Advertisement

ರಾತ್ರಿ ಬೆಳೆ ತಿಂದು ಜಮೀನಿನಲ್ಲೇ ಬೀಡು ಬಿಟ್ಟ ಕಾಡಾನೆಗಳು

02:42 PM Nov 19, 2021 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಿಂದ ಮೇವನ್ನರಸಿ ಹೊರಬಂದಿದ್ದ 6 ಆನೆಗಳ ಹಿಂಡು ಗುರುಪುರ ಸುತ್ತಮುತ್ತಲ ಗ್ರಾಮದಲ್ಲಿ ಸಾಕಷ್ಟು ಬೆಳೆ ತಿಂದು-ತುಳಿದು ನಾಶಪಡಿಸಿ, ಜನರ ಕಾಟದಿಂದ ಹೈರಾಣಾಗಿ ಕೊನೆಗೂ ಕುರುಚಲ ಕಾಡಿನಲ್ಲಿ ಆಶ್ರಯ ಪಡೆದಿದೆ.

Advertisement

ನಾಗರಹೊಳೆ ಉದ್ಯಾನದಿಂದ ನಾಡಿಗೆ ಬಂದಿದ್ದ ಆರು ಕಾಡಾನೆಗಳ ಹಿಂಡು ಬುಧವಾರ ರಾತ್ರಿ ಗುರುಪುರ ಟಿಬೇಟ್‌ ಕ್ಯಾಂಪ್‌ ಬಳಿಯ ಕುಂಟೇರಿ ಪಾರೆಕಡೆಯಿಂದ ದಾಟಿ ಬಂದು ಸಾಕಷ್ಟು ಬೆಳೆ ನಾಶ ಮಾಡಿ, ಗುರುವಾರ ಬೆಳಗ್ಗೆಯಾದರೂ ಹೊಸೂರು, ಕಾಳೇನಹಳ್ಳಿ ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಂಡಿವೆ. ಗ್ರಾಮದಲ್ಲಿ ಈ ಸುದ್ದಿ ಹಬ್ಬಿ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಹರಸಾಹಸ ಪಟ್ಟರು.

ದನಗಳಂತೆ ಅಟ್ಟಾಡಿದರು: ಆನೆಗಳ ಹಿಂಡು ಜಮೀನಿನಲ್ಲಿ ಬೀಡು ಬಿಟ್ಟಿದ್ದ ವೇಳೆ ಹುಚ್ಚೆದ್ದ ಯುವ ಪಡೆ ಆನೆಗಳಿಗೆ ಕಲ್ಲು ಹೊಡೆಯುತ್ತಾ, ಕೇಕೆ ಹಾಕುತ್ತಾ ಅತ್ತಿಂದಿತ್ತ ಅಟ್ಟಾಡಿಸಿದರು. ಗಾಬರಿಗೊಂಡ ಆನೆಗಳು ಕೊನೆಗೆ ಬೆಳಗ್ಗೆ 11ರ ವೇಳೆಗೆ ಗುರುಪುರ ಬಳಿಯ ಹುಣಸೇಕಟ್ಟೆ ಹಳ್ಳದ ಪ್ಲಾಂಟೇಷನ್‌ನಲ್ಲಿ ಸೇರಿಕೊಂಡು ಆಶ್ರಯ ಪಡೆದವು.

ಪೊಲೀಸ್‌-ಅರಣ್ಯ ಸಿಬ್ಬಂದಿ ಹರಸಾಹಸ; ಆನೆಗಳನ್ನು ನೋಡಲು- ಅಟ್ಟಾಡಿಸಲು ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು-ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟರು. ಜನರನ್ನು ನಿಯಂತ್ರಿಸಿ, ಆನೆಗಳನ್ನು ಕಾಡಿಗಟ್ಟಲು ಸಿಬ್ಬಂದಿ ಶ್ರಮಪಟ್ಟರಾದರೂ ಜನರ ಕೂಗಾಟದಿಂದ ಬೆದರಿ ಹುಣಸೇಕಟ್ಟೆ ಹಳ್ಳ ಸೇರಿಕೊಂಡು ಜನರ ಕಾಟದಿಂದ ತಪ್ಪಿಸಿಕೊಂಡವು.

ಗಾಳಿಯಲ್ಲಿ ಗುಂಡು-ಪಟಾಕಿ ಸಿಡಿಸಿದರು: ಜಮೀನಿನಲ್ಲಿ ಬೀಡು ಬಿಟ್ಟಿದ್ದ ಆನೆಗಳ ಹಿಂಡನ್ನು ಕಾಡಿಗಟ್ಟಲು ಸಾಕಷ್ಟು ಪಟಾಕಿ ಸಿಡಿಸಿದರು. ಗಾಳಿಯಲ್ಲಿ ಗುಂಡು ಹಾರಿಸಲಾಯಿತಾದರೂ ಆನೆಗಳು ಕಾಡಿಗೆ ಮರಳಲಿಲ್ಲ. ಕೊನೆಗೆ ರಾತ್ರಿವೇಳೆ ಕಾಡಿಗಟ್ಟಲು ತೀರ್ಮಾನಿಸಿ, ಹುಣಸೂರು-ಎಚ್‌.ಡಿ.ಕೋಟೆ ಮುಖ್ಯ ರಸ್ತೆಯಲ್ಲಿ ಬೀಡುಬಿಟ್ಟು ಆನೆಗಳು ಹಳ್ಳದಿಂದ ಹೊರಬಾರದಂತೆ ಕಾವಲು ಕಾಯ್ದರು.

Advertisement

ಸಾಕಷ್ಟು ಬೆಳೆ ನಷ್ಟ: ರಾತ್ರಿ ಇಡೀ ಬೆಳೆ ತಿಂದು ಹಾಕಿದ್ದ ಆನೆಗಳ ಹಿಂಡು, ಕಾಳೇನಹಳ್ಳಿ, ಹೊಸೂರು ಮತ್ತಿತರ ಗ್ರಾಮಗಳಲ್ಲಿ ಜಮೀನಿಲ್ಲಿ ಬೆಳೆದಿದ್ದ ರಾಗಿ, ಜೋಳ, ಹುರಳಿ, ಅವರೆ ಮತ್ತಿತರ ಬೆಳೆಗಳನ್ನು ತಿಂದು-ತುಳಿದು ನಾಶ ಪಡಿಸಿವೆ.

ರೈಲ್ವೆ ಹಳಿ ಬೇಲಿ ಇಲ್ಲ: ನಾಗರಹೊಳೆ ಉದ್ಯಾ ನದ ವೀರನಹೊಸಹಳ್ಳಿ ವಲಯಕ್ಕೆ ಸೊಳ್ಳೆಪುರ ಅರಣ್ಯ ಪ್ರದೇಶ ಸೇರಿದ್ದು, ಈ ಭಾಗದಲ್ಲಿ ರೈಲ್ವೆ ಹಳಿ ತಡೆಗೋಡೆ ನಿರ್ಮಿಸದೆ ಅರಣ್ಯದಿಂದ ಆನೆಗಳು ಹೊರಬರುತ್ತಿರುವುದೇ ಕಾರಣವಾ ಗಿದ್ದು, ಮತ್ತೂಂದೆಡೆ ಕೆಲ ಚಾಲಕಿ ಆನೆಗಳು ರೈಲ್ವೆ ಹಳಿ ತಡೆಗೋಡೆಯನ್ನೇ ದಾಟಿ ಹೊರಬರುತ್ತಿ ರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next