ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯ ಭಾರೀ ಪ್ರಮಾಣದ ವಾಯು ಮಾಲಿನ್ಯದ ಕುರಿತು ಹಸಿರು ನ್ಯಾಯಾಧಿಕರಣ ದೆಹಲಿ ಸರ್ಕಾರದ ವಿರುದ್ಧ ಮಂಗಳವಾರ ಕಿಡಿ ಕಾರಿ, ಕಟು ಶಬ್ಧಗಳಿಂದ ಟೀಕಿಸಿದೆ.
ದೆಹಲಿ ಸರ್ಕಾರ ಸೋಮವಾರ ಸಲ್ಲಿಸಿದ್ದ ಸಮ ಬೆಸ ಸಂಖ್ಯೆ ನಿಯಮದಲ್ಲಿ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಬೇಕೆಂಬ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಎನ್‌ಜಿಟಿ ಕಿಡಿ ಕಾರಿದ್ದು,’ಮಾಲಿನ್ಯ ನಿಯಂತ್ರಣಕ್ಕೆ ತರಲು 48 ಗಂಟೆಗಳ ಒಳಗೆ ತುರ್ತು ಕ್ರಮಗಳನ್ನು ಕೈಗೊಳ್ಳಿ’ ಎಂದು ಸೂಚನೆ ನೀಡಿದೆ.
‘ದ್ವಿಚಕ್ರ ವಾಹನಗಳು ಮಾಲಿನ್ಯಕ್ಕೆ ಕಾರಣವಾಗುವುದಿಲ್ಲವೇ’ ಎಂದು ಕೇಜ್ರಿವಾಲ್ ನೇತೃತ್ವದ ಸರ್ಕಾರದ ಮನವಿಯನ್ನು ಎನ್‌ಜಿಟಿ ಪ್ರಶ್ನಿಸಿದೆ.
ಇದೇ ವೇಳೆ ‘ಮಕ್ಕಳಿಗೆ ಸೊಂಕಿತ ಶ್ವಾಸಕೋಶಗಳ ಉಡುಗೊರೆ ನೀಡಬೇಡಿ .ಅವರು ಶಾಲೆಗಳಲ್ಲೂ ಮಾಸ್ಕ್ ಧರಿಸಿ ಕುಳಿತುಕೊಳ್ಳಬೇಕಾಗಿದೆ. ನಿಮ್ಮ ಪ್ರಕಾರ ಆರೋಗ್ಯ ತುರ್ತು ಸ್ಥಿತಿ ಯಾವುದು’ ಎಂದು ಪ್ರಶ್ನಿಸಿದೆ.
ಸರ್ಕಾರ ಮತ್ತು ಎನ್‌ಜಿಟಿ ನಡುವಿನ ಸಂಘರ್ಷದಿಂದಾಗಿ ಸೋಮವಾರದಿಂದ ಆರಂಭವಾಗಬೇಕಾಗಿದ್ದ ಸಮ ಬೆಸ ವಾಹನ ಸಂಚಾರ ರದ್ದಾಗಿದೆ.