Advertisement

ಇಪ್ಪತ್ತು ದಿನ ಬಂಟ್ವಾಳದಲ್ಲಿ ಬೀಡುಬಿಟ್ಟಿದ್ದ ಎನ್‌ಐಎ

01:04 AM Mar 15, 2023 | Team Udayavani |

ಬಂಟ್ವಾಳ: ಪಟ್ನಾದ ಪುಲ್ವಾರಿ ಶರೀಫ್ ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗೆ ಬಹುರಾಜ್ಯ ಹವಾಲಾ ಜಾಲದ ಮೂಲಕ ಹಣಕಾಸು ನೆರವು ಒದಗಿಸಿದ್ದ ಆರೋಪಿಗಳನ್ನು ಸೆರೆಹಿಡಿಯುವುದಕ್ಕಿಂತ 20 ದಿನ ಮೊದಲೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಆರೋಪಿಗಳ ಮೇಲೆ ತೀವ್ರ ನಿಗಾ ಇರಿಸಿ ಎಲ್ಲ ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿಕೊಂಡೇ ಕಾರ್ಯಾಚರಣೆಗೆ ಇಳಿದಿದ್ದರು ಎಂಬುದು ಈಗ ಬಹಿರಂಗವಾಗಿದೆ.

Advertisement

ಎನ್‌ಐಎದ ಅಧಿಕಾರಿಗಳು ಬಂಟ್ವಾಳ ನಂದಾವರದ ಮೂವ ರನ್ನು ಈಗಾಗಲೇ ಬಂಧಿಸಿ ಪಟ್ನಾಕ್ಕೆ ಕರೆದೊಯ್ದಿದ್ದಾರೆ. ಪುಲ್ವಾರಿ ಶರೀಫ್ ಭಯೋತ್ಪಾದಕ ಚಟುವಟಿಕೆಯ ಆರೋಪಿಯ ಖಾತೆಗೆ ಬಂಟ್ವಾಳ ಭಾಗದಿಂದ ಹಣ ಸಂದಾಯವಾಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳಕ್ಕೆ ಬಂದಿದ್ದ ಎನ್‌ಐಎ ತಂಡ ಇಲ್ಲೇ ಬೀಡು ಬಿಟ್ಟು ಹಲವು ತಂತ್ರಗಾರಿಕೆಯ ಮೂಲಕ ಆರೋಪಿಗಳನ್ನು ಮಟ್ಟ ಹಾಕಿದೆ. ಎನ್‌ಐಎ ಅಧಿಕಾರಿಗಳು ಬಂಟ್ವಾಳದಲ್ಲಿ ಇದ್ದುದು ಸ್ಥಳೀಯ ಪೊಲೀಸರಿಗೂ ಗೊತ್ತಿರಲಿಲ್ಲ.

ಆರೋಪಿಗಳು ಕೂಡ ಬಹಳ ಎಚ್ಚರಿಕೆಯಿಂದ ಹಣ ವರ್ಗಾವಣೆ ಮಾಡುತ್ತಿದ್ದ ಕಾರಣ ಪ್ರಾರಂಭದಲ್ಲಿ ಇವರೇ ಆರೋಪಿಗಳು ಎಂಬ ನಿಖರ ಮಾಹಿತಿ ಇರಲಿಲ್ಲ. ಹಲವು ದಿನಗಳ ಕಾಲ ಅವರ ಚಲನವಲಗಳನ್ನು ಸೂಕ್ಷ್ಮವಾಗಿ ಗಮನಿಸಿದ ಎನ್‌ಐಎ ಅಧಿಕಾರಿಗಳ ತಂಡ ಅಗತ್ಯವಾದ ಎಲ್ಲ ರೀತಿಯ ಸಾಕ್ಷ್ಯಗಳನ್ನು ಕಲೆಹಾಕಿ ಬಳಿಕ ಅವರನ್ನು ಬಂಧಿಸಿ ಕರೆದೊಯ್ದಿದೆ.

ಆರೋಪಿಗಳ ಚಲನವಲನದತ್ತ ನಿಗಾ
ಮಾ. 5ರಂದು ಅಧಿಕೃತ ದಾಳಿ ನಡೆಸಿದ್ದರೂ ಎನ್‌ಐಎ ತಂಡ ಮಾಹಿತಿ ಕಲೆ ಹಾಕುವ ದೃಷ್ಟಿಯಿಂದ ಹಲವು ದಿನಗಳ ಹಿಂದೆಯೇ ಬಂಟ್ವಾಳ ನಂದಾವರಕ್ಕೆ ಆಗಮಿಸಿತ್ತು. ಪ್ರಮುಖ ಆರೋಪಿಗಳ ಚಲನವಲನದ ಮೇಲೆ ಕೂಲಂಕಷ ನಿಗಾ ಇರಿಸುವ ಜತೆಗೆ ಅವರಿಗೆ ನೆರವು ನೀಡುತ್ತಿರುವವರ ಕುರಿತು ಕೂಡ ಪೂರ್ಣ ವಿವರ ಸಂಗ್ರಹಿಸಿತ್ತು. ಈ ಪ್ರಕರಣದಲ್ಲಿ ಬಂಧಿತರು ಮಾತ್ರ ಆರೋಪಿಗಳೇ ಅಥವಾ ಇನ್ನೂ ಹಲವರು ಇದ್ದಾರೆಯೇ ಎಂಬ ಮಾಹಿತಿಯನ್ನು ಅಧಿಕಾರಿಗಳು ಗೌಪ್ಯವಾಗಿರಿಸಿದ್ದಾರೆ.

ಎನ್‌ಐಎ ತಂಡ ಹಲವು ದಿನಗಳ ಮುಂಚಿತ ವಾಗಿಯೇ ಬಂದು ಮೆಲ್ಕಾರ್‌, ನಂದಾವರ ಭಾಗದಲ್ಲಿ ಠಿಕಾಣಿ ಹೂಡಿದ ಪರಿಣಾಮ ಪ್ರಕರಣದ ಆರೋಪಿಗಳ ಪೂರ್ಣ ವಿವರ ಸಂಗ್ರಹಿಸಲು ಸಾಧ್ಯವಾಗಿದ್ದು, ತಮ್ಮ ಅಕ್ರಮ ಚಟುವಟಿಕೆಗಳನ್ನು ಎನ್‌ಐಎ ಗಮನಿಸುತ್ತಿದೆ ಎಂಬ ಸಣ್ಣ ಸುಳಿವು ಕೂಡ ಆರೋಪಿಗಳಿಗೆ ಲಭಿಸದಂತೆ ಕಾರ್ಯಾಚರಣೆ ನಡೆಸಲಾಗಿದೆ.

Advertisement

ಜನರ ನಡುವೆಯೇ ಇದ್ದ ಆರೋಪಿಗಳು!
ಬಂಧಿತರಾಗಿರುವ ಬಂಟ್ವಾಳ ನಂದಾವರ ಮೂಲದ ಮಹಮ್ಮದ್‌ ಸಿನಾನ್‌, ಇಕ್ಬಾಲ್‌, ನವಾಜ್‌ ಸಮಾಜದಲ್ಲಿ ಇತರರಂತೆ ಬೇರೆ ಬೇರೆ ವೃತ್ತಿಯಲ್ಲಿದ್ದರು. ಮಹಮ್ಮದ್‌ ಸಿನಾನ್‌ ಹಾಗೂ  ನವಾಜ್‌ ಮೆಲ್ಕಾರಿನಲ್ಲಿ ಬಂಟ್ವಾಳ ಆರ್‌ಟಿಒ ಕಚೇರಿಯ ಬಳಿ ಸೇವಾ ಕೇಂದ್ರವನ್ನು ಹೊಂದಿದ್ದು, ಸಿನಾನ್‌ ಆರ್‌ಟಿಒ ಬ್ರೋಕರ್‌ ಆಗಿಯೂ ಕೆಲಸ ಮಾಡುತ್ತಿದ್ದ. ಇಕ್ಬಾಲ್‌ ಉದ್ಯಮಿಯ ರೀತಿಯ ಕೆಲಸ ಮಾಡುತ್ತಿದ್ದ. ಊರಿನವರಿಗೆ ತಮ್ಮ ಕೃತ್ಯದ ಕುರಿತು ಯಾವುದೇ ರೀತಿಯ ಸುಳಿ ವನ್ನು ಬಿಟ್ಟುಕೊಡದೆ ಹಣ ವರ್ಗಾವಣೆಯ ದಂಧೆ ನಡೆಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next