Advertisement

ಹೆದ್ದಾರಿ ಸುತ್ತ-ಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್

09:04 PM Apr 24, 2020 | Sriram |

ಮಂಗಳೂರು: ಕೋವಿಡ್ 19ದಿಂದ ಗುರುವಾರ ಮೃತಪಟ್ಟ ಬಂಟ್ವಾಳದ 75 ವರ್ಷದ ವೃದ್ದೆ ಈ ಹಿಂದೆ ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯುತ್ತಿದ್ದ ಪಡೀಲಿನ ಫಸ್ಟ್‌ ನ್ಯೂರೋ ಆಸ್ಪತ್ರೆ ಆವರಣವನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್‌ಡೌನ್‌ ಮಾಡಿರುವುದರಿಂದ ಶುಕ್ರವಾರ ಈ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

Advertisement

ಸೀಲ್‌ಡೌನ್‌ ಆದ ದಿನವೇ ಪೊಲೀಸರು ಪ್ರತಿ ಮನೆಗೆ ತೆರಳಿ ಮನೆಯಿಂದ ಹೊರ ಬಾರದೆಂದು ಜನಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಜನ ಆದೇಶ ಪಾಲನೆ ಮಾಡಿದ್ದು, ಇಡೀ ಪ್ರದೇಶ ಬಿಕೋ ಎನ್ನುವಂತಿತ್ತು. ಆಸ್ಪತ್ರೆಯ ಮುಂಭಾಗದಲ್ಲಿ ಪೊಲೀಸರ ಕಾವಲು ಹಾಕಲಾಗಿದೆ. ಆಸ್ಪತ್ರೆಯ ಒಳಗೆ ಹೋಗಲು, ಆಸ್ಪತ್ರೆಯಿಂದ ಹೊರ ಬರಲು ಯಾವುದೇ ರೋಗಿಗಳು ಅಥವಾ ಇತರ ಜನರಿಗೆ ಅವಕಾಶವಿರಲಿಲ್ಲ.

ಏಕಮುಖ ಸಂಚಾರಕ್ಕೆ ವ್ಯವಸ್ಥೆ
ಆಸ್ಪತ್ರೆ ಮುಂಭಾಗದಲ್ಲಿರುವ ಹೆದ್ದಾರಿಯಲ್ಲಿ ತುರ್ತು ವಾಹನಗಳಿಗೆ ಏಕಮುಖ ಸಂಚಾರಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಪುತ್ತೂರು, ಬಂಟ್ವಾಳ ಭಾಗದಿಂದ ಮಂಗಳೂರು ನಗರಕ್ಕೆ ಪ್ರವೇಶ ಪಡೆಯುವ ರಸ್ತೆಗೆ ಆಸ್ಪತ್ರೆ ಮುಂಭಾಗ ಅಡ್ಡಲಾಗಿ ಬ್ಯಾರಿಕೇಡ್‌ ಅಳವಡಿಸಿ ಮುಚ್ಚಲಾಗಿತ್ತು. ಆದರೆ, ಮಂಗಳೂರಿನಿಂದ ಈ ರಸ್ತೆಯಾಗಿ ಬಂಟ್ವಾಳ ಕಡೆಗೆ ಸಾಗುವ ತುರ್ತು ವಾಹನಗಳಿಗೆ ರಸ್ತೆಯಲ್ಲಿ ಅವಕಾಶ ಕೊಡಲಾಗಿತ್ತು. ಆ ಕಡೆಯಿಂದ ಬರುವ ವಾಹನಗಳಿಗೂ ಇದೇ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಸ್ತುತ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಹೆದ್ದಾರಿಯಲ್ಲಿ ತುರ್ತು ಸೇವೆಗಳ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಓಡಾಟ ಇರುವುದಿಲ್ಲ. ಆದರೆ, ಬೆಳಗ್ಗೆ 7ರಿಂದ 12ರ ತನಕ ದಿನಸಿ ಅಂಗಡಿಗಳು ತೆರೆದಿರುವುದರಿಂದ ಆ ಸಮಯದಲ್ಲಿ ಇಲ್ಲಿ ಜನರ ಓಡಾಟ ಇರುತ್ತಿತ್ತು. ಆದರೆ, ಇದೀಗ ಸೀಲ್‌ಡೌನ್‌ ಮಾಡಿರುವುದರಿಂದ ಜನ ಮನೆಯಿಂದ ಹೊರ ಬರಬಾರದು ಎಂಬ ಆದೇಶವೂ ಇರುವುದರಿಂದ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿತ್ತು.

ಕಂಟೈನ್ಮೆಂಟ್‌ ಝೋನ್‌ಗಳಲ್ಲಿಲ್ಲ ಓಡಾಟ
ಆಸ್ಪತ್ರೆಯ ಪೂರ್ವಭಾಗದಿಂದ ಕನ್ನಗುಡ್ಡೆ, ಪಶ್ಚಿಮದಿಂದ ರಮಾನಾಥ್‌ ಕೃಪಾ ರೈಸ್‌ ಮಿಲ್‌, ಉತ್ತರಕ್ಕೆ ರಾ.ಹೆ. 73 ದಕ್ಷಿಣಕ್ಕೆ ಸರಕಾರಿ ಜಾಗದ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಜಿಲ್ಲಾಡಳಿತ ಈಗಾಗಲೇ ಘೋಷಣೆ ಮಾಡಿ ಆದೇಶಿಸಿದೆ.

Advertisement

ಬ್ಯಾರಿಕೇಡ್‌ ಅಳವಡಿಕೆ
ಆಸ್ಪತ್ರೆ ಸನಿಹದಲ್ಲೇ ಇರುವ ಎರಡು ಅಂಗಡಿ ಮತ್ತು ಐದು ಮನೆಗಳನ್ನೂ ಸೀಲ್‌ಡೌನ್‌ ಮಾಡಲಾಗಿರುವುದರಿಂದ ಜನ ಮನೆಯೊಳಗೇ ಬಾಕಿಯಾಗಿದ್ದಾರೆ. ಸೀಲ್‌ಡೌನ್‌ ಮಾಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಬಫರ್‌ ಝೋನ್‌ ವ್ಯಾಪ್ತಿಯಲ್ಲಿರುವ ಪ್ರದೇಶಗಳು
ಸೀಲ್‌ಡೌನ್‌ ಮಾಡಿದ ಪರಿಸರದ 5 ಕಿ.ಮೀ. ವ್ಯಾಪ್ತಿಯನ್ನು ಬಫರ್‌ ಝೋನ್‌ ಎಂದೂ ಘೋಷಣೆ ಮಾಡಲಾಗಿದೆ. 42 ಸಾವಿರ ಮನೆ, 1,800 ಅಂಗಡಿ ಮತ್ತು ಕಚೇರಿ, 1.8 ಲಕ್ಷ ಜನರು ಬಫರ್‌ ಝೋನ್‌ ಅಡಿಯಲ್ಲಿ ಬರುತ್ತಾರೆ. ಪೂರ್ವಕ್ಕೆ ಕಲ್ಲಾಪು, ಪಶ್ಚಿಮಕ್ಕೆ ಕುಡುಪು, ಉತ್ತರಕ್ಕೆ ಫರಂಗಿಪೇಟೆ, ದಕ್ಷಿಣಕ್ಕೆ ಫಳ್ನೀರ್‌ ಬಫರ್‌ ಝೋನ್‌ ವ್ಯಾಪ್ತಿಯಲ್ಲಿರುವ ಪ್ರದೇಶಗಳು.

ಒಳರೋಗಿಗಳಿಗೆ ಆಹಾರ
ಪೂರೈಕೆಗೆ ಆಗ್ರಹ
ಸುಳ್ಯ: ಕೋವಿಡ್ 19 ಪಾಸಿಟಿವ್‌ ಮಹಿಳೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಂಗಳೂರು ಪಡೀಲ್‌ ಫಸ್ಟ್‌ ನ್ಯೂರೋ ಆಸ್ಪತ್ರೆ ಸೀಲ್‌ಡೌನ್‌ ಆಗಿದ್ದು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವರಿಗೆ ಹಾಗೂ ಮನೆಯವರಿಗೆ ಕ್ಯಾಂಟಿನ್‌ ವ್ಯವಸ್ಥೆ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಆಹಾರ ಪೂರೈಕೆ ಆಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next