Advertisement

ನೈಕಂಬ್ಳಿ: ರಾತ್ರಿ 12ರ ಅನಂತರ ಅಕ್ಕಿ ಅರೆಯಬೇಕು!

12:36 AM Feb 11, 2020 | Sriram |

ಕುಂದಾಪುರ: ಚಿತ್ತೂರು ಗ್ರಾಮದ ನೈಕಂಬ್ಳಿಯ ಸುಮಾರು 30ರಷ್ಟು ಮನೆಯವರು ರಾತ್ರಿ 12 ಗಂಟೆ ಅನಂತರ ಅಕ್ಕಿ ಅರೆಯಲು ಗ್ರೈಂಡರಿಗೆ ಹಾಕಬೇಕು. ಅದೂ ಸ್ಪರ್ಧೆಯಲ್ಲಿ ಹಾಕಿದಂತೆ. ಯಾರು ಮೊದಲು ಗ್ರೈಂಡರ್ ಚಾಲೂ ಮಾಡುತ್ತಾರೋ ಅವರು ಗೆದ್ದಂತೆ. ಹಗಲಿಡೀ, ರಾತ್ರಿಯೂ 12ರವರೆಗೆ ಇವರು ಗ್ರೈಂಡರ್ ತಿರುಗಿಸಲಾರರು. ಹಿಟ್ಟು, ಕಾಯಿ ಅರೆಯಬೇಕಿದ್ದರೆ ನಿದ್ದೆಗಣ್ಣಲ್ಲಿ ಕಾದು ಕೂರಲೇಬೇಕು. ಇದು ಸುಮಾರು 10 ವರ್ಷಗಳಿಂದ ನಡೆದು ಬಂದ ಪದ್ಧತಿ. ಇದಕ್ಕೆ ಕಾರಣ ಲೋವೋಲ್ಟೇಜ್.

Advertisement

10 ವರ್ಷಗಳಿಂದ ಸಮಸ್ಯೆ
ಮೆಸ್ಕಾಂನ್ನು ನಂಬಿದ ಇಲ್ಲಿನ ಮಂದಿಗೆ ಲೋವೋಲ್ಟೇಜ್ ಕಾರಣದಿಂದ ಕಡ್ಡಾಯ ಆಚರಿಸಬೇಕಾದ ನಿಯಮವಾಗಿ ಮಾರ್ಪಾಡಾಗಿದೆ. ಸರಿಸುಮಾರು 10 ವರ್ಷಗಳಿಂದ ಇಲ್ಲಿ ಲೋವೋಲ್ಟೇಜ್ ಸಮಸ್ಯೆಯಿದ್ದು ಈವರೆಗೆ ಯಾರಿಂದಲೂ ಪರಿಹರಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ಶೋಭಾ. ಯಾರಲ್ಲಾದರೂ ದೂರು ನೀಡಿದರೆ ಮೆಸ್ಕಾಂ ಜೆಇ, ಅಧಿಕಾರಿಗಳು ಬಂದು ಪರಿಶೀಲಿಸಿ, ಫೊಟೋ ತೆಗೆದು ಹೋಗುತ್ತಾರೆ. ನೀವು ದೂರು ನೀಡಿದ ಕಾರಣ ಬಂದು ಪರಿಶೀಲಿಸಿದ್ದೇವೆ, ಕೆಲವೇ ದಿನಗಳಲ್ಲಿ ಸಮಸ್ಯೆ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿ ಹೋಗುತ್ತಾರೆ. ಆದರೆ ಭರವಸೆ ಈಡೇರಿಕೆಗೆ ಕಾದ ನಮಗೆ ಯಾವುದೇ ಪ್ರಯೋಜನವಿಲ್ಲ. ರಾತ್ರಿ 12 ಗಂಟೆವರೆಗೂ ಇಲ್ಲಿ ವೋಲ್ಟೇಜ್ ಇರುವುದೇ ಇಲ್ಲ. ಎರಡು ಫೇಸ್‌ ಮಾತ್ರ ಇದ್ದು ಮೂರು ಫೇಸ್‌ ವಿದ್ಯುತ್‌ ದೊರೆಯುವುದಿಲ್ಲ ಎನ್ನುತ್ತಾರೆ.

ಪಂಪ್‌ ಚಾಲೂ ಮಾಡಲು ಭಯ
ಇನ್ನೊಂದು ಸಮಸ್ಯೆಯನ್ನು ಇಲ್ಲಿನ ಮಂದಿ ತೆರೆದಿಡುತ್ತಾರೆ ಅದೆಂದರೆ ಪಂಪ್‌ ಚಾಲೂ ಮಾಡುವುದು. ರಾತ್ರಿ 12ರ ನಂತರ ತೋಟ, ಗದ್ದೆಗೆ ನೀರು ಹಾಯಿಸಲು ಪಂಪ್‌ ಚಾಲೂ ಮಾಡಲು ತೆರಳಬೇಕು.ಸನಿಹದ ಕಾಡಿನಲ್ಲಿ ಹುಲಿ ಘರ್ಜನೆ ಕೇಳುವುದರಿಂದ ಮನೆಯಿಂದ ದೂರದ‌ ಪಂಪ್‌ಹೌಸ್‌ಗೆ ತೆರಳಿ ಪಂಪ್‌ ಚಾಲೂ ಮಾಡಲು ಭಯ ಆವರಿಸುತ್ತದೆ. ಅಷ್ಟಲ್ಲದೇ 30 ಮನೆಗಳ ಪೈಕಿ ಯಾರು ಮೊದಲು ಪಂಪ್‌ ಚಾಲೂ ಮಾಡುತ್ತಾರೋ ಅವರ ಪಂಪ್‌ ಮಾತ್ರ ಆನ್‌ ಆಗುತ್ತದೆ. ಇತರ ಅಷ್ಟೂ ಮಂದಿಯ ಪಂಪ್‌ ಚಾಲೂ ಆಗುವುದಿಲ್ಲ. ಮೊದಲು ಪಂಪ್‌ ಚಾಲೂ ಮಾಡಿದವರು ನಿಲ್ಲಿಸದ ಹೊರತು ಇತರರಿಗೆ ಪವರ್‌ ಇಲ್ಲ. ಇದೊಂಥರಾ ಮಕ್ಕಳ ಆಟ, ಒಲಿಂಪಿಕ್‌ ರೇಸ್‌ನ ಹಾಗೆ. ಯಾರು ಮೊದಲು ಗೆಲ್ಲುತ್ತಾರೆ ಎನ್ನುವುದೇ ಕುತೂಹಲದ ವಿಷಯ.

ಸುಮಾರು 9 ಕಂಬಗಳನ್ನು ಹಾಕಿದರೆ ಇಲ್ಲಿಗೆ ತ್ರೀಫೇಸ್‌ ವಿದ್ಯುತ್‌ ನೀಡಬಹುದು. ಸಮಸ್ಯೆ ನಿವಾರಿಸಬಹುದು. ಆದರೆ ಈವರೆಗೆ ಯಾರೂ ಮನಸ್ಸು ಮಾಡಿಲ್ಲ ಎನ್ನುತ್ತಾರೆ ಸ್ಥಳೀಯರು. ಈ ಕುರಿತು ಸೋಮವಾರ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ಶಾಸಕರ ಮನೆಯಲ್ಲಿ ಮನವಿ ನೀಡಿದ್ದಾರೆ. ವಿದ್ಯುತ್‌ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿಕೊಂಡಿದ್ದಾರೆ.

ಬಗೆಹರಿಸಲಾಗುವುದು
ಈ ಭಾಗದ ಬಹುಕಾಲದ ಬೇಡಿಕಾಯದ ರಸ್ತೆ ಅಭಿವೃದ್ಧಿಗೆ 1.5 ಕೋ.ರೂ. ಮೀಸಲಿಟ್ಟಿದ್ದು ವಿದ್ಯುತ್‌ ಸಮಸ್ಯೆ ನಿವಾರಣೆಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸಲಾಗುವುದು. ಈ ಕುರಿತು ಮೆಸ್ಕಾಂ ಹಿರಿಯ ಎಂಜಿನಿಯರ್‌ ಜತೆ ಮಾತನಾಡಲಾಗಿದೆ.
-ಬಿ.ಎಂ. ಸುಕುಮಾರ ಶೆಟ್ಟಿ,
ಶಾಸಕರು, ಬೈಂದೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next