Advertisement
ಇಲ್ಲಿನ ಈದ್ಗಾ ಮೈದಾನದಲ್ಲಿರುವ ಮಾವಿನ ಹಣ್ಣಿನ ಮಾರುಕಟ್ಟೆ ಗ್ರಾಹಕರಿಂದ ಗಿಜಿಗುಡುತ್ತಿತ್ತು. ಆದರೆ ಕಳೆದ ಮೂರ್‍ನಾಲ್ಕು ದಿನಗಳಿಂದ ಗ್ರಾಹಕರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿದಿದ್ದು, ವಹಿವಾಟು ಇಲ್ಲದೆ ವ್ಯಾಪಾರಸ್ಥರು ಕಂಗೆಟ್ಟಿದ್ದಾರೆ. ಬಾವಲಿಗಳು ತಿಂದಿರುವ ಹಣ್ಣನ್ನು ಸೇವಿಸುವುದರಿಂದ ನಿಪ ವೈರಸ್ ಮನುಷ್ಯನಿಗೆ ವ್ಯಾಪಿಸುತ್ತದೆ. ಅಲ್ಲದೇ ಇದಕ್ಕೆ ಔಷಧಿಯಿಲ್ಲ ಎಂಬ ಭಯ ಜನರಲ್ಲಿ ಕಾಡುತ್ತಿರುವುದರಿಂದ ಮಾವು ಪ್ರಿಯರು ಮಾರುಕಟ್ಟೆಯತ್ತ ಮುಖ ಮಾಡದಂತಾಗಿದೆ. ಇನ್ನೂ ಇತರೆ ಹಣ್ಣುಗಳ ವ್ಯಾಪಾರದಲ್ಲೂ ಸಾಕಷ್ಟು ಕುಸಿತ ಕಂಡಿದ್ದು, ಇದಕ್ಕೆಲ್ಲಾ ನಿಪ ವೈರಸ್ ಅಥವಾ ಬಾವಲಿ ಜ್ವರದ ಬಗ್ಗೆ ಜನರಲ್ಲಿರುವ ಆತಂಕವೇ ಕಾರಣ ಎನ್ನುವುದನ್ನು ಸ್ವತಃ ವ್ಯಾಪಾರಿಗಳೇ ಒಪ್ಪಿಕೊಳ್ಳುತ್ತಾರೆ. ಇನ್ನು ಮಳೆಯಾಗುತ್ತಿರುವುದರಿಂದ ಗ್ರಾಹಕರು ಹಣ್ಣುಗಳ ಖರೀದಿಗೆ ಮುಂದಾಗುತ್ತಿಲ್ಲ ಎನ್ನುವುದು ಕೂಡ ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಕಳೆದ ಮೂರ್‍ನಾಲ್ಕು ದಿನಗಳಿಂದ ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ. ಗ್ರಾಹಕರಿಲ್ಲದ ಪರಿಣಾಮ ಈಗಾಗಾಲೇ ಖರೀದಿಸಿ ಸಂಗ್ರಹಿಸಿರುವ ಹಣ್ಣು ಮಾರಾಟವಾಗದೆ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಖರೀದಿಸಿದ ಹಣ್ಣು ಹಾಳಾಗುತ್ತಿವೆ. ಒಂದೆಡೆ ವ್ಯಾಪಾರ ಕುಂದಿರುವುದು, ಇನ್ನೊಂದೆಡೆ ಹಣ್ಣು ಕೆಡುತ್ತಿರುವುದು ವ್ಯಾಪಾರಿಗಳನ್ನು ಮತ್ತಷ್ಟು ಕಂಗೆಡಿಸಿದೆ. ಕೊಳೆತಿರುವ ಹಣ್ಣನ್ನು ಸಾಗಿಸುವುದೇ ದುಸ್ತರವಾಗಿ ಪರಿಣಮಿಸಿದೆ. ಹಣ್ಣು ಕೆಡಿಸಿ ನಷ್ಟ ಅನುಭವಿಸುವುದರ ಬದಲು ಕೇಳಿದಷ್ಟು ಹಣಕ್ಕೆ ಮಾರಾಟ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬಣಗುಡುತ್ತಿರುವ ಮಾರುಕಟ್ಟೆ: ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಮಾವು, ಬಾವಲಿಗಳಿಗೆ ಅತಿ ಪ್ರಿಯವಾದ ಹಣ್ಣು, ಬೃಹದಾಕಾರದ ಮರಗಳು ಇರುವುದರಿಂದ ಇವುಗಳ ವಾಸಸ್ಥಾನವಾಗಿದ್ದು, ಬಾವಲಿಗಳು ಕಚ್ಚಿದ ಹಣ್ಣು ಸೇವಿಸುವುದರಿಂದ ನಿಪ ವೈರಾಣು ಮನುಷ್ಯರಿಗೆ ಹರಡಿ 24 ಗಂಟೆಯಲ್ಲಿ ಸಾವನ್ನಪ್ಪುತ್ತಾರೆ ಎಂಬ ಸಂದೇಶಗಳು ರವಾನೆಯಾಗುತ್ತಿರುವುದರಿಂದ ಜನರು ಹಣ್ಣುಗಳೆಂದರೆ ಬೆಚ್ಚಿಬೀಳುತ್ತಿದ್ದಾರೆ. ನಾಲ್ಕೈದು ದಿನಗಳ ಹಿಂದೆ ಕಾಣುತ್ತಿದ್ದ
ಜನಜಂಗುಳಿ ಮಾರುಕಟ್ಟೆಯಲ್ಲಿ ಈಗ ಕಾಣುತ್ತಿಲ್ಲ. ಮಾರುಕಟ್ಟೆಗೆ ಆಗಮಿಸುವ ಬೆರಳೆಣಿಕೆ ಗ್ರಾಹಕರು ಬೇಕಾಬಿಟ್ಟಿಯಾಗಿ ದರ ಕೇಳುತ್ತಿದ್ದಾರೆ ಎನ್ನುವುದು ವ್ಯಾಪಾರಸ್ಥರ ಅಳಲು.
Related Articles
ಸಾಮಾನ್ಯವಾಗಿ ನಿಪ ವೈರಾಣು ಡಿಸೆಂಬರ್‌ನಿಂದ ಎಪ್ರಿಲ್-ಮೇ ತಿಂಗಳ ವರೆಗೆ ಕಾಣಿಸಿಕೊಳ್ಳುತ್ತದೆ. ಯಾವುದಾದರು ಪ್ರಾಣಿ ಅಥವಾ ಪಕ್ಷಿಗಳು ಕಚ್ಚಿದ ಹಣ್ಣು ಸೇವಿಸಬಾರದು. ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ತಿನ್ನಬಹುದು. ಸಿಪ್ಪೆ ಸುಲಿದು ತಿನ್ನುವುದು ಇನ್ನೂ ಸೂಕ್ತ. ಹಣ್ಣುಗಳನ್ನು ಕುದಿಸಿದ ನೀರಿನಲ್ಲಿ ತೊಳೆದರೆ ಈ ವೈರಾಣುವಿನಿಂದ ದೂರವಿರಬಹುದು. ಬಾವಲಿಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ಹಣ್ಣುಗಳನ್ನು ಸೇವಿಸದೆ ಇರುವುದು ಉತ್ತಮ. ತಾಜಾ ಹಣ್ಣಿನ ರಸ ಸೇವಿಸಬಾರದು. ಈ ವೈರಾಣುವಿನ ಮಧ್ಯಂತರ ಮೂಲಗಳಾದ ಹಂದಿ, ಕುದರೆ, ನಾಯಿ, ಕುರಿ, ಮತ್ತು ಬೆಕ್ಕುಗಳಂತಹ ಪ್ರಾಣಿಗಳನ್ನು ದೂರವಿಡಬೇಕು. ಹಸ್ತಲಾಘವ ಮಾಡುವುದನ್ನು ತಪ್ಪಿಸಬೇಕು. ಯಾವುದೇ ಪದಾರ್ಥ ತಿನ್ನುವಾಗ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
Advertisement
ನಿಪ ವೈರಾಣು ಅತ್ಯಂತ ಮಾರಕವಾಗಿದ್ದು, ಹಣ್ಣಿನ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪಾಲಿಕೆ ಆರೋಗ್ಯ ವಿಭಾಗದಿಂದ ಕೈಗೊಂಡಿದ್ದೇವೆ. ಹಣ್ಣಿನ ಮೇಲೆ ಪಕ್ಷಿ ಅಥವಾ ಪ್ರಾಣಿ ಕಚ್ಚಿದ ಕಲೆಯಿದ್ದರೆ ಅಂತಹ ಹಣ್ಣು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಹಾಗೂ ಅಂತಹ ಹಣ್ಣು ಸೇವಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.ಡಾ| ಪ್ರಭು ಬಿರಾದಾರ,
ಪಾಲಿಕೆ ಆರೋಗ್ಯಾಧಿಕಾರಿ ಯಾವುದೋ ರೋಗ ಬಂದಿದೆ ಎನ್ನುವ ಕಾರಣಕ್ಕೆ 3-4 ದಿನಗಳಿಂದ ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಒಳ್ಳೆಯ ವ್ಯಾಪಾರವಿದೆ ಎಂದು ಸಾಲ ಮಾಡಿ ಒಂದಿಷ್ಟು ಹಣ್ಣು ಖರೀದಿ ಮಾಡಿ ಇಟ್ಟಿದ್ದೇವೆ. ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಆಗುತ್ತಿಲ್ಲ. ದಿನದಿಂದ ದಿನಕ್ಕೆ ಹಣ್ಣುಗಳು ಕೊಳೆಯುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ.
ಶಿವಮ್ಮ, ಹಣ್ಣಿನ ವ್ಯಾಪಾರಿ ಹೇಮರಡ್ಡಿ ಸೈದಾಪುರ