Advertisement

ನೀಲಮ್ಮನ ನೇರ ಮಾತು ನಲಿವೇ ಜೀವನ ನೆಲವೇ ದೇವರು!

07:16 AM Apr 12, 2017 | |

ರುದ್ರಭೂಮಿಯ ಕಾವಲು, ಹರಿಶ್ಚಂದ್ರನಂಥ ಪುರುಷರಿಗಷ್ಟೇ ಸೀಮಿತವಾದ ಕೆಲಸವಲ್ಲ. ಅದನ್ನು ಹೆಣ್ಣೂ ನಿಭಾಯಿಸಬಲ್ಲಳು ಎನ್ನುವುದಕ್ಕೆ ಮೈಸೂರಿನ ನೀಲಮ್ಮ ಸಾಕ್ಷಿ. ಇಲ್ಲಿನ ವೀರಶೈವ ರುದ್ರಭೂಮಿಯಲ್ಲಿ ಈಕೆಯೇ ಶವ ಹೂಳುವುದು! ನೀಲಮ್ಮ ತೋಡಿದ ಗುಂಡಿಗಳಿಗೆ, ನೋಡಿದ ಮರಣಗಳಿಗೆ, ಕಂಡು ಕೇಳಿದ ರೋಧನೆಗಳಿಗೆ ಲೆಕ್ಕವೇ ಇಲ್ಲ. ಇತ್ತೀಚೆಗೆ ಅವರು “ಆಕಾಶವಾಣಿ’ ಜತೆ ಬದುಕಿನ ಕತೆ ತೆರೆದಿಟ್ಟರು…

Advertisement

ಬದುಕಿನ ಕೊನೆಯ ನಿಲ್ದಾಣ ರುದ್ರಭೂಮಿ ಸತ್ಯ ಹರಿಶ್ಚಂದ್ರನಿಗಷ್ಟೇ ನೆಲೆಯಲ್ಲ. ನೀಲಾಂಬಿಕೆಯೂ ಅಲ್ಲಿರುತ್ತಾರೆ! ಮೈಸೂರಿನ ವಿದ್ಯಾರಣ್ಯಪುರಂ ವೀರಶೈವ ರುದ್ರಭೂಮಿಯಲ್ಲಿ ಕಳೆದ 12 ವರ್ಷಗಳಿಂದ ಏಕಾಂಗಿಯಾಗಿ ಗುಂಡಿ ತೋಡುತ್ತಿದ್ದಾರೆ ಕೊತ್ತೇಗಾಲದ ನೀಲಾಂಬಿಕೆ. ಎಲ್ಲರೂ ಕರೆಯುವ ಹಾಗೆ ಇವರು ನೀಲಮ್ಮ. ಹೆಗ್ಗಡದೇವನ ಕೋಟೆ ತಾಲೂಕಿನ ಸರಗೂರು ಹೋಬಳಿಯ ಕೊತ್ತೇಗಾಲ ಗ್ರಾಮದವರು. ಇವರಿಗೆ 60 ವರುಷ. ಮದ್ವೆಯಾದಾಗ 18 ವರುಷ. ಸ್ಮಶಾನದಲ್ಲಿ ಗುಂಡಿ ತೋಡುತ್ತಿದ್ದ ಪತಿ ಬಸವರಾಜ್‌ ತೀರಿಹೋದ ಬಳಿಕ ಇವರು ಗುದ್ದಲಿ ಹಿಡಿದಾಗ 48 ವರುಷ! ನಂತರ ನೀಲಮ್ಮ ತೋಡಿದ ಗುಂಡಿಗಳಿಗೆ, ನೋಡಿದ ಮರಣಗಳಿಗೆ, ಕಂಡು ಕೇಳಿದ ರೋಧನೆಗಳಿಗೆ ಲೆಕ್ಕವೇ ಇಲ್ಲ. ರುದ್ರಭೂಮಿಯಲ್ಲಿ ತತ್ವಜ್ಞಾನಿಯೇ ಆಗಿಹೋದರು ನೀಲಮ್ಮ. ಅವರೊಂದಿಗಿನ ಆಪ್ತಮಾತುಕತೆ ಇಲ್ಲಿದೆ…

ಪುಟ್ಟ ಹುಡುಗಿಯಾಗಿ ಹೊಲಗದ್ದೆಗಳಲ್ಲಿ ಓಡಾಡುವಾಗ, ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮುಂದೊಂದು ದಿನ ಸ್ಮಶಾನದಲ್ಲಿ ಗುಂಡಿ ತೋಡುವ ಕೆಲಸ ಮಾಡ್ತೀನಿ ಅಂತ ಅಂದ್ಕೊಂಡಿದ್ರಾ?
ಕನಸಲ್ಲೂ ಅಂದುಕೊಂಡಿರ್ಲಿಲ್ಲ. ನಾನ್ಯಾವತ್ತೂ ಸ್ಮಶಾನ ಕಂಡವಳಲ್ಲ. ಸ್ಮಶಾನ ಅಂದ್ರೆ ಹೆದರಿಕೆಯೂ ಇರಲಿಲ್ಲ. ಯಾರಾದ್ರೂ ಸತ್ತರೆಂದರೆ, ಹೋಗಿ ನೋಡ್ತಿದ್ದೆ. ಹಳ್ಳಿಗಳಲ್ಲಿ ಶವವನ್ನು ಕದ್ದಾದ್ರೂ ಹೋಗಿ ನೋಡಿ ಬರಿ¤ದ್ದೆ. ನನ್ನ ತಾಯಿ ಬಯ್ಯೋರು. ಹಳ್ಳಿಯಲ್ಲಿ ಹೆಣ ನೋಡಿºಟ್ಟು ಮನೆಗೆ ಬಂದರೆ, ಒಳಗೆ ಸೇರಿಸಿಕೊಳ್ತಿರಲಿಲ್ಲ. ಮೊದಲಿನಿಂದಲೂ ನಾನು ಹೆಣ, ಹಾವುಗಳಿಗೆ ಹೆದರಿದ ಹೆಣ್ಣೇ ಅಲ್ಲ.  

ಮೃತರಾದವರು ನೆಲದಡಿ ತಣ್ಣಗೆ ಮಲಗಿರ್ತಾರೆ. ಅದರ ನಡುವೆ ನಿಮ್ಮ ಪುಟ್ಟ ಮನೆ, ನಿಮ್ಮ ಸಂಸಾರ, ಮಕ್ಕಳು, ಮೊಮ್ಮಕ್ಕಳು, ಎಲ್ಲ ಇರ್ತಾರೆ. ಹೇಗಿರುತ್ತೆ ಅಲ್ಲಿನ ಬದುಕು?
ಅದು ಬಹಳ ವಿಚಿತ್ರವಾಗಿರುತ್ತೆ. ಭಾರಿ ನಿಶ್ಶಬ್ದ. ಹೆಣ ತಂದಾಗ ಸ್ವಲ್ಪ ಗಲಾಟೆ ಇರುತ್ತೆ. ಆಮೇಲೆ ಸೂಜಿ ಬೀಳುವ ಸದ್ದೂ ಅಲ್ಲಾಗುವುದಿಲ್ಲ. ಅಲ್ಲಿ ಯಾವ ಭಯ, ಸದ್ದೂ ಇರುವುದಿಲ್ಲ. ಹೊರಗಿನ ಲೋಕಕ್ಕೆ ಎಲ್ಲ ಐಭೋಗಗಳು ಬೇಕು. ಆರೋಗ್ಯ ಒಂದು ಚೆನ್ನಾಗಿದ್ರೆ ಅದೇ ಐಭೋಗ ಎಲ್ಲ.

ನಿತ್ಯ ನೂರಾರು ಜನರ ಅಳು ಕಿವಿಗೆ ಬಿದ್ದಾಗ?
ಅಯ್ಯೋ, ಸತ್ತರೆ ಮೊದೆಲ್ಲ ಅಳ್ತಿದ್ರು. ಆದ್ರೆ, ಈಗ ಅಳುವವರೇ ಕಡಿಮೆ. ಏನೋ ಕರ್ತವ್ಯ ಅಂತ ಬಂದು ಮಾಡ್ತಾರೆ. ಎಲ್ಲ ಮುಗಿಸಿ ಹೋಗ್ತಾರೆಯೇ ಹೊರತು, ಒಬ್ಬರ ಕಣ್ಣಲ್ಲೂ ಕಣ್ಣೀರನ್ನು ನಾನು ಕಂಡಿಲ್ಲ. ಅವರೆಲ್ಲ ಹೋದ ಮೇಲೆ ನಾವು ನಾರ್ಮಲ್ಲಾಗಿರೀ¤ವಿ. ನಮಗೆ ಏನೂ ಅನ್ನಿಸೋದಿಲ್ಲ. ಹೆಣ ಹೂಳಿದಲ್ಲೇ ಓಡಾಡ್ತೀವಿ. ನಮ್ಮ ದೈನಂದಿನ ಕೆಲಸವನ್ನು ನಿರ್ಭಯವಾಗಿ ಮಾಡ್ತೀವಿ. 

Advertisement

ನೀವು ನೋಡಿದ ಮೊದಲ ಮರಣ?
ನನ್ನ ತಾತನದ್ದು. ಅದು ಕಾರ್ತಿಕ ಸೋಮವಾರ. ಬೆಳಗ್ಗೆ ಬಹುಶಃ ಗಂಟೆ 7. ನೋಡ್ತಾ, ಮಾತಾಡ್ತಾ ಇದ್ದಾಗ್ಲೆ ಅವರು ತೀರಿಹೋದ್ರು. ಆಮೇಲಿಂದ ಬಿಡಿ, ಮದ್ವೆಯಾಗಿ ಬಂದ್ಮೇಲೆ ನಮ್ಮ ಮಾವ, ಅತ್ತೆಯ ತಾಯಿ, ನನ್ನ ಯಜಮಾನರೂ ಸೇರಿ, ನನ್ನ ಅತ್ತೆಯ ನಾಲ್ಕೂ ಮಕ್ಕಳು ತೀರಿ ಹೋದ್ರು. ನನ್ನ ಗಂಡ ಮೈಸೂರಿನ ಪದ್ಮಾ ಟಾಕೀಸಿನಲ್ಲಿ ಕೆಲಸ ಮಾಡ್ತಿದ್ರು. ಆಮೇಲಿಂದ ದಶಾವತಾರ. ಕೊನೆಯ ಅವತಾರವೇ ಸ್ಮಶಾನದಲ್ಲಿ ಹೆಣ ಹೂಳ್ಳೋದು. ಅಲ್ಲಿ 15 ವರ್ಷ ಸರ್ವೀಸು.

ಹಳ್ಳಿಯಲ್ಲಿ ಬದುಕ್ತಾ ಇದ್ರಿ, ಅಗ್ರಹಾರದಲ್ಲೂ ಇದ್ರಿ, ಎಲ್ಲವನ್ನೂ ಬಿಟ್ಟು ಪತಿ- ಮಕ್ಕಳ ಜತೆಗೆ ಸ್ಮಶಾನಕ್ಕೆ ಹೋಗಿ ಬದುಕಬೇಕು ಅಂತ ಗೊತ್ತಾದಾಗ ನಿಮಗೇನನ್ನಿಸಿತು?
ಒಮ್ಮೆ ಯಾರಧ್ದೋ ಸಂಸ್ಕಾರಕ್ಕೆ ಹೋಗಿದ್ದೆವು. ಆಗ ನಾನು ನನ್ನ ಯಜಮಾನ್ರಿಗೆ ಮೆತ್ತಗೆ ಹೇಳಿದ್ದೆ. ನನಗೆ ಭಯ ಆಗುತ್ತೆ. ರಾತ್ರಿ 8 ಗಂಟೆಯೊಳಗೆ ಹೊರಗೆ ಹೋಗೋಣ ಅಂದಿದ್ದೆ. ಈಗ ನೋಡಿ, 24 ಗಂಟೆ ಅಲ್ಲೇ ಇದ್ರೂ ನಂಗೇನೂ ಅನ್ನಿಸೋದಿಲ್ಲ. ಅಲ್ಲಿ ಸಂಸ್ಕಾರ ಮಾಡ್ತಿದ್ದವರ ಜತೆ ನಮ್ಮೆಜಮಾನ್ರು ಪೂಜೆ ಮಾಡಿದ್ರು. ಅವರಿಗೆ ಖುಷಿಯಾಗಿ, ನನ್‌ ಜೊತೆ ಬಂದ್‌ಬಿಡು ಅಂದಿºಟ್ರಾ. “ರುದ್ರಭೂಮಿಯಲ್ಲೊಂದು ದೇವಸ್ಥಾನ ಇದೆ ಕಣೋ. ಯಾರೂ ನೆಟ್ಟಗೆ ಪೂಜೆ ಮಾಡೋದಿಲ್ಲ. ನೀನ್‌ ಮಾಡಿºಡು’ ಅಂತ ನಮ್ಮೆಜಮಾನ್ರಿಗೆ ಹೇಳಿದರು. ಅಲ್ಲಿಂದ ಶುರುವಾದ ಹೊಣೆ, ಹೆಣ ಹೂಳುವ ತನಕ ಬಂತು.

ಪುಟ್ಟ ಮಕ್ಕಳಿದ್ರು. ಅವರನ್ನು ಕಟ್ಕೊಂಡು ಸ್ಮಶಾನದಲ್ಲಿ ಹೇಗಿದ್ರಿ?
ಎಲ್ಲಿದ್ದೇವೆ ಅನ್ನೋದು ಮುಖ್ಯ ಆಗಲಿಲ್ಲ. ಬದುಕು ನಡೆಯುತ್ತಿದೆಯಲ್ಲ ಅಷ್ಟು ಸಾಕಿತ್ತು. ಆ ಒಂಟಿ ಮನೆಯಲ್ಲಿ ನಾನು ರಾತ್ರಿಪೂರಾ ಒಬ್ಬಳೇ ಇರಿ¤ದ್ದೆ. ಬಂದೋರೆಲ್ಲ ಕೇಳ್ತಾರೆ; “ನಿಮ್ಗೆ ಭಯ ಆಗಲ್ವಾ?’. ಆಗ ನಾನು ಸಮಾಧಿ ಕಡೆಗೆ ತೋರಿಸಿ, “ಅವರೆಲ್ಲ ಇದ್ದಾರಲ್ಲ, ನಂಗೇನು ಭಯ? ನಿಮ್ಮನೆಗಿಂತ ನಮ್ಮನೇಲೇ ಜನ ಜಾಸ್ತಿ. ಅವರೆಲ್ಲ ನನ್ನೊಂದಿಗೆ ಮಾತಾಡ್ತಾರೆ’ ಎನ್ನುತ್ತೇನೆ. “ದೆವ್ವ- ಗಿವ್ವ ಹೆದರಿಸೋದಿಲ್ವಾ?’ ಅಂತ ಕೇಳ್ತಾರೆ. “ನಾನೇ ಒಂದು ದೆವ್ವ. ಇನ್ನು ಹೆದರೋದೇನು ಬಂತು?’ ಅಂತ ಮರುಪ್ರಶ್ನೆ ಹಾಕ್ತೀನಿ. ಗಂಡ ಸತ್ತಾಗ ನಾನು ಧೈರ್ಯಗೆಡಲಿಲ್ಲ. ನಾನೇ ಧೈರ್ಯಗೆಟ್ಟರೆ ಜೀವನ ನಡೆಯೋದು ಹೇಗೆ? ನಮ್ಮ ಮನೆಗೆ ಆಗ ಗೋಡೆಗಳಿರಲಿಲ್ಲ. ಹಾವು ಯಾವಾಗ್ಲೂ ಬರುತ್ತಿತ್ತು. ಮಕ್ಕಳೂ ಹೆದರಲಿಲ್ಲ.

ತಾಯಿ ಸ್ಮಶಾನದಲ್ಲಿ ಗುಂಡಿ ತೋಡುವುದನ್ನು ನೋಡಿ ಮಕ್ಕಳು ಏನು ಹೇಳ್ತಾರೆ?
ಒಬ್ಬನನ್ನು ಕಾಲೇಜು, ಮತ್ತೂಬ್ಬನಿಗೆ ಎಸ್ಸೆಸ್ಸೆಲ್ಸಿ ಓದಿÕದ್ದೀನಿ. ಒಬ್ಬ ಎಲೆಕ್ಟ್ರಿಕ್‌ ಕೆಲಸ ಮಾಡ್ತಾನೆ, ಚಿಕ್ಕವನು ಬೆಂಗ್ಳೂರಲ್ಲಿದ್ದಾನೆ. ಮನೆಯಲ್ಲಿದ್ದಾಗ ಇಬ್ಬರೂ ನನಗೆ ಸಹಾಯ ಮಾಡ್ತಾರೆ. ಗುಂಡಿ ಕೆಲ್ಸ ಬಂದಾಗ ಇಬ್ಬರೂ ಎಲ್ಲಿಗೂ ಹೋಗೋದಿಲ್ಲ. ನಾನೊಬ್ಬಳೇ ಗುಂಡಿ ತೋಡುವಾಗ, ಅಪರಿಚಿತರು “ಲೇಡಿ ಗುಂಡಿ ತೋಡೋದು ನೋಡ್ರೋ’ ಅಂತ ಆಶ್ಚರ್ಯ ತೆಗೀತಾರೆ. 

ಗಂಡ ಮಡಿದಾಗ, ಮೊದಲನೇ ಬಾರಿಗೆ ಗುಂಡಿ ತೋಡಲು ಗುದ್ದಲಿ ಹಿಡಿದಿರಿ. ಆಗ ಏನನ್ನಿಸಿತು?
ಬದುಕಬೇಕು. ಬದುಕಲು ಗುಂಡಿ ತೋಡಬೇಕು ಅಂತನ್ನಿಸಿತು. ಸತ್ತ ಮೇಲೆ ಏನೂ ಸಾಧಿಸೋದಿಕ್ಕಾಗಲ್ಲ. ಇದ್ದು ಜಯಿಸಬೇಕು. ಆಸ್ತಿ ಇದೆಯೋ ಇಲ್ವೋ. ಆಸ್ತಿ, ಹಣ ಇದ್ದವರು ಎಷ್ಟೊಂದು ಜನ ವಿಷ ಕುಡೀತಾರೆ. ಏನೇನೋ ಮಾಡ್ಕೊàತಾರೆ. ಬದುಕಿನ ಸವಾಲುಗಳಿಗೆ ಉಸಿರಾಡುವಾಗಲೇ ಉತ್ತರಿಸಬೇಕು ಎಂಬ ನೀತಿ ನನ್ನದು.

ಗುಂಡಿ ತೋಡುವುದು ಸುಲಭದ ಕೆಲಸವೇ?
ಒಂದು ಗುಂಡಿ ತೋಡಲು ನನಗೆ 3 ಗಂಟೆ ಬೇಕಿತ್ತು. ಈಗ 1 ಗಂಟೆ ಟೈಮು ಜಾಸ್ತಿ ತಗೋತೀನಿ. ನಮ್ಮಲ್ಲಿ (ಲಿಂಗಾಯತ) ಶವವನ್ನು ಮಲಗಿಸೋದಿಲ್ಲ, ಕೂರಿಸೋದು. ಗುಂಡಿ ತೋಡಿ ಅದರೊಳಗೊಂದು ಗೂಡು ಮಾಡ್ಬೇಕು. ಒಬ್ಬ ಮನುಷ್ಯ ಕೂತ್ಕೊಳ್ಳುವಷ್ಟು. 25 ವರ್ಷದಿಂದ ವಾಸ ಮಾಡಿದ್ದೀನಲ್ವಾ, ಎಲ್ಲಿ ಗುಂಡಿ ಇದೆ ಅಂತ ನನಗೆ ಗೊತ್ತಿರುತ್ತೆ. ಕೆಲವೊಮ್ಮೆ ಅರ್ಧ ಅಡಿ ಹೆಚ್ಚಾಕಮ್ಮಿ ಆಗುತ್ತೆ. ಮೂಳೆ ಸಿಕ್ಕಿದ್ರೆ, ಹೊಸ ಗುಂಡಿಯೊಳಗೆ ಅದನ್ನೂ ಹಾಕ್ತೀನಿ. 

ಬದುಕಿನ ಬಗ್ಗೆ ಏನನ್ನಿಸುತ್ತೆ?
ಅಷ್ಟು ಆಸ್ತಿ ಬೇಕು, ದೊಡ್‌ ಬಿಲ್ಡಿಂಗೇ ಬೇಕು ಅಂತೆಲ್ಲ ಆಸೆಪಡ್ತಾರೆ. ಅದು ತಪ್ಪು. ನಮಗೆ ಎಷ್ಟೇ ಬಿಲ್ಡಿಂಗ್‌ ಇರಲಿ, ನಮ್ಮ ಬಳಿ ಎಷ್ಟೇ ಕೋಟಿ ಇರಲಿ… ಕೋಟಿಯ ನೋಟನ್ನೂ ತಿನ್ನೋದಿಲ್ಲ, ಚಿನ್ನನೂ ತಿನ್ನೋದಿಲ್ಲ. ತಿನ್ನೋದು ತುತ್ತು ಅನ್ನವನ್ನಷ್ಟೇ. ಮಲಗೋದು ಚಾಪೆ ಮೇಲೆ. ಆರೋಗ್ಯ ಚೆನ್ನಾಗಿದ್ರೆ ಅದೇ ಕೋಟಿ. ನಾನು ಮೊದಲು ಅದೇ ರೀತಿ ಕನಸು ಕಾಣಿ¤ದ್ದೆ. ಆದರೆ, ಈಗ ಗುಂಡಿ ತೋಡೋದಿಕ್ಕೆ ಶುರುಮಾಡಿದ ಮೇಲೆ ತೊಡೋಕೆ ಬಟ್ಟೆ ಬೇಕು, ತಿನ್ನೋಕೆ ಅನ್ನ ಬೇಕು ಅಂತಂದೊRಂಡಿದ್ದೀನಿ. ಕೂತು ತಿಂದ್ರೆ ರೋಗ ಜಾಸ್ತಿ. ಅವರವರ ಆಯುಸ್ಸು ಅವರವರ ಕೈಯಲ್ಲಿರುತ್ತೆ. ಯಾರೂ ಅದನ್ನು ಕೊಡೋದಿಲ್ಲ.

ಸಾವಿನ ನೋವಿನಲ್ಲಿ ಅಲ್ಲಿಗೆ ಬಂದವರಿಗೆ ನೀವು ಹೇಗೆ ಸಮಾಧಾನ ಹೇಳ್ತೀರಿ?
ಒಬ್ಬ ಮನ ಹುಟ್ಟಿದ್‌ ಮೇಲೆ ಸಾವು ನಿಶ್ಚಿತ. ಅದಕ್ಕೆ ಚಿಂತೆ ಪಡಬೇಕಿಲ್ಲ.

ನನ್ನ ದೇಹ ಹೂಳ್ಳೋದಿಲ್ಲ, ದೇಹದಾನ ಮಾಡಿರುವೆ! 
ದೇಹವನ್ನು ಮಣ್ಣಿಗೆ ಹಾಕ್ತೀವಿ. ಅದೇನೂ ಪ್ರಯೋಜನಕ್ಕೆ ಬರೋದಿಲ್ಲ. ಅದೇ ದೇಹವನ್ನು ಆಸ್ಪತ್ರೆಗೆ ಕೊಟ್ಟಾಗ ಹತ್ತಾರು ಮಕ್ಕಳಿಗೆ ವಿದ್ಯೆ ಕಲಿಯಲು ನೆರವಾಗುತ್ತೆ. ಹತ್ತು ಮಕ್ಕಳು ವಿದ್ಯೆ ಕಲಿತು, ನೂರು ಜನರ ಪ್ರಾಣ ಉಳಿಸ್ತಾರಲ್ವಾ? ಮಣ್‌ ಮಾಡಿದ್ರೆ ಏನ್‌ ಪ್ರಯೋಜನ? ನಮ್‌ ಯಜಮಾನ್ರು ಆಸ್ಪತ್ರೆಲಿ ತೀರಿ ಹೋದ್ರು. ಅವರ ಕಣ್ಣು, ಕಿಡ್ನಿ ಚೆನ್ನಾಗಿತ್ತು. ಅದನ್ನೆಲ್ಲ ಕೊಡºಹುದಿತ್ತು ಅಂತ ಆಮೇಲೆ ಅನ್ನಿಸ್ತು. ಅದನ್ನೆಲ್ಲ ತಿಳ್ಕೊಂಡ್‌ ಮೇಲೆ ನಾನು, ನನ್ನ ಮಕ್ಕಳೆಲ್ಲ ಮೆಡಿಕಲ್‌ ಕಾಲೇಜಿಗೆ ದೇಹದಾನ ಮಾಡಿದ್ವಿ.

ಎಂ.ಪಿ. ಶಂಕರ್‌ ಇಲ್ಲೇ ಇದ್ದಾರೆ!
ಗಂಧದಗುಡಿ ಚಿತ್ರದ “ಜಾನಿ’ಗೂ ನೀಲಮ್ಮನೇ ಕಾವಲು! ಹೌದು, ನೀವು ಈ ರುದ್ರಭೂಮಿಗೆ ಬಂದರೆ ಇಲ್ಲಿ ಕನ್ನಡದ ಹೆಸರಾಂತ ಖಳನಟ, ನಿರ್ಮಾಪಕ ಎಂ.ಪಿ. ಶಂಕರ್‌ ಸಮಾಧಿಯೂ ಕಾಣಿಸುತ್ತದೆ. ರುದ್ರಭೂಮಿಯನ್ನು ವಿಶೇಷವಾಗಿ ಬಂದು ನೋಡುವ ಮಂದಿಗೆಲ್ಲ ನೀಲಮ್ಮ ಅದನ್ನು ತೋರಿಸುತ್ತಾರೆ.

ಫೋಟೋ- ಸಂದರ್ಶನ: ಅಬ್ದುಲ್‌ ರಶೀದ್‌

Advertisement

Udayavani is now on Telegram. Click here to join our channel and stay updated with the latest news.

Next