ಮೂಡುಕೊಣಾಜೆ: ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹಿಂದಿಯಲ್ಲಿ ‘ಚಂದನ್ ವನ್’ ಕನ್ನಡದಲ್ಲಿ ‘ಗಂಧದ ಕುಡಿ’ ಚಲನಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಮುಂಬಯಿ ಮೀರಾ ಭಾಯಂದರ್‌ನ ಬಾಲ ಕಲಾವಿದೆ ನಿಧಿ ಎಸ್. ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಇವರು ಮೂಲತಃ ಮೂಡುಕೊಣಾಜೆ ಕಾಪು ಹೌಸ್ ಸಂಜೀವ ಶೆಟ್ಟಿ, ಬಜಗೋಳಿ ಮುಡಾರು ಮನೆ ಸುನೀತಾ ಎಸ್. ಶೆಟ್ಟಿ ದಂಪತಿಯ ಪುತ್ರಿ.
ಮೀರಾ ಭಾಯಂದರ್‌ನ ಪ್ರಸಿದ್ಧ ರಾಧಾಕೃಷ್ಣ ಅಕಾಡೆಮಿಯಲ್ಲಿ ಹಿಂದುಸ್ತಾನಿ ಸಂಗೀತ, ಪಾಶ್ಚಾತ್ಯ, ಜಾನಪದ ನೃತ್ಯ, ಭಕ್ತೀತೆಗಳನ್ನು ಕಲಿಯುತ್ತಿದ್ದಾಳೆ. ಇಲ್ಲಿನ ಸೈಂಟ್ ಫ್ರಾನ್ಸಿಸ್ ಹೈಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಈಗಾಗಲೇ ಅರಳು ಮಲ್ಲಿಗೆ ಮತ್ತು ನಾಟ್ಯಮಯೂರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕೆ. ಸತ್ಯೇಂದ್ರ ಪೈ ಮತ್ತು ಕೃಷ್ಣಮೋಹನ್ ಪೈ ಇವರ ಜತೆಯಲ್ಲಿ ಸಂತೋಷ್ ಕುಮಾರ್ ಕಟೀಲು ನಿರ್ದೇಶನದಲ್ಲಿ ಅದ್ದೂರಿ ಖರ್ಚು ವೆಚ್ಚದ ಮಕ್ಕಳ ಚಲನಚಿತ್ರವು ಇದಾಗಿದ್ದು, ಪ್ರಾಯಶಃ ಚಿನ್ನಾರಿಮುತ್ತ ಚಲನಚಿತ್ರದ ಅನಂತರ ಅದ್ದೂರಿ ಖರ್ಚಿನ ಚಿತ್ರ ಇದುವೇ ಎಂದೆನ್ನಬಹುದು.
ದೇಶಪ್ರೇಮದ ಚಿತ್ರದಲ್ಲಿ ಹಾಡುಗಳಿದ್ದು, ಪ್ರಕೃತಿಯ ಮನ ಮೋಹಕ ದೃಶ್ಯಗಳು ಚಿತ್ರದಲ್ಲಿ ಸೆರೆಹಿಡಿಯಲ್ಪಟ್ಟಿವೆ. ಈಗಾಗಲೇ ಕನಸು ಕಣ್ಣು ತೆರೆದಾಗ ಚಿತ್ರವನ್ನು ಚಿತ್ರ ಪ್ರೇಮಿಗಳಿಗೆ ನೀಡಿರುವ ಸಂತೋಷ್, ಇವರ ಈ ಬಹು ಭಾಷಾ ಚಿತ್ರ ಹಿಂದಿಯಲ್ಲಿ ಚಂದನ್ ವನ್ ಕನ್ನಡದಲ್ಲಿ ಗಂಧದ ಕುಡಿ ಬಹಳ ಯಶಸ್ವಿಯ ಚಿತ್ರವಾಗಲಿದೆ. ರಮೇಶ್ ಭಟ್, ಶಿವಧ್ವಜ್, ಜ್ಯೋತಿ ರೈ ಬಹುಮುಖ್ಯ ಪಾತ್ರದಲ್ಲಿದ್ದರೆ. ಮುಂಬಯಿಯ ಯಕ್ಷಗಾನ ಕಲಾವಿದ ಸದಾನಂದ ಕಟೀಲು, ಕೃಷ್ಣ ರಾಜ್ ಶೆಟ್ಟಿ ಮುಂಡ್ಕೂರು, ಅರವಿಂದ ಕೊಜಕ್ಕೊಳಿ, ಚಂದ್ರಿಕಾ ರಾವ್ ಮುಂತಾದ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ.