Advertisement

ಮುಂದಿನ ಜನವರಿಯಲ್ಲಿ ಕಲಬುರಗಿ-ಬೀದರ ರೈಲು ಆರಂಭ

04:07 PM Apr 25, 2017 | Team Udayavani |

ಕಲಬುರಗಿ: ತಾವು ರೈಲ್ವೆ ಖಾತೆ ಸಚಿವರಾಗಿದ್ದಾಗ ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಕೈಗೊಂಡ ರೈಲ್ವೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಮುಂದಿನ ಹೆಜ್ಜೆ ಇಡದೆ ನಿಧಾನಗತಿ ಹಾಗೂ ನಿರ್ಲಕ್ಷ ನೀತಿ ಅನುಸರಿಸುತ್ತಿದೆ ಎಂದು ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. 

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಕ್ಕಿಂತ ಕಡಿಮೆ ಅವಧಿ ರೈಲ್ವೆ ಖಾತೆ ಸಚಿವರಾಗಿದ್ದರೂ ರಾಜ್ಯದಲ್ಲಿ 22 ಹೊಸ ರೈಲುಗಳ ಓಡಾಟ ಪ್ರಾರಂಭ ಮಾಡಿರುವುದು, ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿ ಮಂಜೂರು, ಸೊಲ್ಲಾಪುರ-ಕಲಬುರಗಿ ನಡುವೆ ಜೋಡಿ ಮಾರ್ಗ, ಯಾದಗಿರಿಯಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪನೆ, 

ಕಲಬುರಗಿ-ಬೀದರ್‌ ರೈಲು ಮಾರ್ಗದಲ್ಲಿ ವೇಗ ಹೆಚ್ಚಳ, ಗದಗ-ವಾಡಿ ಹೊಸ ರೈಲು ಮಾರ್ಗಕ್ಕೆ ಚಾಲನೆ ಮುಂತಾದ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ಈ ಕಾಮಗಾರಿಗಳ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ . ಈ ಕುರಿತು ಹಲವು ಸಲ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎಂದು ವಿವರಣೆ ನೀಡಿದರು. 

ಸ್ಟಾರ್ಟ್‌ ಬಟನ್‌ ಒತ್ತಲು ಮನಸ್ಸು ಮಾಡ್ತಿಲ್ಲ: ಯಾದಗಿರಿಯಲ್ಲಿ ರೈಲ್ವೆ ಕೋಚ್‌ ನಿರ್ಮಾಣ ಕಾರ್ಖಾನೆ ಪೂರ್ಣಗೊಂಡಿದೆ. ಆದರೆ ರೈಲ್ವೆ ಖಾತೆ ಸಚಿವ ಸುರೇಶ ಪ್ರಭು ಅವರು ಇಲ್ಲಿಗೆ ಬಂದು ಸ್ಟಾರ್ಟ್‌ ಬಟನ್‌ ಒತ್ತಲು ಮನಸ್ಸು ಮಾಡುತ್ತಿಲ್ಲ. 

ರೈಲ್ವೆ ವಿಕಾಸ ನಿಗಮದವರು ಸಚಿವರ ಬಳಿ ಹೋಗಿ ಹಲವು ಸಲ ದಿನಾಂಕ ಕೇಳಿದ್ದಾರೆ. ಆದರೆ ಸಚಿವರು ಸಮಯ ನೀಡಿಲ್ಲ. ಅದೇ ರೀತಿ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾರಂಭಕ್ಕೂ ಆಸಕ್ತಿ ತೋರಿಸುತ್ತಿಲ್ಲ. ಅಭಿವೃದ್ಧಿ ವಿಷಯದಲ್ಲಿ ಈ ರೀತಿ ನಿರ್ಲಕ್ಷé ವಹಿಸುವುದು ತರವಲ್ಲ ಎಂದು ಖರ್ಗೆ ವಾಗ್ಧಾಳಿ ನಡೆಸಿದರು. 

Advertisement

ರಾಜ್ಯಕ್ಕೆ ಏಕಕಾಲಕ್ಕೆ 22 ಹೊಸ ರೈಲು ಓಡಿಸಿದ್ದನ್ನು ನೋಡಿ ಆಗ ಇಡೀ ದೇಶವೇ ಅಚ್ಚರಿಪಟ್ಟಿತ್ತು. ದೇಶಾದ್ಯಂತ ಖಾಲಿ ಸಂಚರಿಸುತ್ತಿದ್ದ ಬೋಗಿಗಳನ್ನೆಲ್ಲ ಬೇರ್ಪಡಿಸಿ, ಕ್ರೋಡೀಕರಿಸಿ, ಹೊಸ ರೈಲುಗಳ ಓಡಾಟಕ್ಕೆ ಕ್ರಮ ಕೈಗೊಳ್ಳಲಾಯಿತು ಎಂದು ಖರ್ಗೆ ವಿವರಣೆ ನೀಡಿದರು. 

2018ಕ್ಕೆ ಕಲಬುರಗಿ-ಬೀದರ ರೈಲು ಶುರು: ರೈಲ್ವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಸದರಾಗಿ ತಾವು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ಆದರೂ ಕೇಂದ್ರದಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ.

ಸತತ ಒತ್ತಾಯ ಹಾಗೂ ನಿಗಾ ವಹಿಸುತ್ತಿರುವ ಪರಿಣಾಮ ಕಲಬುರಗಿ- ಬೀದರ ರೈಲು ಮಾರ್ಗ ಮೆಲ್ಲಗೆ ನಡೆದಿದೆ. ಆಗಸ್ಟ್‌ ತಿಂಗಳಲ್ಲಿ ಪ್ರಾಯೋಗಿಕ ರೈಲು ಓಡಾಟ ಶುರುವಾಗಲಿದ್ದು, 2018ರ ಜನವರಿ ಸಮಯಕ್ಕೆ ಕಲಬುರಗಿ-ಬೀದರ ನಡುವೆ ರೈಲು ಓಡಾಟ ಶುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಅಗತ್ಯ ಹಣ ಬಿಡುಗಡೆ: ವಾಡಿ-ಗದಗ ರೈಲ್ವೆ ಮಾರ್ಗದ ಕಾಮಗಾರಿ ತ್ವರಿತಗೊಳಿಸುವ ನಿಟ್ಟಿನಲ್ಲಿ ರಾಜ್ಯದಿಂದ ಭೂಸ್ವಾಧೀನ ಕಾರ್ಯ ಮಾಡಲಾಗಿದೆ. 450 ಎಕರೆ ಭೂಸ್ವಾಧೀನಕ್ಕಾಗಿ ಕೆಐಎಡಿಬಿಗೆ ಹಣ ಬಿಡುಗಡೆ ಮಾಡಲಾಗಿದೆ. ಇನ್ನೂ ಸಾವಿರ ಎಕರೆ ಭೂ ಸ್ವಾಧೀನಕ್ಕಾಗಿ ನೋಟಿμಕೇಶನ್‌ ಹೊರಡಿಸಲಾಗಿದೆ. ಈ ಕಾರ್ಯಕ್ಕೂ ಅಗತ್ಯ ಹಣ ನೀಡುವಂತೆ ಸಚಿವ ಆರ್‌.ವಿ. ದೇಶಪಾಂಡೆ ಅವರೊಂದಿಗೆ ಮಾತನಾಡಿರುವುದಾಗಿ ಸಂಸದ ಖರ್ಗೆ ತಿಳಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next