಸಿ ಅದು ನನ್ನ ಕೂದಲು ಹೌದೋ ಅಲ್ಲವೋ ಎಂಬ ಪ್ರಮಾಣ ಪತ್ರವನ್ನು ನೀಡುತ್ತಾನೆ. ನೂರು ಕೂದಲ ನಡುವೆಯೂ, ಇದು ನನ್ನ ಅಮ್ಮನದೇ ಕೂದಲು ಎಂದು ಗುರುತು ಹಿಡಿಯುವಷ್ಟು ನಿಪುಣನಾಗಿದ್ದಾನೆ. ಪಾಪ! ಅಷ್ಟರ ಮಟ್ಟಿಗೆ ನನ್ನ ಕೂದಲು ಅವನನ್ನು ಕಾಡಿಸಿ ಪೀಡಿಸಿದೆ. ಕೆಲವೊಮ್ಮೆ ನಿದ್ದೆಯಲ್ಲಿ “ಕೂದಲು, ಕೂದಲು…’ ಎಂದು ಕನವರಿಸಿದ್ದೂ ಇದೆ.

ಇನ್ನು ಮನೆಯನ್ನು ಶುಚಿಗೊಳಿಸುವವರ ಪಾಡಂತೂ ಬೇಡವೇ ಬೇಡ. ಮನೆ ಸ್ವಚ್ಚಗೊಳಿಸುವುದರಲ್ಲಿ ಕೈಜೋಡಿಸುವ ನನ್ನ ತಂದೆ, “ಈ ಮನೆಯಲ್ಲಿ ಧೂಳು ಕೊಳೆಗಿಂತ ನಿನ್ನ ಕೂದಲೇ ಹೆಚ್ಚಿದೆ’ ಎಂದು ಗೊಣಗುವುದು ಸರ್ವೇಸಾಮಾನ್ಯ. ಒಮ್ಮೆ ಮನೆ ಗುಡಿಸಿ ಮುಗಿಸಿದಾಗ, ಪೊರಕೆಯ ಗುರುತು ಹಿಡಿಯುವುದೇ ಕಷ್ಟವಾಗುತ್ತದೆ. ಅದಕ್ಕೆ ಸುತ್ತಿಕೊಂಡ ಕೂದಲನ್ನು ಬಿಡಿಸುವ ಕೆಲಸ ಬೇರೆ. ಇನ್ನು ಬಚ್ಚಲು ಮನೆಯಲ್ಲಿ ಉದುರಿದ ಕೂದಲು, ನೀರು ಹೋಗುವ ಕೊಳವೆಯನ್ನು ಮುಚ್ಚಿ, ಅದನ್ನು ಸರಿಪಡಿಸಲು ಒಂದು ತಲೆಯ ಬೆಲೆಯನ್ನು ತೆತ್ತಿದ್ದೂ ಆಯಿತು. ಇಷ್ಟು ಸಾಲದು ಎಂಬಂತೆ ಮೊನ್ನೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ “ಅಕ್ಕಾ, ಅಕ್ಕಾ …’ ಅನ್ನುವ ಒಬ್ಬ ಮಹಿಳೆಯ ಸ್ವರ ಕೇಳಿ ಹಿಂದಿರುಗಿ ನೋಡಿದೆ. “ಅಕ್ಕಾ , ನೋಡಿ ನಿಮ್ಮ ಹೆಗಲ ಮೇಲೆ ಕೂದಲು ತೂಗಾಡುತ್ತಿದೆ’ ಎಂದು ಹೇಳಿ ಒಂದು ಕೂದಲ ಜೊಂಪೆ ತೆಗೆದುಕೊಟ್ಟಳು. ನನಗೆ ಮುಜುಗರದಿಂದ ಭೂಮಿ ಬಾಯಿಬಿಡಬಾರದೇ ಎಂದೆನಿಸಿತು. ಎಲ್ಲಾ ಕಷ್ಟಗಳ ನಡುವೆ ಅವಮಾನದ ಲೇಪನ ಬೇರೆ. ನಾನು ಚಿಕ್ಕವಳಿದ್ದಾಗ ನನ್ನ ನುಣುಪಾದ ಕೂದಲನ್ನು ಆರಾಧಿಸುವವರ ದಂಡೇ ಇತ್ತು. “ಅಮ್ಮಿ, ನಿನ್ನ ಕೂದಲು ಎಷ್ಟು ನೈಸಾಗಿದೆ’ ಎಂದು ಮುಟ್ಟಿ ಮುಟ್ಟಿ ನೋಡುವವರು ಕೆಲವರಾದರೆ, “ಕೂದಲನ್ನು ಉದ್ದ ಬೆಳೆಸು, ಬಹಳ ಚೆನ್ನಾಗಿ ಕಾಣಿ¤àಯಾ’ ಎಂದು ಸಲಹೆ ನೀಡುವವರು ಇನ್ನು ಕೆಲವರು. ಆದರೆ ನನ್ನ ಅಮ್ಮ ಮಾತ್ರ “ನೀನೇ ಕೂದಲು ಬಾಚಿಕೊಳ್ಳುವಷ್ಟು ದೊಡ್ಡವಳಾಗುವವರೆಗೆ ಉದ್ದ ಕೂದಲು ಬೇಡವೆ ಬೇಡ’ ಎಂದು ಸಾರಾಸಗಟಾಗಿ ನಿರಾಕರಿಸಿದ್ದರು. ಆಗಿಂದಲೇ ನಾನು ದೊಡ್ಡವಳಾದ ಮೇಲೆ ಉದ್ದ ಜಡೆ ಬಿಟ್ಟು ವಿವಿಧ ಕೇಶ ಶೈಲಿಯಲ್ಲಿ ಮಿನುಗುವ ಕನಸನ್ನು ಕಾಣಲು ತೊಡಗಿದ್ದೆ. ಆದರೆ ಯಾರಿಗೆ ಗೊತ್ತಿತ್ತು ವಿಧಿ ಇಂತಹ ಕ್ರೂರ ಆಟವನ್ನು ಆಡುತ್ತದೆಯೆಂದು! 

ನಾನು ಕೂದಲು ಬೆಳೆಸುವ ಪ್ರಾಯಕ್ಕೆ ಬರುವಷ್ಟು ಹೊತ್ತಿಗೆ, ಮದುವೆ ಪ್ರಾಯವೂ ಬಂದುಬಿಟ್ಟಿತ್ತು. ಮದುವೆ, ಮಕ್ಕಳ ಗಲಾಟೆಯ ನಡುವೆ, ತಲೆಯ ಮೇಲೆ ಕೂದಲಿದ್ದಿದ್ದೇ ಮರೆತು ಹೋಗಿತ್ತು. ಅದು ನೆನಪಿಗೆ ಬಂದದ್ದೇ ಉದುರಲು ಪ್ರಾರಂಭಿಸಿದ ನಂತರ. ತಲೆಗೆ ಬಾಚಣಿಗೆಯನ್ನು  ತಾಗಿಸಿದ ತಕ್ಷಣ ಕೂದಲ ಜೊಂಪೆ ನೆಲವನ್ನೆಲ್ಲ ಆಕ್ರಮಿಸಿ, ಬರಡಾದ ನೆಲವನ್ನು ಸಮೃದ್ಧಿಗೊಳಿಸಿದಂತೆ ತೋರುತ್ತದೆ. ಅದನ್ನು ಹೆಕ್ಕಿ ರಾಶಿ ಮಾಡಿದಾಗ, ಒಂದು ಪುಟ್ಟ ಕಂಬಳಿಯನ್ನೇ ನೇಯಬಹುದಾದಷ್ಟು ಕೂದಲನ್ನು ನೋಡಿ ನನಗಾಗುವ ಹೊಟ್ಟೆ ಉರಿ ಸ್ವಲ್ಪವೆ?  

ಈ ಉದುರುವ ಕೂದಲ ಸಮಸ್ಯೆಗೆ ಮೊನ್ನೆ ನನ್ನ ಸ್ನೇಹಿತರೊಬ್ಬರು ಒಂದು ಒಳ್ಳೆ ಪರಿಹಾರವನ್ನು ತಿಳಿಸಿದರು. “ಪಲ್ಲವಿಯವರೇ, ನಿಮ್ಮ ಉದುರಿದ ಕೂದಲನ್ನು ಬಿಸಾಡಬೇಡಿ. ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ಶೇಖರಿಸಿಡಿ. ಅದನ್ನು ಖರೀದಿ ಮಾಡುವವರಿದ್ದಾರೆ. ಮೊನ್ನೆಯಷ್ಟೇ ನಾನು ನೂರು ಗ್ರಾಂನಷ್ಟು ಕೂದಲನ್ನು ಇಪ್ಪತ್ತೆ„ದು ರೂಪಾಯಿಗೆ ಕೊಟ್ಟೆ. ಮೂವತ್ತು ರೂಪಾಯಿಗೆ ಚಿಲ್ಲರೆ ಇಲ್ಲದ ಅವನು ಐದು ರೂಪಾಯಿ ನೀವೇ ಇಟ್ಟುಕೊಳ್ಳಿ’ ಎಂದು ಬಿಟ್ಟು ಹೋದ. ಇದನ್ನು ಕೇಳಿದ ನನ್ನ ತಲೆಯಿಂದ ನಾಲ್ಕು ಕೂದಲು ಹೆಚ್ಚೇ ಉದುರಿದ್ದು ಸುಳ್ಳಲ್ಲ. ಈ ಕೂದಲ ಕೃಷಿಯನ್ನೇ ಯಾಕೆ ಒಂದು ಕಸುಬಾಗಿ ಪ್ರಾರಂಭಿಸಬಾರದು ಎಂಬ ಆಲೋಚನೆಯು ಸುಳಿಯದೇ ಇರಲಿಲ್ಲ. 

Advertisement

ಮೊನ್ನೆ ಊರಿಗೆ ಬಂದಾಗ ನನ್ನ ಅಮ್ಮ, “ಇದೇನೆ ಅಮ್ಮಿ , ನಿನ್ನ ತಲೆ ಪುಕ್ಕ ಕಳೆದುಕೊಂಡ ಕೋಳಿಯ ಹಾಗೆ ಕಾಣಿಸುತ್ತಿದೆ’ ಎಂದು ತಮ್ಮ ಚಿಂತೆಯನ್ನು ವ್ಯಕ್ತಪಡಿಸಿ ತಲೆಗೆ ಎಣ್ಣೆ     ಹಚ್ಚಿಕೊಟ್ಟರು. 

ಇನ್ನು ಕೂದಲು ಉದುರುವುದನ್ನು ನಿಲ್ಲಿಸಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಪ್ರತಿನಿತ್ಯ ಎಣ್ಣೆ ಸ್ನಾನ, ವಿವಿಧ ಆಕಾರದ ಸೀಸೆಯೊಳಗಿನ ಶ್ಯಾಂಪೂಗಳ ಪ್ರಯೋಗ. ಆಗಿದ್ದು ಇಷ್ಟೇ, ಕೂದಲಿನೊಂದಿಗೆ ಪಸೂì ಖಾಲಿ! ಅದರ ಮೇಲೆ ಸಿಕ್ಕ, ಸಿಕ್ಕವರ ಸಲಹೆ ಬೇರೆ ಆ ಶ್ಯಾಂಪು ಹಚ್ಚಿ, ಈ ತೈಲ ಹಚ್ಚಿ, ಮೊಸರು ಹಚ್ಚಿ, ನಿಂಬೆರಸ ಹಚ್ಚಿ , ಹೀಗೆ ಮಸಾಜು ಮಾಡಿ, ಚೆನ್ನಾಗಿ ನಿದ್ರೆ ಮಾಡಿ, ಕೊನೆಯದಾಗಿ ಈ ಡಾಕ್ಟ್ರನ್ನು ಕಾಣಿ ಕೇಳಿ ಕೇಳಿ ಇನ್ನೊಂದಷ್ಟು ಕೂದಲು ಉದುರಿತೇ ವಿನಹ, ಮಾಡಿದ್ರಲ್ಲಿ ಒಂದೂ ಪ್ರಯೋಜನವಾಗಿಲ್ಲ. 
ಒಮ್ಮೆ ಗೆಳತಿಯ ಜೊತೆಗೆ ವಿನೋದವಾಗಿ ಹೇಳಿದೆ, “”ಈ ಎಲ್ಲಾ ಕಷ್ಟದಿಂದ ಮುಕ್ತಿ ಸಿಗಬೇಕಾದರೆ ಕೂದಲನ್ನೇ ಬೋಳಿಸುವುದು ಸರಿ ಎಂದೆನಿಸುತ್ತಿದೆ. ನೀವೇನು ಹೇಳ್ತೀರಿ?”

ಪಲ್ಲವಿ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next