ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಂಜೆ 7ರಿಂದ ಬೆಳಗ್ಗೆ 7ರ ತನಕ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ| ಗೌತಮ್ ಬಗಾದಿ ಆದೇಶ ಹೊರಡಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾನಿಗೀಡಾಗಿತ್ತು. ತಾತ್ಕಾಲಿಕ ಕಾಮಗಾರಿ ನಡೆಸಿ ಬೇಸಗೆಯಲ್ಲಿ ಲಘು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿಯೂ ಅಲ್ಲಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಕಾಣಿಸುತ್ತಿದೆ.
ರಾತ್ರಿ ಸಂಚಾರ ಸೂಕ್ತಲ್ಲ; ಮುಂದಿನ ಆದೇಶದವರೆಗೂ ಈ ಸಂಚಾರ ನಿಷೇಧ ಇರುತ್ತದೆ ಎಂದು ತಿಳಿಸಿದ್ದಾರೆ.
ಹುಲಿಕಲ್ ಹೆದ್ದಾರಿ ಬಳಿ ಗುಡ್ಡ ಕುಸಿತ ಕುಂದಾಪುರ: ಉಡುಪಿ, ದ. ಕ. ಜಿಲ್ಲೆ ಯಿಂದ ಶಿವಮೊಗ್ಗವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಮಾಸ್ತಿಕಟ್ಟೆ ಹುಲಿಕಲ್ ಸಮೀಪದ ಮಾವಿನಗದ್ದೆ ಬಳಿ ಗುಡ್ಡ ಜರಿದ ಕಾರಣ ಸಂಪರ್ಕ ಆತಂಕಿತವಾಗಿದೆ.
ಆಗುಂಬೆಯಲ್ಲಿ ಮೋರಿ ಕುಸಿತ
ಆಗುಂಬೆ ಸಮೀಪ ಕೌರಿಹಕ್ಕಲಿನ ಮೋರಿ ಕುಸಿದಿದ್ದು, ಶಿವಮೊಗ್ಗದಿಂದ ಕರಾವಳಿಯನ್ನು ಸಂಪರ್ಕಿಸುವ ರಸ್ತೆ ಬಹುತೇಕ ಬಂದ್ ಆಗುವ ಭೀತಿ ಇದೆ.
ಸಂಚಾರ ತಡೆ ಕುರಿತು ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿಲ್ಲ. ಆದರೂ ಚಾರ್ಮಾಡಿ ಘಾಟಿ ಆರಂಭದ ಲ್ಲಿರುವ ಚೆಕ್‌ಪೋಸ್ಟ್ ಸಂಜೆ 7ರ ಬಳಿಕ ಮುಚ್ಚಿರುತ್ತದೆ.
- ಸಂದೇಶ್ ಪಿ.ಜಿ. ಬೆಳ್ತಂಗಡಿ ಠಾಣೆ ವೃತ್ತ ನಿರೀಕ್ಷಕ