ಮುಂಬಯಿ: ನಗರದ ಒಳಚರಂಡಿಗಳನ್ನು ಸರಿಯಾಗಿ ಸಂಸ್ಕರಿಸದಿರುವುದು, ಕೊಳಚೆ ನೀರಿನಲ್ಲಿ ಘನತ್ಯಾಜ್ಯ, ಪ್ಲಾಸ್ಟಿಕ್ ಅನ್ನು ಸಮುದ್ರ, ಕೊಲ್ಲಿಯಲ್ಲಿ ಹರಿದುಬಿಡುವ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡಿದ ಕಾರಣಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಾಮಂಡಳಿ( ಎನ್‌ಜಿಟಿ)ಯು ಮುಂಬಯಿ ಮಹಾನಗರ ಪಾಲಿಕೆಗೆ 29.75 ಕೋಟಿ ರೂ. ದಂಡ ವಿಧಿಸಿದೆ.
2018ರಲ್ಲಿ ವನಶಕ್ತಿ ಪರಿಸರ ಸಂಸ್ಥೆಯ ಡಿ. ಸ್ಟಾಲಿನ್ ಅವರು ಈ ನಿಟ್ಟಿನಲ್ಲಿ ಎನ್‌ಜಿಟಿ ಅರ್ಜಿ ಸಲ್ಲಿಸಿದ್ದರು. ನಗರದ ಕೊಳಚೆನೀರನ್ನು ಸಂಸ್ಕರಣೆ ಮಾಡದೆ ಸಮುದ್ರಕ್ಕೆ ಹೊರಬಿಡುವುದರಿಂದ ನೀರಿನ ಮಾಲಿನ್ಯ ಹೆಚ್ಚಾಗುವುದರ ಬಗ್ಗೆ ಈ ಅರ್ಜಿಯಲ್ಲಿ ಹೇಳಲಾಯಿತು. ಕಳೆದ ಎರಡು ವರ್ಷಗಳಲ್ಲಿ, ಎನ್‌ಜಿಪಿ ಕಾಲಕಾಲಕ್ಕೆ ವಿವಿಧ ಸಮಸ್ಯೆಗಳನ್ನು ಎತ್ತಿದ್ದು, ಇದು ವಿವಿಧ ತಜ್ಞರ ವರದಿಗಳನ್ನು ಆಧರಿಸಿದೆ.
ನಗರದ ದೈನಂದಿನ ಶೇ.25 ರಷ್ಟು ಒಳಚರಂಡಿಯ ನೀರನ್ನು ಸಂಸ್ಕರಣೆಯಿಲ್ಲದೆ ಹೊರಹಾಕಲಾಗುತ್ತಿದೆ ಎಂಬ ವಿಜೆಟಿಐ ವರದಿಯನ್ನು ಎನ್‌ಜಿಟಿ ಪಡೆದಿದೆ. ಮನಪಾವು ತ್ಯಾಜ್ಯ ನೀರನ್ನು ಸಮುದ್ರಕ್ಕೆ ಹೊರಹಾಕುವ 85 ಸ್ಥಳಗಳಲ್ಲಿ ನೀರನ್ನು ಸರಿಯಾಗಿ ಸಂಸ್ಕರಿಸುವ ಅಗತ್ಯವನ್ನು ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಂಗಳಿಗೆ 4.25 ಕೋಟಿ ರೂ.ಗಳಂತೆ ಇದುವರೆಗೆ 29.75 ಕೋಟಿ ರೂ.ಗಳ ದಂಡವನ್ನು ಪಾವತಿಸಲು 30 ದಿನಗಳ ಅವಧಿಯನ್ನು ಸಹ ನೀಡಿದೆ.
ತ್ಯಾಜ್ಯನೀರನ್ನು ಸಂಸ್ಕರಿಸದಿರುವ ವಿಷಯದ ಜೊತೆಗೆ ಕೊಳಚೆನೀರಿನಲ್ಲಿ ಕೊಳೆಯದ ತ್ಯಾಜ್ಯ ಹೆಚ್ಚಾಗುವುದನ್ನು ಎನ್‌ಜಿಟಿ ಗಮನಿಸಿದೆ. ಚರಂಡಿಗಳಲ್ಲಿ ತ್ಯಾಜ್ಯ ಬೆರೆಸದಂತೆ ವಿಸರ್ಜನೆಗಳಲ್ಲಿ ಬಲೆಗಳನ್ನು ಅಳವಡಿಸಲು ಆದೇಶ ಹೊರಡಿಸಲಾಗಿದೆ. ಸಮುದ್ರದಲ್ಲಿ ಕಲುಷಿತ ನೀರನ್ನು ಬೆರೆಸಿದ್ದರಿಂದ ಮ್ಯಾಂಗ್ರೋಸ್‌ಗಳಿಗೂ ಹಾನಿಯಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ನಷ್ಟವನ್ನು ತಪ್ಪಿಸಲು ಐಐಟಿ ಮುಂಬಯಿ ಸೂಚಿಸಿದ ತಂತ್ರವನ್ನು ಬಳಸುವುದನ್ನು ಕಡ್ಡಾಯವಾಗಿದೆ ಎಂದು ಎನ್‌ಜಿಟಿ ಹೇಳಿದೆ.