ನವದೆಹಲಿ: ನಿಷೇಧಿತ ಸಿಖ್ ಫಾರ್ ಜಸ್ಟೀಸ್ (SFJ) ಸಂಘಟನೆಯ ಸ್ಥಾಪಕ, ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ್ದ ಅಮೃತ್ ಸರ್ ಮತ್ತು ಚಂಡೀಗಢದಲ್ಲಿನ ಆಸ್ತಿಯನ್ನು ಎನ್ ಐಎ ಶನಿವಾರ (ಸೆಪ್ಟೆಂಬರ್ 23) ಜಪ್ತಿ ಮಾಡಿಕೊಂಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Karnataka Congress ; ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು 28 ವೀಕ್ಷಕರ ನೇಮಕ
ಇತ್ತೀಚೆಗಷ್ಟೇ ಕೆನಡಾದಲ್ಲಿರುವ ಹಿಂದೂಗಳು ದೇಶವನ್ನು ತೊರೆಯುವಂತೆ ಪನ್ನು ಎಚ್ಚರಿಕೆ ನೀಡಿದ್ದ. ಅಲ್ಲದೇ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹಿಂದೆ ಭಾರತ ರಾಯಭಾರ ಕಚೇರಿಯ ಕೈವಾಡವಿದೆಯೇ ಎಂಬುದನ್ನು ತಿಳಿಯಲು ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಘೋಷಿಸಿದ್ದ.
ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ(ಯುಎಪಿಎ) 1967ರ ಸೆಕ್ಷನ್ 33(5)ರ ಅನ್ವಯ ಪನ್ನುವಿನ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಎನ್ ಐಎ ವಿಶೇಷ ಕೋರ್ಟ್ ಅನ್ನು ಸಂಪರ್ಕಿಸಿರುವುದಾಗಿ ವರದಿ ವಿವರಿಸಿದೆ.
ಕೆಲವು ತೀವ್ರವಾದಿ ವಿದೇಶಿ ಸಿಖ್ ಪ್ರಜೆಗಳು ಅಮೆರಿಕ, ಕೆನಡಾ, ಬ್ರಿಟನ್ ನಲ್ಲಿ ಎಸ್ ಎಫ್ ಜೆ ಸಂಘಟನೆ ಹೊಂದಿದ್ದು, ಇದು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದಾಗಿ ಘೋಷಿಸಲಾಗಿತ್ತು. 2019ರ ಜುಲೈ 10ರಂದು ಕೇಂದ್ರ ಸರ್ಕಾರ ಎಫ್ ಜೆಐ ಅನ್ನು ನಿಷೇಧಿತ ಉಗ್ರಗಾಮಿ ಸಂಘಟನೆ ಎಂದು ಘೋಷಿಸಿ ಐದು ವರ್ಷಗಳವರೆಗೆ ನಿಷೇಧ ಹೇರಿತ್ತು.