Advertisement

ಐಸಿಸ್‌ ಸೇರಿದ್ದ ಅನೇಕರು ಪಿಎಫ್ಐ ಕಾರ್ಯಕರ್ತರು! ಎನ್‌ಐಎ ವರದಿಯಲ್ಲಿ ಉಲ್ಲೇಖ

07:37 AM Oct 01, 2022 | Team Udayavani |

ನವದೆಹಲಿ:ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ)ದ ಹಲವು ಸದಸ್ಯರು ಸಿರಿಯಾದಂಥ ಐಸಿಸ್‌ ಉಗ್ರ ಸಂಘಟನೆಯ ಬಾಹುಳ್ಯವಿರುವ ದೇಶಗಳಿಗೆ ಪ್ರಯಾಣಿಸಿ, ಜಿಹಾದ್‌ಗೆ ಸೇರಿದ್ದರು ಎಂಬ ಅಂಶ ಈಗ ಬಹಿರಂಗವಾಗಿದೆ.

Advertisement

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಸಿದ್ಧಪಡಿಸಿರುವ ವರದಿಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ. ಪಿಎಫ್ಐ ಸದಸ್ಯರು ಭದ್ರತಾ ಸಂಸ್ಥೆಗಳ ಕಣ್ಣಿನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಿರಿಯಾದಂಥ ದೇಶಗಳಿಗೆ ಸುತ್ತಿ ಬಳಸಿ, ದೀರ್ಘಾವಧಿಯ ಪ್ರಯಾಣವನ್ನು ಕೈಗೊಳ್ಳುತ್ತಿದ್ದರು. ಈಗಾಗಲೇ ಕೆಲವು ವಿದೇಶಗಳಲ್ಲಿ ಜಿಹಾದ್‌ ವೇಳೆ ಮೃತಪಟ್ಟಿರುವ ಮತ್ತು ಬಂಧಿತರಾಗಿರುವ, ನಂತರ ಗಡಿಪಾರಾಗಿರುವ ಪ್ರಕರಣಗಳು ನಮ್ಮ ಮುಂದಿವೆ ಎಂದೂ ವರದಿ ಹೇಳಿದೆ.

ಸುತ್ತಿ ಬಳಸಿ ಪ್ರಯಾಣ:
ಕೆಲವು ಮುಸ್ಲಿಂ ಯುವಕರು ಸಿರಿಯಾ ಹಾಗೂ ಇತರೆ ದೇಶಗಳಿಗೆ ತೆರಳಿ, ಐಸಿಸ್‌ ಸೇರ್ಪಡೆಗೊಳ್ಳಲು ಸಿದ್ಧರಾಗಿದ್ದಾರೆ. ಈ ಪೈಕಿ ಅನೇಕ ಮಂದಿ ಪಿಎಫ್ಐ ಸಂಘಟನೆಯ ಸದಸ್ಯರು ಎಂಬ ಮಾಹಿತಿಯು 2017ರಲ್ಲಿ ಕೇರಳ ಪೊಲೀಸರಿಗೆ ದೊರೆತಿತ್ತು. ಜತೆಗೆ, ಸಿರಿಯಾಗೆ ಹೋಗಿ ಐಸಿಸ್‌ ಸಂಘಟನೆಯನ್ನು ಸೇರಿದವರು ಮೊದಲಿಗೆ ಸೌದಿ ಅರೇಬಿಯಾಗೆ ತೆರಳಿ, ಅಲ್ಲಿಂದ ಮಲೇಷ್ಯಾ ಮತ್ತು ಟರ್ಕಿಗೆ ಸಂಚರಿಸುತ್ತಿದ್ದರು.

ನಂತರ, ಸಿರಿಯಾದಲ್ಲಿ ಐಸಿಸ್‌ಗೆ ಸೇರ್ಪಡೆಯಾಗಲು ಅಂತಿಮ ಒಪ್ಪಿಗೆಗಾಗಿ ಕಾಯುತ್ತಿದ್ದರು ಎಂದೂ ಎನ್‌ಐಎ ತಿಳಿಸಿದೆ.

ಪಿಎಫ್ಐ ನಾಯಕರಾದ ಅಬ್ದುಲ್‌ ಮನಾಫ್ ಅಲಿಯಾಸ್‌ ಅಬು ಫಾತಿಮಾಂದ್‌, ಮೊಹಮ್ಮದ್‌ ಸಮೀರ್‌ ಅಲಿಯಾಸ್‌ ಅಬು ಸಿರಿಯಾದಲ್ಲೇ ಮೃತಪಟ್ಟಿದ್ದರು. ಇನ್ನು ಒಬ್ಬ ಮಾಸ್ಟರ್‌ಮೈಂಡ್ ಸೇರಿದಂತೆ 5 ಮಂದಿಯನ್ನು ಐಸಿಸ್‌ ಸೇರುವ ಮುನ್ನವೇ ಕೇರಳ ಪೊಲೀಸರು ಬಂಧಿಸಿದ್ದರು ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಅ.20ರವರೆಗೆ ನ್ಯಾಯಾಂಗ ವಶಕ್ಕೆ
ಇತ್ತೀಚೆಗಿನ ದಾಳಿ ವೇಳೆ ಎನ್‌ಐಎಯಿಂದ ಬಂಧಿತರಾಗಿದ್ದ ಪಿಎಫ್ಐನ 11 ಮಂದಿ ಕಾರ್ಯಕರ್ತರನ್ನು ಕೊಚ್ಚಿಯ ವಿಶೇಷ ಕೋರ್ಟ್‌ ಶುಕ್ರವಾರ ಅ.20ರವರೆಗೆ ನ್ಯಾಯಾಂಗ ವಶಕ್ಕೆ ನೀಡಿದೆ. ಎನ್‌ಐಎ ವಶದ ಅವಧಿಯು ಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು.

ಪ್ರಧಾನ ಕಚೇರಿಗೆ ಬೀಗಮುದ್ರೆ
ಕೇರಳದ ಕಲ್ಲಿಕೋಟೆಯಲ್ಲಿರುವ ಪಿಎಫ್ಐನ ರಾಜ್ಯ ಪ್ರಧಾನ ಕಚೇರಿಗೆ ಶುಕ್ರವಾರ ಎನ್‌ಐಎ ಅಧಿಕಾರಿಗಳು ಬೀಗಮುದ್ರೆ ಜಡಿದಿದ್ದಾರೆ. ಮೀನ್‌ಚಂದಾ ಪ್ರದೇಶದಲ್ಲಿ ಕಚೇರಿಯ ಗೋಡೆಗೆ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ನೋಟಿಸ್‌ವೊಂದನ್ನು ಅಂಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next