Advertisement
ಬೆಳ್ಳಂದೂರು ಕೆರೆ ಮಾಲಿನ್ಯ, ನೊರೆ ಸಮಸ್ಯೆ, ಬೆಂಕಿ ಕಾಣಿಸಿಕೊಂಡಿರುವ ಪ್ರಕರಣದ ಕುರಿತು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಹಸಿರು ನ್ಯಾಯಪೀಠವು ಕೆರೆ ನಿರ್ವಹಣೆಗಾಗಿ ಕೊಳಚೆ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ತ್ಯಾಜ್ಯ ನಿರ್ವಹಣೆಗೆ ಕೈಗೊಂಡ ಪರಿಣಾಮಕಾರಿ ಕ್ರಮಗಳ ಬಗ್ಗೆಯೂ ವಿಸ್ತ್ರತ ವಿವರ ನೀಡುವಂತೆ ಸೂಚನೆ ನೀಡಿದೆ.
Related Articles
Advertisement
ನಗರದಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದ ವೇಳೆ ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡು ಸ್ಥಳೀಯರು ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ಪೀಠವು ಆ.22ರ ವಿಚಾರಣೆಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು.
ಈ ಕ್ಷಣವೇ ಆಯುಕ್ತರನ್ನು ಕಳುಹಿಸಿ ಪರಿಶೀಲನೆ ನಡೆಸಬಹುದೆ? ಕೆರೆ ಅಂಗಳದಲ್ಲಿನ ಘನ ತ್ಯಾಜ್ಯ, ಕಟ್ಟಡ ಅವಶೇಷ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂಬುದಾಗಿ ವಿಚಾರಣೆ ವೇಳೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ಪ್ರಮಾಣ ಪತ್ರ ಸಲ್ಲಿಸಿದರು. ಆಗ ನ್ಯಾಯಪೀಠವು, ಕೆರೆ ಅಂಗಳ, ಬಫರ್ ಪ್ರದೇಶ, ಸುತ್ತಮುತ್ತಲ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಯಾಗಿದೆಯೇ ಎಂಬುದನ್ನು ಅಧಿಕೃತವಾಗಿ ದೃಢೀಕರಿಸುತ್ತೀರಾ ಎಂದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪಾಧಿಕಾರದ ಸಿಇಒ ಅವರನ್ನು ಪ್ರಶ್ನಿಸಿತು. ಈ ಕ್ಷಣವೇ ಆಯುಕ್ತರನ್ನು ಕೆರೆ ಪರಿಶೀಲನೆಗೆ ಕಳುಹಿಸಬಹುದೇ ಎಂದು ಕೇಳಿತು. ಆದರೆ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರ ಹೇಳಿಕೆಯನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಿಇಒ ನಿರಾಕರಿಸಿದ್ದರಿಂದ ರಾಜ್ಯ ಸರ್ಕಾರದ ವಾದಕ್ಕೆ ಹಿನ್ನೆಡೆವುಂಟಾದಂತಾಯಿತು. ವಿಚಾರಣೆ ಸಂದರ್ಭದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆದಿತ್ಯ ಸೋಂಧಿ, ಕೆರೆಗೆ ಹರಿಯುತ್ತಿರುವ 480 ದಶಲಕ್ಷ ಲೀಟರ್ ಕೊಳಚೆ ನೀರಿನಲ್ಲಿ 308 ದಶಲಕ್ಷ ಲೀಟರ್ ಮಾತ್ರ ಸಂಸ್ಕರಣೆಯಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.