Advertisement

ನಿಗೂಢತೆಯ ನಿಗರ್ವ

10:12 AM Jan 25, 2020 | mahesh |

1970ರ ದಶಕದಲ್ಲಿ ಬೆಂಗಳೂರಿನ ಶ್ರೀರಾಂಪುರ ಪ್ರದೇಶದಲ್ಲಿ ಸಾಧು ಲಕ್ಷ್ಮಣಗಿರಿ ಎನ್ನುವ ಹೆಸರಿನ ಮಂತ್ರವಾದಿಯಿದ್ದನಂತೆ. ವಾಮಾಚಾರದಲ್ಲಿ, ಮಾಟ- ಮಂತ್ರ, ತಂತ್ರ ವಿದ್ಯೆಯ ಪ್ರಯೋಗದಲ್ಲಿ ಸಾಕಷ್ಟು ಕುಖ್ಯಾತಿ ಪಡೆದಿದ್ದ ಈ ವ್ಯಕ್ತಿ, ಅದೆಷ್ಟೋ ಎಳೆ ವಯಸ್ಸಿನ ಹೆಣ್ಣು ಮಕ್ಕಳನ್ನು ನರಬಲಿ ಕೊಟ್ಟು ಅಗೋಚರ ಶಕ್ತಿಗಳನ್ನು ಸಿದ್ಧಿಸಿಕೊಳ್ಳುತ್ತಿದ್ದನಂತೆ. ಒಮ್ಮೆ ಹೀಗೆ ಹೆಣ್ಣು ಮಕ್ಕಳನ್ನು ನರಬಲಿ ಕೊಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದು ಕಂಬಿ ಹಿಂದೆ ಸೇರಿದ ಸಾಧು ಲಕ್ಷ್ಮಣಗಿರಿ ಅಲ್ಲಿಯೇ ನಿಗೂಢವಾಗಿ ಸಾವನ್ನಪ್ಪುತ್ತಾನೆ. ಈಗ ಯಾಕೆ ಈ ವ್ಯಕ್ತಿಯ ಮಾತು ಅಂದ್ರೆ, ಇದೇ ಕ್ರೈಂ ಸ್ಟೋರಿಯನ್ನು ಇಟ್ಟುಕೊಂಡು ಕನ್ನಡದಲ್ಲಿ “ನಿಗರ್ವ’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ.

Advertisement

70 ರ ದಶಕದಲ್ಲಿ ನಡೆದ, ತಾನು ಕಂಡ ನೈಜ ಘಟನೆಯನ್ನು ಆಧರಿಸಿ ನಿರ್ದೇಶಕ ಜಯಸಿಂಹ ಮುಸುರಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿದೆ. ಸಸ್ಪೆನ್ಸ್‌ ಕಂ ಕ್ರೈಂ ಕಥಾಹಂದರವಿರುವ “ನಿಗರ್ವ’ ಚಿತ್ರದಲ್ಲಿ ಆರ್ಯನ್‌ ಸೂರ್ಯ, ಹರ್ಷಿತಾ, ರಂಜಿತಾ, ಕೃಷ್ಣೇಗೌಡ, ಬುಲೆಟ್‌ ವಿನು, ಭಾರತಿ ಹೆಗಡೆ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲಲಿತಾ ಜಯಸಿಂಹ ನಿರ್ಮಿಸಿರುವ “ನಿಗರ್ವ’ ಚಿತ್ರಕ್ಕೆ ಗುರುದತ್‌ ಛಾಯಾಗ್ರಹಣವಿದೆ. ಚಿತ್ರದ ಎರಡು ಹಾಡುಗಳಿಗೆ ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಹೊನ್ನಾವರ ಮೊದಲಾದ ಕಡೆಗಳಲ್ಲಿ ಸುಮಾರು 32 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಜಯಸಿಂಹ ಮುಸುರಿ, “ಇಡೀ ಚಿತ್ರ ಮಾಟ-ಮಂತ್ರದ ಸುತ್ತ ನಡೆಯುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ತೋರಿಸುವುದರ ಜೊತೆಗೆ ಒಂದು ಎಚ್ಚರಿಕೆಯ ಸಂದೇಶ ಕೂಡ ಚಿತ್ರದಲ್ಲಿದೆ. ಚಿತ್ರದಲ್ಲಿ 6 ಭರ್ಜರಿ ಆ್ಯಕ್ಷನ್‌ ದೃಶ್ಯಗಳಿವೆ. ಮನರಂಜನೆಯ ಅಂಶಗಳನ್ನು ಇಟ್ಟುಕೊಂಡು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಇನ್ನು ಚಿತ್ರದಲ್ಲಿ ಮಂತ್ರವಾದಿಯಾಗಿ ಖಳನಾಯಕನ ಪಾತ್ರದಲ್ಲಿ ಕೃಷ್ಣೇಗೌಡ ಅಭಿನಯಿಸಿದ್ದು, ಅವರಿಲ್ಲಿ ಐದು ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಸದ್ಯ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕೊನೆ ಹಂತದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ “ನಿಗರ್ವ’, ಇದೇ ಜನವರಿ 30ರಂದು ಸುಮಾರು 80ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next