Advertisement

ನೈಸ್‌: CBI ತನಿಖೆಯ ಸವಾಲೊಡ್ಡಿದ ಕುಮಾರಸ್ವಾಮಿ

08:10 PM Jul 22, 2023 | Team Udayavani |

ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ನೈಸ್‌) ಯೋಜನೆಯ ಅಕ್ರಮಗಳನ್ನು ಧೈರ್ಯವಿದ್ದರೆ ಸದನ ಸಮಿತಿ ಶಿಫಾರಸಿನಂತೆ ಸಿಬಿಐಗೆ ವಹಿಸಿ ಎಂದು ರಾಜ್ಯ ಸರಕಾರಕ್ಕೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Advertisement

ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದ ಕುಮಾರಸ್ವಾಮಿ, ಸದನದ ಹೊರಗೂ ನೈಸ್‌ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದಾರೆ.

ಆದರೆ ಇದಕ್ಕೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರದ್ದೇ ಸರಕಾರ ಇದ್ದಾಗ ಯಾಕೆ ಸಿಬಿಐ ತನಿಖೆಗೆ ಒಪ್ಪಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ನೈಸ್‌ ಒಪ್ಪಂದಕ್ಕೆ ಸಹಿ ಹಾಕಿರುವುದೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ ಕುಮಾರಸ್ವಾಮಿ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಇಬ್ಬರಿಗೂ ತಿರುಗೇಟು ನೀಡಿರುವ ಕುಮಾರಸ್ವಾಮಿ, ಈಗ ನಿಮ್ಮ ಕೈಯಲ್ಲಿ ಅಧಿಕಾರ ಇಲ್ಲವೇ? ಧೈರ್ಯವಿದ್ದರೆ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಸವಾಲು ಎಸೆದಿದ್ದಾರೆ.
ನೈಸ್‌ ಯೋಜನೆಗೆ ದೇವೇಗೌಡರು ಸಹಿ ಹಾಕಿದ್ದರು ಎನ್ನುವ ಮೂಲಕ ತಾವು ಎಸಗಿದ ಅಕ್ರಮಕ್ಕೆ ತೇಪೆ ಹಾಕಿಕೊಳ್ಳಲು ಶಿವಕುಮಾರ್‌ ಮುಂದಾಗಿದ್ದಾರೆ. ದೇವೇಗೌಡರ ಕಾಲದಲ್ಲಿ ಆಗಿದ್ದ ಮೂಲ ಒಪ್ಪಂದದ ಬಗ್ಗೆ ಅವರದ್ದು ಧ್ಯಾನಸ್ಥ ಮೌನವೇಕೆ? ತಿರುಚಿದ ಒಪ್ಪಂದದ ಬಗ್ಗೆಯೂ ಹೇಳಲಿ. ಬ್ರ್ಯಾಂಡ್‌ ಬೆಂಗಳೂರು ಟೀಮ್‌ನ ಮುಖ್ಯಸ್ಥರ ಬಗ್ಗೆಯೂ ಬೆಳಕು ಚೆಲ್ಲಲಿ. ಸದನ ಸಮಿತಿ ವರದಿ ಬಗ್ಗೆ ಚಕಾರ ಎತ್ತದಿರುವುದೇಕೆ ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ಕರ್ನಾಟಕವನ್ನು ಕಡಲೆಪುರಿಯಂತೆ ಮುಕ್ಕಿ ತಿನ್ನುವುದಾ?
ನೈಸ್‌ ಮೂಲ ಒಪ್ಪಂದ ತಿರುಚಿದ್ದರಿಂದ ಕರ್ನಾಟಕವು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಾಯಿತು. ಅದಕ್ಕೆ ಕಾರಣರಾದ ಅಧಿಕಾರಿಯನ್ನೇ ಬ್ರ್ಯಾಂಡ್‌ ಬೆಂಗಳೂರು ಮುಖ್ಯಸ್ಥರನ್ನಾಗಿಸಿ ಪಕ್ಕದಲ್ಲೇ ಕೂರಿಸಿಕೊಂಡಿದ್ದೀರಿ. ಅಂದರೆ ನಗರವನ್ನು ಬುಲ್ಡೋಜರ್‌ ಮೂಲಕ ಛಿದ್ರಗೊಳಿಸಿ ಕಿಸೆ ತುಂಬಿಕೊಳ್ಳುವುದಾ? ಕರ್ನಾಟಕವನ್ನು ಕಡಲೆಪುರಿಯಂತೆ ಮುಕ್ಕಿ ತಿನ್ನುವುದಾ ಎಂದು ಪ್ರಶ್ನಿಸಿದ್ದಾರೆ.

Advertisement

ನೈಸ್‌ ಯೋಜನೆ ಯಾರಿಗೆಲ್ಲ ಕಾಮಧೇನು, ಕಲ್ಪವೃಕ್ಷವಾಗಿತ್ತು ಎಂಬುದು ಗೊತ್ತಿದೆ. ಧನಪಿಶಾಚಿ ರಾಜಕಾರಣಿಗಳು, ಅಧಿಕಾರಿಗಳ ಅನೈತಿಕ ಭ್ರಷ್ಟವ್ಯೂಹದಿಂದ ಕಂಡರಿಯದ ಲೂಟಿಯಾಗಿದೆ. ತಾವು ಬ್ಯುಸಿ ಇದ್ದೀರಿ. ಆದರೂ ಬಿಡುವು ಮಾಡಿಕೊಂಡು ಸದನ ಸಮಿತಿಯ ವರದಿ ಮೇಲೊಮ್ಮೆ ಕಣ್ಣಾಡಿಸಿ. ಧೈರ್ಯವಿದ್ದರೆ ನೈಸ್‌ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಹರಿಹಾಯ್ದರು.

ನೈಸ್‌ ಅಕ್ರಮಗಳ ವಿರುದ್ಧ ಸದನ ಸಮಿತಿ ನೀಡಿದ್ದ ವರದಿಯನ್ನೊಮ್ಮೆ ಓದಿ. 135 ಸ್ಥಾನವಿರುವ ಬಹುಮತದ ಸರಕಾರಕ್ಕೀಗ ನುಡಿದಂತೆ ನಡೆಯುವ ಕಾಲ ಬಂದಿದೆ. ಧೈರ್ಯವಿದ್ದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ.
ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಹಿಂದೆ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಗಳಾಗಿದ್ದರು. ಅವರೇ ತನಿಖೆಗೆ ವಹಿಸಬಹುದಿತ್ತು. ನಾವೂ ಸಹಕರಿಸುತ್ತಿದ್ದೆವು. ಅವರನ್ನು ಯಾರು ಕಟ್ಟಿ ಹಾಕಿದ್ದರು? ಸಮ್ಮಿಶ್ರ ಸರಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಲು ನಾವು ಸಹಕರಿಸಿರಲಿಲ್ಲವೇ?
ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next