ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಟ ಕಂ ರಾಜಕಾರಣಿ ನಿಖಿಲ್ ಕುಮಾರ್ ಇಂದು (ಜ. 22) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ನಿಖಿಲ್ ಕುಮಾರ್‌ಗೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು, ಅಭಿಮಾನಿಗಳು, ಬೆಂಬಲಿಗರು ಶುಭಾಶಯ ಕೋರುತ್ತಿದ್ದಾರೆ. ಇನ್ನು ರಾಜಕೀಯ ರಂಗದ ಜೊತೆ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ನಿಖಿಲ್ ಕುಮಾರ್ ಸದ್ಯ ಮೂರು ಬಿಗ್ ಬಜೆಟ್‌ನ ದೊಡ್ಡ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ರಜನಿಕಾಂತ್ ಅಭಿನಯದ ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ “ಲೈಕಾ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಸುಭಾಸ್ಕರನ್ ನಿರ್ಮಿಸುತ್ತಿರುವ 20ನೇ ಚಿತ್ರಕ್ಕೂ ನಿಖಿಲ್ ಕುಮಾರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. “ಹೆಬ್ಬುಲಿ’, “ಪೈಲ್ವಾನ್’ ಚಿತ್ರಗಳ ನಿರ್ದೇಶಕ ಎಸ್. ಕೃಷ್ಣ ನಿರ್ದೇಶನದ, ಇನ್ನೂ ಹೆಸರಿಡದ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ.
ಇದಾದ ಬಳಿಕ “ಲಹರಿ ಮ್ಯೂಸಿಕ್’ ಬ್ಯಾನರ್‌ನಲ್ಲಿ ಚಂದ್ರು ಮನೋಹರನ್ ನಿರ್ಮಿಸುತ್ತಿರುವ, ವಿಜಯ್ ಕುಮಾರ್ ಕೊಂಡ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲೂ ನಿಖಿಲ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಿದ್ದು, ಶ್ರೀಶ ಎಂ ಕೂದುವಳ್ಳಿ ಛಾಯಾಗ್ರಹಣವಿದ್ದು ಚಿತ್ರ ಶೀಘ್ರದಲ್ಲಿಯೇ ಸೆಟ್ಟೇರುವ ಸಾಧ್ಯತೆಯಿದೆ.
ಅದಾದ ನಂತರ “ಕಿಸ್’ ಚಿತ್ರದ ನಂತರ ನಿರ್ದೇಶಕ ಎ.ಪಿ ಅರ್ಜುನ್ ಕೂಡ ಮತ್ತೂಂದು ಬಿಗ್ ಬಜೆಟ್ ಚಿತ್ರದ ನಿರ್ದೇಶನಕ್ಕೆ ಪ್ಲಾನ್ ಮಾಡಿಕೊಂಡಿದ್ದು, “ಎನ್.ಕೆ ಎಂಟರ್‌ಟೈನ್ಮೆಂಟ್ಸ್’ ಬ್ಯಾನರ್‌ನಲ್ಲಿ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಕೂಡ ನಿಖಿಲ್ ಕುಮಾರ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಒಟ್ಟಾರೆ ಸದ್ಯಕ್ಕೆ ನಿಖಿಲ್ ಕುಮಾರ್ ಕೈಯಲ್ಲಿ ಮೂರು ಬಿಗ್ ಬಜೆಟ್ ಚಿತ್ರಗಳಿದ್ದು, ಈ ಚಿತ್ರಗಳ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರುಗಳ ಹೆಸರು ಘೋಷಣೆಯಾಗಿದ್ದು, ಚಿತ್ರದಲ್ಲಿ ನಿಖಿಲ್ ಕುಮಾರ್ ಜೊತೆ ಹೀರೋಯಿನ್ ಆಗಿ ಹೆಜ್ಜೆ ಹಾಕಲಿರುವ ಚೆಲುವೆಯರು ಯಾರು? ಚಿತ್ರದ ಇತರೆ ಕಲಾವಿದರು ಮತ್ತು ತಂತ್ರಜ್ಞರು ಯಾರು? ಅನ್ನೋ ವಿಷಯಗಳು ಇನ್ನಷ್ಟೇ ಹೊರಬರಬೇಕಿದೆ.