ಮುಂಬೈ: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹೊಂಚು ಹಾಕಿದ್ದ 7 ಐಸಿಸ್ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪ ಪಟ್ಟಿ ಸಲ್ಲಿಸಿದೆ.
ಪುಣೆ ಮೂಲದ ಐಸಿಸ್ ಮಾಡ್ನೂಲ್ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಮೊಹಮ್ಮದ್ ಇಮ್ರಾನ್ ಅಲಿಯಾಸ್ ಮಟ್ಕಾ, ಮೊಹಮ್ಮದ್ ಯೂನಸ್ ಅಲಿಯಾಸ್ ಆದಿಲ್, ಮಹಾರಾಷ್ಟ್ರದ ಪೂಣೆಯ ಖಾದಿರ್ ದಸ್ತಗಿರ್ ಪಠಾಣ್ ಅಲಿಯಾಸ್ ಅಬ್ದುಲ್ ಖಾದಿರ್, ಸೀಮಬ್ ನಾಸಿರುದ್ದೀನ್ ಖಾಜಿ, ಮಹಾರಾಷ್ಟ್ರದ ಥಾಣೆಯ ಜುಲ್ಫಿಕರ್ ಅಲಿ ಬರೋಡಾವಾಲಾ ಅಲಿಯಾಸ್ ಲಾಲಾಬಾಯ್, ಶಾಮಿಲ್ ಸಾಕೀಬ್ ನಾಚನ್ ಹಾಗೂ ಆಕಿಫ್ ಅತೀಕ್ ನಾಚನ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ.
ಈ ಐಸಿಸ್ ಉಗ್ರರು ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಗ್ರ ದಾಳಿಗಳನ್ನು ನಡೆಸಲು ಹೊಂಚು ಹಾಕಿದ್ದರು. ಅಲ್ಲದೇ ಈ ಕೃತ್ಯಗಳಿಗಾಗಿ ದೇಣಿಗೆ ಸಂಗ್ರಹಿಸುತ್ತಿದ್ದರು. ಆರೋಪಿಗಳ ಬಂಧನದ ವೇಳೆ ಸುಧಾರಿತ ಸ್ಫೋಟಕ ಸಾಧನಗಳು(ಐಇಡಿ), ಶಸ್ತ್ರಾಸ್ತ್ರಗಳು ಹಾಗೂ ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಇದ್ದು, ಈ ಪ್ರಕರಣದಲ್ಲಿ ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್‌ಗಳ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.