ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಮತ್ತು ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆಯ ಕಣ್ಗಾವಲಿನಿಂದ ಕಳವಳಕ್ಕೀಡಾಗಿರುವ ಪಾಕಿಸ್ತಾನವು, ತನ್ನ ಉದ್ದೇಶ ಈಡೇರಿಕೆಗಾಗಿ ಕಣಿವೆಯಲ್ಲಿನ ಪತ್ರಕರ್ತರು ಹಾಗೂ ವಿದ್ಯಾರ್ಥಿಗಳನ್ನು ಕೈಗೊಂಬೆಯಾಗಿಸಲು ಆರಂಭಿಸಿದೆ. ಇವರನ್ನು ಭಯೋತ್ಪಾದನೆಗೆ ನೇಮಕ ಮಾಡಿಕೊಂಡು, ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಸಲಾಗುತ್ತಿದೆ.
ಉಗ್ರ ಸಂಚು ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಸಲ್ಲಿಸಿರುವ 2 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ.
ಆಡಿಯೋ ರೆಕಾರ್ಡಿಂಗ್‌ಗಳು, ಬರಹಗಳು, ವಿಚಾರಣೆಯಿಂದ ಹೊರಬಂದ ಅಂಶಗಳನ್ನೆಲ್ಲ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿರುವ ಎನ್‌ಐಎ, “ಉಗ್ರ ಸಂಘಟನೆಗಳಿಗಾಗಿ ಕೆಲಸ ಮಾಡುವ ಭೂಗತ ವ್ಯಕ್ತಿಗಳು ಈಗ ಐಎಸ್‌ಐ ಬೆಂಬಲಿತ ದಿ ರೆಸಿಸ್ಟೆಂಟ್ ಫ್ರಂಟ್(ಟಿಆರ್‌ಎಫ್)ನ ಹೈಬ್ರಿಡ್ ಭಯೋತ್ಪಾದಕರಾಗಿ ಬದಲಾಗಿದ್ದಾರೆ. ಅವರಿಗೆ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಪರ ಮೃದು ಧೋರಣೆಯುಳ್ಳವರು ಮತ್ತು ಕಾಶ್ಮೀರದ ಆಡಳಿತಾರೂಢ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಂಥ ಕೆಲಸ ಕೊಡಲಾಗಿದೆ. ಪತ್ರಕರ್ತರು, ವಿದ್ಯಾರ್ಥಿಗಳಿಗೆ ಸಣ್ಣಮಟ್ಟಿನ ಶಸ್ತ್ರಾಸ್ತ್ರಗಳನ್ನು ನೀಡಿ ದಾಳಿ ಮಾಡಿಸಲಾಗುತ್ತದೆ’ ಎಂದು ಹೇಳಿದೆ.
ಪಾಕ್‌ನಿಂದಲೇ ಕಮಾಂಡ್:
ಕಣಿವೆಯಲ್ಲಿ ನಡೆಯುವ ಎಲ್ಲ ವಿಧ್ವಂಸಕ ಕೃತ್ಯಗಳೂ ಪಾಕಿಸ್ತಾನ ಮೂಲದ ಉಗ್ರ ಕಮಾಂಡರ್‌ಗಳ ಸೂಚನೆ ಮೇರೆಗೆ ನಡೆಯುತ್ತವೆ. ಇವರ ನಿರ್ದೇಶನದ ಅನ್ವಯ ಉಗ್ರ ಇಶ್ಫಾಕ್ ಅಮೀನ್ ವಾನಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಜೆಕೆ ಅಪ್ನಿ ಪಾರ್ಟಿ ನಾಯಕ ಅಲ್ತಾಫ್ ಬುಖಾರಿ, ಬಿಜೆಪಿಯ ಹೀನಾ ಬೇಗ್ ಸೇರಿದಂತೆ ಇತರೆ ಕಾರ್ಯಕರ್ತರನ್ನು ಹತ್ಯೆಗೈದಿದ್ದಾನೆ.
ಅಲ್ಲದೇ, ಕೋರ್ಟ್ ಸಂಕೀರ್ಣ, ಸಿಆರ್‌ಪಿಎಫ್ ನ ಕ್ಯಾಂಪ್‌ನಲ್ಲಿ ದಾಳಿಯನ್ನೂ ನಡೆಸಿದ್ದಾನೆ ಎಂದೂ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
2021ರ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಟಿಆರ್‌ಎಫ್ ಉಗ್ರರು 40 ನಾಗರಿಕರನ್ನು ಹತ್ಯೆಗೈದಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ.