ಬೆಂಗಳೂರು: ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಗುರುವಾರ ಸಂಜೆ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಎಪ್ರಿಲ್ 10ರಿಂದ 20ರವರೆಗೆ ರಾಜ್ಯ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ- ಮಣಿಪಾಲ್, ಬೀದರ್, ಕಲಬುರಗಿ ಮತ್ತು ತುಮಕೂರು ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ.
ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಕಂಪೆನಿಗಳು ಈ ನೈಟ್ ಕರ್ಫ್ಯೂ ಸಮಯ ಯಥಾಸ್ಥಿತಿಯಂತೆ ಕಾರ್ಯ ನಿರ್ವಹಿಸಬಹುದು. ಆದರೆ ನೌಕರರು ಕರ್ಫ್ಯೂ ಅವಧಿಗಿಂತ ಮುನ್ನವೆ ಕರ್ತವ್ಯ ಹಾಜರಾಗಬೇಕು.
ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದೆಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಅಗತ್ಯ ಸೇವೆಗಳನ್ನು ನೀಡುವ ವಾಹನಗಳು, ಹೋಮ್ ಡೆಲಿವರಿ, ಇ ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ರಾತ್ರಿ ವೇಳೆಯಲ್ಲಿನ ರೈಲು, ಬಸ್ಸು ಮತ್ತು ವಿಮಾನದ ದೂರ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣ್ಕಕ್ಕೆ ಅಥವಾ ನಿಲ್ದಾಣದಿಂದ ಮನೆಗೆ ಬರುವಾಗ ಅಧಿಕೃತ ಟಿಕೆಟ್ ಆಧಾರದಲ್ಲಿ ಆಟೋ/ ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಬಹುದು.