ಮನೋಜ್ ಕುಮಾರ್ ಪ್ರಸ್ತುತಿಯ ಸೂರಜ್ ಬೋಳಾರ್, ಪ್ರೀತಂ ನಿರ್ಮಾಣದ “ರಾಹು ಕಾಲ ಗುಳಿಗ ಕಾಲ’ ಶೂಟಿಂಗ್ ಎಲ್ಲ ಪೂರ್ಣಗೊಳಿಸಿ ಈಗ ಡಬ್ಬಿಂಗ್ ಪೂರ್ಣಗೊಳಿಸಿದೆ. ಫೈನಲ್ ಟ್ರೈಂಡಿಂಗ್ ನಡೆಯುತ್ತಿದೆ.
ಮಣಿಕಾಂತ್ ಕದ್ರಿ ಸಂಗೀತದ ಜವಾಬ್ದಾರಿ ನಿರ್ವಹಿಸಿದ್ದಾರೆ. ಅರ್ಜುನ್ ಕಾಪಿಕಾಡ್, ನವ್ಯತಾ ರೈ, ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಚಂದ್ರಹಾಸ್ ಉಳ್ಳಾಲ್ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಮಾಸ್ ಮಾದ ಸಾಹಸದಲ್ಲಿ ಕೈ ಜೋಡಿಸಿದ್ದಾರೆ. ಸಿದ್ದು ಜಿ.ಎಸ್. ಛಾಯಾಗ್ರಹಣ ಹಾಗೂ ಸುರೇಶ್ ಸಂಕಲನದಲ್ಲಿ ತೊಡಗಿಸಿದ್ದಾರೆ. ಈಗಾಗಲೇ “ಪತ್ತೀಸ್ ಗ್ಯಾಂಗ್’ ಎಂಬ ಸಿನೆಮಾ ಮಾಡಿದ ಚಿತ್ರತಂಡ ಎರಡನೇ ಸಿನೆಮಾವಾಗಿ ರಾಹು ಕಾಲವನ್ನು ಸಿದ್ಧಪಡಿಸುತ್ತಿದೆ. ಪತ್ತೀಸ್ ಗ್ಯಾಂಗ್ ಶೂಟಿಂಗ್ ಆದ ಕಾಲದಲ್ಲಿಯೇ ರಾಹುಕಾಲದ ಶೂಟಿಂಗ್ ಕೂಡ ಮಾಡಲಾಗಿದೆ. ಒಬ್ಬ ವ್ಯಕ್ತಿಗೆ ಒಂದು ಟೈಮ್ ಎದುರಾದರೆ ಆತನ ಕಥೆಯೇ ಬೇರೆ ಆಗುತ್ತದೆ. ಕೆಲವೊಂದು ಸಮಯ ಕೆಲವರ ಜೀವನವೇ ಏನೇನೋ ಆಗಿಬಿಡುತ್ತದೆ. ಅಂತಹ ಕಾಲದಲ್ಲಿ ಸಮಯವಲ್ಲದ ಜಾಗದಲ್ಲಿ ಯಾರ್ಯಾರೋ ಬಂದು ಮತ್ತೇನೋ ಆಗಿ ಬಿಡುವ ಸಾಧ್ಯತೆ ಇದೆ.
ಯಾರು ಹೇಗೆ? ಏನು? ಎಂದು ಯೋಚಿಸುವ ಕಾಲಕ್ಕೆ ಇನ್ನೇನೋ ಆಗುವ ಸಾಧ್ಯತೆಯೂ ಇದೆ. ಬಹುತೇಕ ಜನರ ಜೀವನದಲ್ಲಿ ಇವೆಲ್ಲ ನಡೆದಿರುವ ಲಕ್ಷಣವೂ ಇದೆ. ಹೀಗೆ ಕಾಲವಲ್ಲದ ಕಾಲದಲ್ಲಿ ಎದುರಾಗುವ ಒಂದೊಂದು ಸನ್ನಿವೇಶವನ್ನು ರಾಹುಕಾಲ- ಗುಳಿಗ ಕಾಲದಲ್ಲಿ ಬಿಂಬಿಸುವ ವಿನೂತನ ಪ್ರಯತ್ನ ನಡೆದಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.