ಹೊಸದಿಲ್ಲಿ: “ಸೆಕ್ಸ್‌ಸ್ಲೇವ್’, ಬಲವಂತದ ಮತಾಂತರ ಪ್ರಕರಣದ ಸಂತ್ರಸ್ತೆ ಮನವಿಗೆ ಅಂತೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯಿಂದ ನ್ಯಾಯ ಸಿಗುವ ಮುನ್ಸೂಚನೆ ಸಿಕ್ಕಿದೆ. ಆಕೆಯ ಪತಿ, ಬೆಂಗಳೂರಿನ ನಾಲ್ವರು ಸಹಿತ ಒಟ್ಟು 9 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ವಿವಾದಿತ ಧರ್ಮಗುರು ಝಾಕೀರ್ ನಾೖಕ್ ಅವರ “ಪ್ರಭಾವ’ವೂ ಕೆಲಸ ಮಾಡಿದೆ ಎನ್ನುವುದೂ ಬಹಿರಂಗವಾಗಿದೆ.
ಈ ಸಂಬಂಧ ಇಲ್ಲಿನ ಎನ್‌ಐಎ ಅಧಿಕೃತವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಕರಣದ ವಿವರ, ಬಂಧಿತರ ವಿವರಗಳನ್ನೂ ನೀಡಿದೆ. ಬಂಧಿತರನ್ನು ಕೇರಳದ ಪೆರುವಾರಮ್ ಮಣ್ಣಮ್‌ನ ಮಹಮ್ಮದ್ ರಿಯಾದ್ ರಶೀದ್, ಕಣ್ಣೂರಿನ ಪೆರಿಗಾಡಿಯ ನಾಹಸ್ ಅಬ್ದುಲ್ ಖಾದರ್, ಮಹಮ್ಮದ್ ನಾಝೀಶ್ ಟಿ.ಕೆ., ಅಬ್ದುಲ್ ಮುಹಸ್ಸಿನ್ ಕೆ., ಪೆರುವಾರಮ್‌ನ ಫವಾಸ್ ಜಮಾಲ್, ಬೆಂಗಳೂರಿನ ಆರ್.ಟಿ. ನಗರದ ದಾನೀಶ್ ನಝೀಬ್, ಮೊಯಿನ್ ಪಟೇಲ್, ಡೈಮಂಡ್ ಸ್ಟ್ರೀಟ್‌ನ ಗಾಝಿಲಾ ಮತ್ತು ಇಲಿಯಾಸ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.
ಇವರೆಲ್ಲರ ವಿರುದ್ಧ ಕೇರಳದ ಉತ್ತರ ಪೆರುವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ದೇಶವಿರೋಧಿ ಚಟುವಟಿಕೆ (ನಿಗ್ರಹ), ಅಪರಾಧ ಸಂಚು, ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂಥ ಕೆಲಸಗಳಿಗೆ ಪ್ರಚೋದನೆ, ಮಾನವ ಕಳ್ಳಸಾಗಣೆ, ಅತ್ಯಾಚಾರ, ಫೋರ್ಜರಿ, ಐಸಿಸ್ ಉಗ್ರ ಸಂಘಟನೆಗೆ ಸೇರಿಸುವ ಸಲುವಾಗಿ ಬಲವಂತದ ಮತಾಂತರ ಮಾಡಿದ ಆರೋಪಗಳನ್ನು ಹೊರಿಸಲಾಗಿದೆ. ಅಲ್ಲದೆ ಬಾಂಗ್ಲಾದೇಶ ಬಾಂಬ್ ಸ್ಫೋಟದ ಆರೋಪಿ, ಭಾರತದಿಂದ ತಪ್ಪಿಸಿಕೊಂಡು ವಿದೇಶಕ್ಕೆ ಪಲಾಯನ ಮಾಡಿರುವ ವಿವಾದಿತ ಧರ್ಮಗುರು ಝಾಕೀರ್ ನಾೖಕ್ ಹೆಸರನ್ನೂ ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ. ಈತನ ಶಿಷ್ಯೆಯಾಗುವಂತೆ ಸಂತ್ರಸ್ತೆಗೆ ಒತ್ತಾಯಿಸಿದ್ದಲ್ಲದೇ, ಬಲವಂತವಾಗಿ ಮತಾಂತರ ಮಾಡಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ ಎನ್ನಲಾಗಿದೆ.
ಬೆಂಗಳೂರು ನಂಟು ಹೇಗೆ?: 2016ರಲ್ಲಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಗುಜರಾತ್‌ನ ಈ ಮಹಿಳೆಗೆ ರಿಯಾಜ್ ರಶೀದ್‌ನ ಪರಿಚಯವಾಗಿತ್ತು. ಬಳಿಕ ಆಕೆಗೆ ರಿಯಾಜ್ ಜತೆ ಸಲುಗೆ ಬೆಳೆದಿತ್ತು. ಈ ಸಂದರ್ಭದಲ್ಲಿ ಕೆಲವು ಖಾಸಗಿ ಸಂಗತಿಗಳ ಫೋಟೋ ತೆಗೆದುಕೊಂಡಿದ್ದಲ್ಲದೆ, ವೀಡಿಯೋ ಮಾಡಿಕೊಂಡಿದ್ದ. ರಶೀದ್ ಈ ಮೂಲಕ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡು ತ್ತಿದ್ದ. ಬಳಿಕ ಆಕೆಯನ್ನು ಕೇರಳದಲ್ಲಿರುವ ತನ್ನ ಊರಿಗೆ ಕರೆದೊಯ್ದು ಬಲವಂತವಾಗಿ ಮತಾಂತರ ಮಾಡಿಸಿ, ಸ್ಥಳೀಯ ಮೌಲ್ವಿಯೊಬ್ಬರ ಸಮ್ಮುಖದಲ್ಲಿ ವಿವಾಹವಾಗಿದ್ದ. ಅಲ್ಲದೆ, ವಿವಾದಿತ ಧರ್ಮಗುರು ಝಾಕೀರ್ ನಾೖಕ್‌ನ ಶಿಷ್ಯೆಯಾಗುವಂತೆ ಒತ್ತಾಯಿಸಿದ್ದಲ್ಲದೆ, ಸೌದಿ ಅರೇಬಿಯಾಗೆ ಕರೆದೊಯ್ದು ಅಲ್ಲಿ ಆಕೆಯನ್ನು ಐಸಿಸ್ ಉಗ್ರರಿಗೆ ಮಾರಾಟ ಮಾಡಲು ಯತ್ನಿಸಿದ್ದ. ಅದೃಷ್ಟವಶಾತ್ ಆಕೆ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಈ ಪ್ರಕರಣದಲ್ಲಿ ಎನ್‌ಐಎ ಝಾಕೀರ್ ನಾೖಕ್ ಹೆಸರು ಪ್ರಸ್ತಾವ ಮಾಡಿದ್ದರೂ ನೇರವಾಗಿ ಮತಾಂತರ ಮತ್ತು ಉಗ್ರರಿಗೆ ಮಾರಾಟ ಮಾಡುವ ವಿಚಾರದಲ್ಲಿ ಸಂಬಂಧವಿದೆಯೇ ಎಂಬ ಬಗ್ಗೆ ವಿವರ ನೀಡಿಲ್ಲ.
ಇನ್ನೂ 90 ಪ್ರಕರಣ
ಇದು ಕೇವಲ ಗುಜರಾತ್ ಮೂಲದ ಮಹಿಳೆಯ ಕಥೆ ಅಲ್ಲ. ಇದೇ ರೀತಿ ಇನ್ನೂ 90 ಪ್ರಕರಣಗಳು ಗಮನಕ್ಕೆ ಬಂದಿವೆ ಎಂದು ರಾಷ್ಟ್ರೀಯ ತನಿಖಾ ದಳವೇ ಹೇಳಿಕೊಂಡಿದೆ. ಅಲ್ಲದೆ, ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಕೇರಳದ ಹದಿಯಾ ಪ್ರಕರಣದ ವಿಚಾರಣೆಯೂ ಲವ್ ಜೆಹಾದ್ ಹಾದಿಯಲ್ಲೇ ನಡೆಯುತ್ತಿದೆ. ಇದೇ ಆರೋಪದ ಸಂಬಂಧ ಹದಿಯಾಳ ವಿವಾಹವನ್ನೇ ಕೇರಳ ಹೈಕೋರ್ಟ್ ಅಸಿಂಧು ಎಂದು ಘೋಷಿಸಿದೆ.