Advertisement

ಮುಂದಿನ ಟಾರ್ಗೆಟ್‌ ನಾನೇ: ನಿಡುಮಾಮಿಡಿ ಸ್ವಾಮೀಜಿ

06:35 AM Sep 18, 2017 | |

ಬೆಂಗಳೂರು: ಹಂತಕರು ಐವರು ವಿಚಾರವಾದಿಗಳ ಹತ್ಯೆಯ ಗುರಿ ಇಟ್ಟುಕೊಂಡಿದ್ದು, ಅದರಲ್ಲಿ ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶರ ಹತ್ಯೆ ಆಗಿದೆ. ಅವರ ಮುಂದಿನ ಟಾರ್ಗೆಟ್‌ ನಾನು, ಮುಂದೆ  ಭಗವಾನ್‌ ಇರಬಹುದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯವರ ಹತ್ಯೆಯಾಗುವ 15 ದಿನಗಳ ಮುಂಚೆ ಹುಬ್ಬಳ್ಳಿಯಲ್ಲಿ ಕೆಲವೊಂದು ಸಂಘಟನೆಯವರು ಪತ್ರಿಕಾಗೋಷ್ಠಿ ಕರೆದು ಕರ್ನಾಟಕದ ಐದು ಜನ ವಿಚಾರವಾದಿಗಳನ್ನು ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಹೇಳಿದ್ದರು. ಅದಾಗಿ 15 ದಿನಗಳೊಳಗೆ ಕಲುºರ್ಗಿ ಯವರ ಹತ್ಯೆಯಾಗಿದೆ. ಇದೀಗ ಗೌರಿ ಲಂಕೇಶ್‌ ಬಲಿಯಾಗಿದೆ. 3ನೆಯದ್ದು ನನ್ನ ಸರದಿ ಇರಬಹುದು ಎಂದರು.

ಕಲಬುರ್ಗಿಯವರ ಹತ್ಯೆಯ ಹಂತಕರನ್ನು, ಪ್ರಾಯೋಜಕರನ್ನು ಕಂಡು ಹಿಡಿದಿದ್ದರೆ ಗೌರಿ ಹತ್ಯೆ ತಪ್ಪಿಸಬಹುದಾಗಿತ್ತು ಎಂಬುದು ನನ್ನ ಸ್ಪಷ್ಟ ನಿಲುವು. ಕಲಬುರ್ಗಿ ಅವರ ಹತ್ಯೆಯಾಗಿ 2 ವರ್ಷ ಒಂದು ವಾರ ಆಗುವುದರೊಳಗೆ 2ನೇ ಬಲಿಯಾಗಿದೆ. ಅಂದಿನ ಗೃಹ ಸಚಿವರು ಹತ್ಯೆ ಕುರಿತು ಎಷ್ಟು ಕಾಳಜಿ, ಪರಿಣಾಮಕಾರಿ ಕ್ರಮಕೈಗೊಳ್ಳಬೇಕಿತ್ತೋ ಅಷ್ಟು ಕೈಗೊಳ್ಳಲಿಲ್ಲ. ಕಲಬುರ್ಗಿ ಹತ್ಯೆಯ ಹಂತಕರನ್ನು ಪತ್ತೆ ಹಚ್ಚುವಲ್ಲಿ ಆದ ವಿಫ‌ಲತೆಯ ಮುಂದುವರೆದ ಭಾಗವಾಗಿ ಗೌರಿ ಹತ್ಯೆ ಆಗಿದೆ ಎಂದರು.

ಕಲಬುರ್ಗಿ ಅವರ ಹತ್ಯೆ ಬಗ್ಗೆ ಬಹಳ ಸ್ಪಷ್ಟವಾದಂತಹ ಸಾಕ್ಷಿ, ಆಧಾರ ಸರ್ಕಾರದ ಮುಂದೆ ಇತ್ತು. ಅಂದು ಪತ್ರಿಕಾಗೋಷ್ಠಿ ನಡೆಸಿ ಹತ್ಯೆ ಮಾಡುವುದಾಗಿ ಹೇಳಿದ್ದವರನ್ನು ತನಿಖೆಗೊಳಪಡಿಸಿದ್ದರೆ ಎಲ್ಲವೂ ಬಯಲಿಗೆ ಬರುತ್ತಿತ್ತು ಎಂದ ಅವರು, ಹಂತಕರಿಗೆ, ಹತ್ಯೆಯ ಪ್ರಾಯೋಜಕರಿಗೆ ಕಾನೂನಿನ ಭಯವೂ ಇಲ್ಲ. ಸರ್ಕಾರದ ಭಯವೂ ಇಲ್ಲ. ನಾನು ಮೊದಲಿನಿಂದಲೂ ಹೇಳುತ್ತಿರುವಂತೆ ಹತ್ಯೆಯ ಪ್ರಾಯೋಜಕರು, ಪ್ರೇರಕರು ಕರ್ನಾಟಕದವರೇ ಎಂದು ಹೇಳಿದರು.

ವೈಚಾರಿಕ ಮತ್ತು ಸೈದ್ಧಾಂತಿಕ ಕಾರಣಗಳಿಗಾಗಿ ವಿಚಾರವಾದಿಗಳನ್ನು ವಿರೋಧಿಸಿದರೆ, ಜೀವ ಸಹಿತ ಬಿಡಲ್ಲ ಎನ್ನುವ ಈ ದಬ್ಟಾಳಿಕೆ ಸಂಸ್ಕೃತಿ ನಾಗರೀಕ ಸಮಾಜಕ್ಕೆ ಶ್ರೇಯಸ್ಸು ಅಲ್ಲ. ಪ್ರಜಾಪ್ರಭುತ್ವ ರೂಪಗೊಳ್ಳುವ, ಬೆಳೆಯುವ ವಿಧಾನವೂ ಅಲ್ಲ. ಹಾಗಾಗಿ ಯಾವುದೇ ಹಿಂಸಾತ್ಮಕ ಸಂಘಟನೆಗಳು, ಸಾಮಾಜಿಕ ಗುಂಪುಗಳಿರಲೀ ಅಥವಾ ಧಾರ್ಮಿಕ ಅಥವಾ ರಾಜಕೀಯ ಪಕ್ಷಗಳೇ ಇರಲಿ. ಹಿಂಸೆಯ ಸಿದ್ಧಾಂತದಿಂದ ಹೊರಗೆ ಬರಬೇಕು. ಪರಸ್ಪರರನ್ನು ಅಂತ್ಯಗೊಳಿಸುವ, ಬಾಯಿ ಮುಚ್ಚಿಸುವ ಹಿಂಸಾ ವಿಧಾನಗಳು ಇದು ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾಗಿಲ್ಲ. ಹಿಂಸೆಯಿಂದ ಪ್ರಜಾಪ್ರಭುತ್ವ ಕಟ್ಟಲು ಖಂಡಿತ ಸಾಧ್ಯವಿಲ್ಲ. ಈ ದಬ್ಟಾಳಿಕೆ ನಡವಳಿಕೆಯನ್ನು ಬಿಟ್ಟು ಬಿಡಬೇಕು ಎಂದರು.

Advertisement

ಕಲಬುರ್ಗಿ ಹತ್ಯೆಯನ್ನು ಸಂಭ್ರಮಿಸಿದಂತಹ ಅದೇ ಮನಸುಗಳೇ ಗೌರಿ ಹತ್ಯೆಯ ಸಂದರ್ಭದಲ್ಲೂ ಸಂಭ್ರಮಿಸಿದ್ದನ್ನು ನೋಡಿದ್ದೇವೆ. ಸಹಜವಾಗಿಯೇ ಪ್ರಬಲವಾದ ಅನುಮಾನ ಯಾರ ಕಡೆಗೆ ಹೋಗುತ್ತದೆ? ಗೌರಿ ಹತ್ಯೆಯಾದಾಗ ಕನಿಷ್ಠ ಸಹಾನುಭೂತಿ, ಸದ್ಭಾವನೆ ಎಲ್ಲ ವಲಯದಿಂದಲೂ ಬರಲಿಲ್ಲ ಎಂಬುದು ಕೂಡ ಒಂದು ಅನುಮಾನಕ್ಕೆ ಕಾರಣವಾಗುತ್ತದೆ. ತನಿಖೆಯು ವಿವಿಧ ಆಯಾಮಗಳಲ್ಲಿ, ದೃಷ್ಟಿಕೋನಗಳಲ್ಲಿ ನಡೆಯಬೇಕು. ವೈಚಾರಿಕ ಚಿಂತನೆಯ ಮೂಲಕ ಕೋಮುವಾದಿತನವನ್ನು ವಿರೋಧಿಸುತ್ತಿದ್ದ ಗೌರಿಯದ್ದು ರಾಜಕೀಯ ಹತ್ಯೆ. ಎಂ.ಎಂ.ಕಲಬುರ್ಗಿ ಅವರದ್ದು ಧಾರ್ಮಿಕ ಹತ್ಯೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next