ಬಂಟ್ವಾಳ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣ ಪ್ರದೇಶ ಸಹಿತ ರಾಜ್ಯಾದ್ಯಂತ ನಡೆಸಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರು ಅರಿತಿದ್ದು, ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಕೈರಂಗಳ ಗ್ರಾಮದ ಪೊಯೆಲ್ ರಸ್ತೆಗೆ 8 ಲಕ್ಷ ರೂ. ಶಾಸಕರ ಅನುದಾನದಿಂದ ಡಾಮರು ಕಾಮಗಾರಿಗೆ ಶಿಲಾನ್ಯಾಸ ಮತ್ತು ಮುದುಂಗಾರು ಮಸೀದಿ ರಸ್ತೆಗೆ 9 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣ ಗೊಂಡ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.
ಕೆಲವರು ಗೋ ಸಂಪತ್ತಿನ ರಕ್ಷಣೆಯ ಬಗ್ಗೆ ಮಾತನಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ ರಾಜ್ಯ ಸರಕಾರದ ಗೋಸಾಕಣೆ ಸಂಬಂಧಿಸಿದ ಯೋಜನೆ ಯಿಂದ ಹಲವಾರು ಮಂದಿ ಹೈನುಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಗೋ ಸಂರಕ್ಷಣೆಯ ಬೆಂಬಲದಿಂದ ರಾಜ್ಯದಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಿದ್ದು, ಹೆಚ್ಚುವರಿ ಹಾಲನ್ನು ಬಡವರ ಮಕ್ಕಳು ಕುಡಿಯಬೇಕೆನ್ನುವ ನಿಟ್ಟಿನಲ್ಲಿ ಶಾಲೆಗಳಿಗೆ ಉಚಿತ ಹಾಲು ನೀಡುವ ಕಾರ್ಯ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಬಾಕಿಯಿದ್ದ ಹಕ್ಕುಪತ್ರ ವಿತರಣೆಗೂ ರಾಜ್ಯ ಸರಕಾರ ಚಾಲನೆ ನೀಡಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯರಾದ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಜಲೀಲ್, ನರಿಂಗಾನ ಗ್ರಾ. ಪಂ.ನ ಇಸ್ಮಾಯಿಲ್ ಮೀನಂಕೋಡಿ, ಬಾಳೆಪುಣಿ ಪಂಚಾಯತ್ ಉಪಾಧ್ಯಕ್ಷೆ ವನಿತಾ ಬಿ. ರೈ, ವಲಯಾಧ್ಯಕ್ಷ ಬಾಳೆಪುಣಿ ಜಗದೀಶ್ ಪಲಾಯಿ, ರಾಜಗೋಪಾಲ್ ಭಟ್, ಪಂಚಾಯತ್ ಸದಸ್ಯರಾದ ನಾಸಿರ್ ನಡುಪದವು, ಮುರಳೀಧರ ಶೆಟ್ಟಿ, ಅಬ್ದುಲ್ ರೆಹಮಾನ್, ಅಬ್ದುಲ್ ಖಾದರ್, ಗಣೇಶ್ ನಾಯಕ್, ಸೋಮನಾಥ ನಾಯಕ್, ಜನಾರ್ದನ, ಎಂಜಿನಿಯರ್ ರವಿ, ರಮೇಶ್ ಶೇಣವ, ಬಶೀರ್, ಹನೀಫ್, ಪದ್ಮನಾಭ ನರಿಂಗಾನ ಮತ್ತಿತರರು ಉಪಸ್ಥಿತರಿದ್ದರು.