Advertisement

ನಿಖಿಲ್‌ ನಾಮಪತ್ರ ಸಲ್ಲಿಕೆಗೆ ಮಂಡ್ಯಕ್ಕೆ ಹೋಗಲ್ಲ

03:12 PM Mar 25, 2019 | Team Udayavani |

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ದಿಢೀರ್‌ ಮೈಸೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಪಕ್ಷದ ಮುಖಂಡರ ಜೊತೆಗೆ ಲೋಕಸಭಾ ಚುನಾವಣೆ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.

Advertisement

ಈ ವೇಳೆ ಪಕ್ಷದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅವರಿಗೆ ಬಿ ಫಾರಂ ನೀಡಿ ಶುಭ ಹಾರೈಸಿದರು. ಪಕ್ಷದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌, ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್‌ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌ ಇದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸೋಮವಾರ ವಿಜಯಶಂಕರ್‌ ನಾಮಪತ್ರ ಸಲ್ಲಿಕೆ ವೇಳೆ ಜೊತೆಗಿದ್ದು, ನಂತರ ಚಿತ್ರದುರ್ಗಕ್ಕೆ ತೆರಳುತ್ತೇನೆ. ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಮಂಡ್ಯಕ್ಕೆ ಹೋಗುವುದಿಲ್ಲ.

ನಿಖಿಲ್‌ ತಾಯಿ ಅನಿತಾ ಕುಮಾರಸ್ವಾಮಿ ಅವರು ಶನಿವಾರ ತನ್ನನ್ನು ಭೇಟಿ ಮಾಡಿ ಮಗನಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡರು. ಆದರೆ, ಸೋಮವಾರ ತಾನು, ನಿಖಿಲ್‌ ನಾಮಪತ್ರ ಸಲ್ಲಿಕೆ ವೇಳೆ ಜೊತೆಯಲ್ಲಿ ಇರುವುದಕ್ಕೆ ಆಗುತ್ತಿಲ್ಲ. ಹಾಗೆಂದು ಎಲ್ಲಾ ಕಡೆ ನಾಮಪತ್ರ ಸಲ್ಲಿಕೆಗೂ ಹೋಗಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾತನಾಡುವೆ: ತುಮಕೂರಿನಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳುತ್ತಿರುವ ಮುದ್ದಹನುಮೇಗೌಡರ ಜೊತೆಗೆ ಮಾತನಾಡುತ್ತೇನೆ. ದೇವೇಗೌಡರು 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವಿಚಾರ ತನಗೆ ಗೊತ್ತಿಲ್ಲ ಎಂದರು.

Advertisement

ಕೆಲವರು ಮಾತ್ರ ಅಮಾನತು: ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಅಮಾನತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನೂ ಅಲ್ಲ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕೆಲವರನ್ನು ಅಮಾನತು ಮಾಡಿದ್ದಾರೆ. ಅದರಿಂದ ಪಕ್ಷಕ್ಕೆ ಏನು ಸಮಸ್ಯೆ ಆಗಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ಅಮಾನತು ಮಾಡುತ್ತಾರೆ ಅಷ್ಟೇ ಎಂದು ಎಚ್ಚರಿಸಿದರು.

ಸೂಚನೆ ಕೊಟ್ಟಿಲ್ಲ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡುವ ಸಂಬಂಧ ಕ್ಷೇತ್ರ ಆಯ್ಕೆ ವಿಚಾರ ಅವರ ಮುಂದೆ ಇತ್ತು. ಆದರೆ, ಈವರೆಗೂ ಅವರು ಇಲ್ಲಿಂದ ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ಸೂಚನೆ ಕೊಟ್ಟಿಲ್ಲ ಎಂದು ತಿಳಿಸಿದರು.

ಗೆಲುವು ಖಚಿತ: ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಮತ್ತು ಧ್ರುವನಾರಾಯಣ್‌ ಬಗ್ಗೆ ಯಾರು ಎಷ್ಟೇ ಟೀಕೆ ಮಾಡಿದರೂ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಿ.ಎಚ್‌.ವಿಜಯಶಂಕರ್‌, ಚಾಮರಾಜನಗರ ಕ್ಷೇತ್ರದಲ್ಲಿ ಆರ್‌.ಧ್ರುವನಾರಾಯಣ್‌ ಗೆಲುವು ಖಚಿತ, ಜೆಡಿಎಸ್‌ ಜೊತೆ ಮೈತ್ರಿ ಇರುವುದರಿಂದ ಅತಿ ಹೆಚ್ಚು ಅಂತರದಿಂದ ಇಬ್ಬರೂ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುವ ಜೊತೆಗೆ ಮಾಜಿ ಸಚಿವ ವಿ.ಶ್ರೀನಿವಾಸ್‌ಪ್ರಸಾದ್‌ಗೆ ತಿರುಗೇಟು ನೀಡಿದರು.

ಗೆಲುವಿಗೆ ವರದಾನ:
ದಲಿತರ ಮತಗಳು ಹಿಂದಿನಿಂದಲೂ ಕಾಂಗ್ರೆಸ್‌ ಪಕ್ಷಕ್ಕೆ ಶ್ರೀರಕ್ಷೆಯಾಗಿವೆ. ಚಾಮರಾಜನಗರ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ದಲಿತರ ಮತಗಳು ವಿಭಜನೆ ಆಗುವುದಿಲ್ಲ. ಈ ಬಾರಿಯೂ ದಲಿತರ ಮತಗಳು ಕಾಂಗ್ರೆಸ್‌ಗೆ ಬರಲಿದೆ. ಜಾತಿ ಲೆಕ್ಕಾಚಾರ ಚಾಮರಾಜನಗರ ಕ್ಷೇತ್ರದಲ್ಲಿ ಕೆಲಸಕ್ಕೆ ಬರುವುದಿಲ್ಲ.

ಎಲ್ಲಾ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಬರಲಿವೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೊಟ್ಟಂತಹ ನೂರಾರು ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ವರದಾನ ಆಗಲಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಾನು ಸೇರಿದಂತೆ ಕಾಂಗ್ರೆಸ್‌ನ ಎಲ್ಲ ನಾಯಕರೂ ಸಕ್ರಿಯವಾಗಿ ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಬೆಂಬಲ ಬಗ್ಗೆ ಮಾತನಾಡಲ್ಲ: ಮಂಡ್ಯದಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ಕೊಟ್ಟಿರುವುದಕ್ಕೂ ನಮಗೂ ಸಂಬಂಧವಿಲ್ಲ. ಅಲ್ಲಿ ನಮ್ಮ ಅಭ್ಯರ್ಥಿ ಇಲ್ಲ, ನಾವು ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ, ಬಿಜೆಪಿಯವರು ಸುಮಲತಾ ಅವರಿಗೆ ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಆ ಬಗ್ಗೆ ತಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next