Advertisement

ನಿಡ್ಲೆ: ಮುರುಕಲು ಮನೆಯಲ್ಲಿ ಎಂಡೋ ಪೀಡಿತರ ಬದುಕು

11:10 AM Dec 22, 2018 | |

ಕೊಕ್ಕಡ : ನಿಡ್ಲೆ ಗ್ರಾಮ ಪಂ. ವ್ಯಾಪ್ತಿಯ ನೂಜೋಡಿ ಬಳಿಯ ಬಾರ್ದಡ್ಕ ಎನ್ನುವಲ್ಲಿ ಮುರುಕಲು ಮನೆಯಲ್ಲಿ ಬಡ ಕುಟುಂಬವೊಂದು ಅಸಹಾಯಕ ಸ್ಥಿತಿಯಲ್ಲಿದೆ. ಜನಪ್ರತಿನಿಧಿಗಳ ಭರವಸೆಯಲ್ಲೇ ಇವರ ಬದುಕು ಕೊಚ್ಚಿಹೋಗುತ್ತಿದೆ.

Advertisement

ಬಾರ್ದಡ್ಕದ ಕೃಷ್ಣಪ್ಪ-ಬೇಬಿ ದಂಪತಿ ಕುಟುಂಬ ವಾಸವಾಗಿದ್ದು, ಮುರುಕಲು ಮನೆಯಲ್ಲಿ ದಿನದೂಡುತ್ತಿದೆ. ಇಬ್ಬರೂ ದುಡಿಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ಎಂಡೋಪೀಡಿತರಾಗಿರುವುದರಿಂದ ಮಾಸಿಕ 1,500 ರೂ. ಮಾಸಾಶನ ಸಿಗುತ್ತಿದೆ. ಇದರಲ್ಲೇ ಜೀವನ ನಿರ್ವಹಣೆಯಾಗಬೇಕಿದೆ. ಒಬ್ಬಳೇ ಮಗಳನ್ನು ಶಾಲೆಗೆ ಕಳುಹಿಸಲೂ ಕುಟುಂಬ ಕಷ್ಟ ಪಡುತ್ತಿದೆ .

ಭರವಸೆಗಳು ನೂರಾರು
ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ಶಾಸಕರೂ ಕೂಡಾ ಇವರಿಗೆ ಹಲವು ಭರವಸೆ ನೀಡುತ್ತಾ ಬಂದಿದ್ದಾರೆ. ಕಳೆದ 15 ವರ್ಷಗಳಿಂದ ಈ ಕುಟುಂಬ ಭರವಸೆಯ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದೆ. ಯಾವೊಬ್ಬ ಜನಪ್ರತಿನಿಧಿಯೂ ಇವರ ನೆರವಿಗೆ ಬಂದಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಇವರಿಗೆ ತೀವ್ರ ಅನಾರೋಗ್ಯ ಕಾಡಿದ್ದಾಗ ಮಲೆ ಕುಡಿಯ ಸಂಘಟನೆಗಳು 5 ಸಾವಿರ ರೂ. ನೆರವು ನೀಡಿದ್ದು ಬಿಟ್ಟರೆ ಯಾವ ಜನಪ್ರತಿನಿಧಿಯೂ ತಮ್ಮ ನೆರವಿಗೆ ಬಂದಿಲ್ಲ ಎಂದು ಈ ಬಡಕುಟುಂಬ ಅಳಲು ತೋಡಿಕೊಂಡಿದೆ.

ಗ್ರಾ.ಪಂ. ವತಿಯಿಂದ ಕುಟುಂಬಕ್ಕೆ ಮನೆ ಮಂಜೂರಾಗಿದ್ದು, ಪಂಚಾಂಗದ ಕಾಮಗಾರಿ ಮುಗಿದಿದೆ. ಅದರ ದಾಖಲೆಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಆದರೆ, ಫ‌ಲಾನುಭವಿಯ ಖಾತೆಗೆ ಇನ್ನೂ ಹಣ ಬಂದಿಲ್ಲ. ಕಾಮಗಾರಿ ಮುಂದುವರೆಸುವ ಉದ್ದೇಶದಿಂದ ಬ್ಯಾಂಕ್‌ ಹಾಗೂ ಪಂ. ಗೆ ಅಲೆಯುತ್ತಿದ್ದು, ಇನ್ನೂ ಹಣ ಬಾರದೆ ನಿರಾಶವಾಗಿದೆ. ಸರಕಾರದಿಂದ ನೀಡುವ ಉಚಿತ ವಿದ್ಯುತ್‌ ಸಂಪ ರ್ಕಕ್ಕೆ ಗುತ್ತಿಗೆದಾರರು 1,500 ರೂ. ಪಡೆದುಕೊಂಡಿದ್ದಾರೆ. ಅಲ್ಲದೆ, ಈಗಿರುವ ಮುರುಕಲು ಮನೆಗೂ 368 ರೂ. ತೆರಿಗೆಯನ್ನು ವಸೂಲಿ ಮಾಡಿದ್ದಾರೆ ಎಂದೂ ಕುಟುಂಬ ಆರೋಪಿಸುತ್ತಿದೆ.

ಜನಪ್ರತಿನಿಧಿಗಳು ಕೇವಲ ಭರವಸೆ ನೀಡಿ ಏನನ್ನೂ ನೀಡದೇ ಇರುವುದು ಸಾಮಾಜಿಕ ಕಾಳಜಿ ಹೇಗೆಂದು ತಿಳಿಯುತ್ತದೆ. ಇನ್ನೂ ಸ್ಪಂದಿಸದೇ ಇದ್ದಲ್ಲಿ ಡಿಸಿಯವರಲ್ಲಿ ಕುಟುಂಬವನ್ನು ಕರೆದುಕೊಂಡು ಹೋಗಲಾಗುವುದು ಎಂದು ಮಲೆಕುಡಿಯ ಸಂಘ ನಿಡ್ಲೆ ಗ್ರಾಮ ಸಮಿತಿಯ ಕಾರ್ಯದರ್ಶಿ ಗಿರೀಶ್‌ ಹೇಳಿದ್ದಾರೆ.

Advertisement

 ಹಣ ಬಂದಿಲ್ಲ
ಈ ಕುಟುಂಬಕ್ಕೆ ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿದ್ದು, ಪಂಚಾಂಗದ ಕಾಮಗಾರಿ ಮುಗಿದಿದೆ. ಫೆಬ್ರವರಿ ತಿಂಗಳಲ್ಲೇ ಪಂಚಾಯತ್‌ ವತಿಯಿಂದ ದಾಖಲೆಗಳನ್ನು ಸಲ್ಲಿಸಿದ್ದು, ನಿಗಮದಿಂದಲೇ ಕುಟಂಬದ ಖಾತೆಗೆ ಹಣ ಇನ್ನೂ ಬಿಡುಗಡೆಯಾಗಿಲ್ಲ. ವಿಳಂಬದ ಕುರಿತು ಅಧಿಕಾರಿಗಳಲ್ಲಿ ವಿಚಾರಿಸಿ, ಮನೆ ಕಾಮಗಾರಿ ಮುಂದುವರೆಸಲು ಕುಟುಂಬಕ್ಕೆ ಅನುಕೂಲ ಕಲ್ಪಿಸಲಾಗುವುದು.
– ಶುಭಾ ದೇವಧರ್‌,
 ಅಧ್ಯಕ್ಷರು, ನಿಡ್ಲೆ ಗ್ರಾ.ಪಂ.

ವ್ಯವಸ್ಥೆ ಕಲ್ಪಿಸುತ್ತೇವೆ
ಈ ಕುಟುಂಬದ ದುಃಸ್ಥಿತಿಯ ಕುರಿತು ಈಗಷ್ಟೇ ಮಾಹಿತಿ ಬಂದಿದೆ. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಆ ಕುಟುಂಬದ ಎಲ್ಲ ವೈದ್ಯಕೀಯ ಹಾಗೂ ಇತರ ದಾಖಲೆಗಳನ್ನು ತರಿಸಿಕೊಂಡು, ಎಲ್ಲ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಪೀಡಿತ ಕುಟುಂಬವನ್ನು ಯಾವುದೇ ಕಾರಣಕ್ಕೂ ಅಲೆದಾಡಿಸಬಾರದು ಎಂದೂ ಸೂಚನೆ ನೀಡಿದ್ದೇನೆ.
– ಎಚ್‌.ಕೆ. ಕೃಷ್ಣಮೂರ್ತಿ,
ಸ. ಆಯುಕ್ತರು, ಪುತ್ತೂರು

 ಗುರುಮೂರ್ತಿ ಎಸ್‌. ಕೊಕ್ಕಡ 

Advertisement

Udayavani is now on Telegram. Click here to join our channel and stay updated with the latest news.

Next