Advertisement
ಒಂದೆಡೆ ಮಾವು, ಹಲಸು, ಚಿಕ್ಕು, ಬಾಳೆ ಹಣ್ಣು, ಗೇರುಹಣ್ಣುಗಳ ಫಲ ನೀಡುವ ಸಮಯವಾದರೆ ಮತ್ತೂಂದೆಡೆ ಶಾಲಾ – ಕಾಲೇಜು ಮಕ್ಕಳಿಗೆ ರಜೆಯ ಅವಧಿ. ಬೇಸಿಗೆ ರಜೆಯ ಅವಧಿಯಲ್ಲಿ ಮನೆಯಲ್ಲಿ ಉಳಿದಿರುವ ಮಕ್ಕಳು ಪ್ರಕೃತಿಯಲ್ಲಿ ಸಿಗುವ ಹಣ್ಣುಗಳನ್ನು ತಿನ್ನುತ್ತಾ ದಿನ ಕಳೆಯುವುದು ಮಾಮೂಲು. ಆದರೆ ಈ ಬಾರಿ ಆ ಖುಷಿ ಸಾಧ್ಯವಾಗುತ್ತಿಲ್ಲ. ಪೋಷಕರು ಮಕ್ಕಳಿಗೆ ಹಣ್ಣುಗಳನ್ನು ತಿನ್ನದಂತೆ ಕಡಿವಾಣ ಹಾಕಿದ್ದಾರೆ.
ಮೇ, ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ ಮುಂಜಾನೆಯ ಹೊತ್ತು ಮಾವಿನ ಮರದ ಕೆಳಗೆ ಗಾಳಿಗೆ ಬಿದ್ದ ಮಾವುಗಳನ್ನು ಹೆಕ್ಕಲು ಜನರಲ್ಲಿ ಸ್ಪರ್ಧೆ ಇರುತ್ತಿತ್ತು. ಆದರೆ ಈ ಬಾರಿ ಮಾವಿನ ಮರದ ಕೆಳಗೆ ಹಣ್ಣುಗಳ ರಾಶಿಯೇ ಇದ್ದರೂ ಯಾರಿಗೂ ಬೇಡ. ಗಾಳಿಗಿಂತಲೂ ಬಾವಲಿ ಹಣ್ಣನ್ನು ಬೀಳಿಸಿದ್ದರೆ ಎಂಬ ಭಯ ಇದಕ್ಕೆ ಪ್ರಮುಖ ಕಾರಣ. ಹಲಸಿನ ಹಣ್ಣು, ಚಿಕ್ಕು, ಬಾಳೆಹಣ್ಣುಗಳ ಸ್ಥಿತಿಯೂ ಇದೇ ಆಗಿದೆ. ಕೋಳಿಗೆ ವೈರಸ್ ಬಂದಿಲ್ಲ ಬಾವಲಿ ಮೂಲಕ ವೈರಸ್ ಹರಡಿ ಸಾವು ನೋವಿನ ಜ್ವರ ಬರುತ್ತಿದೆ ಎನ್ನುವ ಸಂದೇಶಗಳು ಒಂದು ಹಂತಕ್ಕೆ ಹರಡಿ ತಣ್ಣಗಾಗುತ್ತಿದ್ದಂತೆ ಫಾರಂ ಕೋಳಿಗಳ ಮೂಲಕವೂ ಜ್ವರ ಹರಡುತ್ತದೆ ಎನ್ನುವ ಸಾಮಾಜಿಕ ಜಾಲತಾಣದ ಸಂದೇಶ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕವನ್ನು ಮೂಡಿಸಿದೆ. ಆದರೆ ಇಂತಹ ಯಾವುದೇ ಸಾಧ್ಯತೆಗಳು ಸಂಶೋಧನೆಯ ಸಂದರ್ಭದಲ್ಲಿ ಕಂಡುಬಂದಿಲ್ಲ ಎನ್ನುತ್ತಾರೆ ತಜ್ಞರು.
Related Articles
ತನ್ನ ಪಾಡಿಗೆ ತಾನಿದ್ದ ಹಾರುವ ಸಸ್ತನಿ ಬಾವಲಿ ಕುರಿತಾಗಿ ಕೆಲವೇ ದಿನಗಳ ಅವಧಿಯಲ್ಲಿ ಜನರ ದೃಷ್ಟಿಕೋನವೇ ಬದಲಾಗಿದೆ. ಬಾವಲಿಯ ಕುರಿತು ಸಿಟ್ಟಿನ, ಸ್ವಾರಸ್ಯದ ಬರಹಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ‘ಬಾವೊಲಿ ಈ ಆವೊಲಿ..!’, ‘ತಲೆ ಕೆಳಗೆ ನೇತಾಡುವ ಬಾವಲಿ ಕೂಡ ಎಲ್ಲರನ್ನೂ ಒಮ್ಮೆ ಮೇಲೆ ಕೆಳಗೆ ಮಾಡಬಲ್ಲದು’ ಎನ್ನುವಂತಹ ಬರಹಗಳು ಮನರಂಜನೆಯ ಜತೆಗೆ ಜಾಗೃತಿಯನ್ನೂ ಮೂಡಿಸುತ್ತವೆ.
Advertisement
ಕೊಯ್ದು ಹಣ್ಣು ಮಾಡಿ ತಿನ್ನಬಹುದುನಿಫಾ ವೈರಸ್ ಜ್ವರ ಕೇರಳ ರಾಜ್ಯದ ಒಂದು ಪ್ರದೇಶಕ್ಕೆ ಸಂಬಂಧಪಟ್ಟಂತೆ ಮಾತ್ರ ಬಾಧಿಸಿದೆ. ಈ ಕುರಿತು ಹೆಚ್ಚು ಭಯ ಬೇಡ. ಇದು ನಿಫಾ ವೈರಸ್ ಅಥವಾ ಬಾವಲಿಯಿಂದ ಬರುವುದು ಅಲ್ಲ ಎನ್ನುವ ಸಂಶೋಧನ ಹೇಳಿಕೆಗಳೂ ಬರುತ್ತಿವೆ. ಆದರೆ ಮಕ್ಕಳು ಬಿದ್ದ ಹಣ್ಣುಗಳನ್ನು ತಿನ್ನದೇ ಇರುವುದು ಉತ್ತಮ. ಮರದಿಂದ ಕೊಯ್ದು ಹಣ್ಣು ಮಾಡಿ ತಿನ್ನಬಹುದು ಅಥವಾ ಅಂಗಡಿಯಿಂದ ಪಡೆದುಕೊಳ್ಳಬಹುದು. ಮಳೆ ಬಂದಾಗ ಹಣ್ಣುಗಳಲ್ಲಿ ಬೇರೆ ರೀತಿಯ ಕ್ರಿಮಿಗಳೂ ಇರುವ ಸಾಧ್ಯತೆ ಇರುವುದರಿಂದ ಮರದಿಂದ ಬಿದ್ದ ಹಣ್ಣುಗಳನ್ನು ತಿನ್ನುವುದುಬೇಡ.
– ಡಾ| ಶ್ರೀಕಾಂತ್ ರಾವ್,
ಮಕ್ಕಳ ತಜ್ಞರು, ಪುತ್ತೂರು ರಾಜೇಶ್ ಪಟ್ಟೆ