Advertisement

ಮುಂದೆ ಹೇಗೆ ಬೆಳ್ಳಂದೂರು ಕೆರೆ? 

11:48 AM Aug 11, 2017 | Team Udayavani |

ಬೆಂಗಳೂರು: ಬೆಳ್ಳಂದೂರು ಕೆರೆ ಅಭಿವೃದ್ಧಿ ಕಾರ್ಯವನ್ನು ಎರಡನೇ ಹಂತದಲ್ಲಿ ಯಾವ ವಿಧಾನದಡಿ ಕೈಗೊಳ್ಳಬೇಕು ಎಂಬ ಬಗ್ಗೆ ವಿಜ್ಞಾನಿಗಳು, ತಜ್ಞರಲ್ಲೇ ಜಿಜ್ಞಾಸೆ ಮೂಡಿದೆ. ಇದರಿಂದಾಗಿ ಸದ್ಯ ಕೆರೆಯ ಜೊಂಡು ತೆರವು ಕಾರ್ಯವಷ್ಟೇ ಮುಂದುವರಿದಿದ್ದು, ಕೆರೆಯ ಮುಂದಿನ ಹಂತದ ಅಭಿವೃದ್ಧಿ ವಿಧಾನದ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

Advertisement

ಇನ್ನೊಂದೆಡೆ ಬೆಳ್ಳಂದೂರು ಕೆರೆ ಶುದ್ದೀಕರಣ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ತಜ್ಞರಿಂದಲೇ ಆರೋಪ ಕೇಳಿಬಂದಿದ್ದು, ಭಾರಿ ಮಳೆ ಸುರಿದರೆ ಮತ್ತೆ ಕೆರೆಯಲ್ಲಿ ನೊರೆ, ಬೆಂಕಿ ಕಾಣಿಸಿಕೊಳ್ಳುವ ಭೀತಿ ಸ್ಥಳೀಯರಲ್ಲಿ ಮೂಡಿದೆ.

ಬೆಳ್ಳಂದೂರು ಕೆರೆಯು ರಾಜಧಾನಿಯ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗಿಂತ ಭಾರಿ ನೊರೆ, ಬೆಂಕಿ ಸಮಸ್ಯೆಯಿಂದಲೇ ಹೆಚ್ಚು ಸುದ್ದಿಯಲ್ಲಿತ್ತು. ನೊರೆ- ಬೆಂಕಿ ಸಮಸ್ಯೆಯಿಂದಲೇ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದ್ದ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರಂತರವಾಗಿ ನಿರ್ದೇಶನ ನೀಡುತ್ತಲೇ ಇದೆ. ಇಷ್ಟಾದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆರೆಯ ಅಭಿವೃದ್ಧಿ ಕಾರ್ಯ ನಡೆಯದಿರುವುದು ದುರದೃಷ್ಟಕರ.

ಕಳೆ ತೆರವು ಮುಂದುವರಿಕೆ
ಬೆಳ್ಳಂದೂರು ಕೆರೆಯಲ್ಲಿ ಬೆಳೆದಿರುವ ಕಳೆ ತೆರವು ಕಾರ್ಯ ಮುಂದುವರಿದಿದೆ. ಕೆರೆಯಲ್ಲಿ ಶೇಖರಣೆಯಾಗಿದ್ದ ಬಹುತೇಕ ಕಳೆ ತೆರವುಗೊಳಿಸಲಾಗಿದ್ದು, ಸಣ್ಣಪುಟ್ಟ ಗಿಡಗಂಟಿಗಳನ್ನು ತೆರವುಗೊಳಿಸಬೇಕಿದೆ. ಕೆರೆ ಒತ್ತುವರಿಯನ್ನು ಬಹಳಷ್ಟು ಕಡೆ ತೆರವುಗೊಳಿಸಿ ಬೇಲಿ ಅಳವಡಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸರವಾದಿಗಳು, ವಿಷಯ ತಜ್ಞರು ಕೆರೆಯ ಶಾಶ್ವತ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅನುಸರಿಸಬಹುದಾದ ವಿಧಾನದ ಬಗ್ಗೆ ವರದಿ ನೀಡಿದ್ದಾರೆ. ಆ.1ರಂದು ನಡೆದ ಸಭೆಯಲ್ಲಿ ಕೆಲ ಪರಿಹಾರ ಕ್ರಮಗಳ ಬಗ್ಗೆ ತಜ್ಞರಿಂದಲೇ ಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಆ.15ರೊಳಗೆ ಸೂಕ್ತ ಪರ್ಯಾಯ ಕ್ರಮಗಳ ಬಗ್ಗೆ ತಿಳಿಸುವಂತೆ ವಿಜ್ಞಾನಿಗಳಿಗೆ ಮನವಿ ಮಾಡಲಾಗಿದೆ. ನಂತರ ಆಯುಕ್ತರು ಮತ್ತೂಂದು ಸಭೆ ನಡೆಸಿ ಅಂತಿಮಗೊಳಿಸಿದರೆ ಅದರಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Advertisement

ಸರ್ಕಾರದಿಂದ ಇಲ್ಲ ಸಹಕಾರ 
ಬೆಳ್ಳಂದೂರು ಕೆರೆಯ ಸ್ವತ್ಛತಾ ಕಾರ್ಯಕ್ಕೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಕಲುಷಿತ ನೀರಿನಲ್ಲಿ ದೊಡ್ಡ ಪಾಲು ಪಡೆಯುತ್ತಿರುವ ಬೆಳ್ಳಂದೂರು ಕೆರೆಯ ಅಭಿವೃದ್ಧಿಗೆ ನೀಡಿರುವ ಶಿಫಾರಸುಗಳ ಪಾಲನೆಗೆ ಗಮನ ನೀಡುತ್ತಿಲ್ಲ ಎಂದು ದೂರು ಸಹ ಇದೆ.

ಇಚ್ಛಾಶಕ್ತಿ ಕೊರತೆ
ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯನ್ನು ಅಲ್ಪಾವಧಿ ಹಾಗೂ ದೀರ್ಘಾವಧಿ ವಿಧಾನದಡಿ ಅಭಿವೃದ್ಧಿಪಡಿಸಿ ಸಂರಕ್ಷಿಸಬೇಕಿದೆ. ಅದರಂತೆ ಅಲ್ಪಾವಧಿ ಸ್ವತ್ಛತಾ ಕಾರ್ಯ ಆರಂಭವಾಗಿದ್ದು, ಎರಡನೇ ಹಂತದಲ್ಲಿ ಕೈಗೊಳ್ಳಬೇಕಾದ ಸ್ವತ್ಛತಾ ಕಾರ್ಯದ ಬಗ್ಗೆ ಈಗಾಗಲೇ ವರದಿ ನೀಡಿದರೂ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಆರ್ಥಿಕವಾಗಿ ಹೊರೆಯಾಗದ, ನೈಸರ್ಗಿಕ ವಿಧಾನದಲ್ಲೇ ಅಭಿವೃದ್ಧಿಪಡಿಸುವ ವಿಧಾನದ ಬಗ್ಗೆ ಸಲಹೆ ನೀಡಲಾಗಿದೆ.

ಒಂದು ಕೋಟಿಗಿಂತ ಹೆಚ್ಚು ಜನ ನೆಲೆಸಿರುವ ನಗರದ ಬೃಹತ್‌ ಕೆರೆಯೊಂದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಇದು ಸರ್ಕಾರದ ಇಚ್ಛಾಶಕ್ತಿ ಕೊರತೆಯನ್ನು ತೋರಿಸುತ್ತದೆ ಎಂದು ತಜ್ಞರ ಸಮಿತಿ ಸದಸ್ಯರೊಬ್ಬರು ಹೇಳಿದರು.ಸದ್ಯದಲ್ಲೇ ಸಭೆ ನಡೆಸಿ ನಿರ್ಧಾರ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಆರಂಭಿಸಲಾಗಿದ್ದ ಅಲ್ಪಾವಧಿ ಕ್ರಮಗಳು ಬಹುತೇಕ ಪೂರ್ಣಗೊಂಡಿವೆ. ಕೆರೆಯಲ್ಲಿನ ಕಳೆ ಸಸಿಗಳನ್ನು ತೆರವುಗೊಳಿಸಿ ಕೆರೆದಂಡೆಯ ಮೇಲೆ ಸುರಿಯಲಾಗಿದೆ.

ಇದನ್ನು ಸ್ಥಳಾಂತರ- ವಿಲೇವಾರಿಗೆ ಹೆಚ್ಚು ಹಣ ವೆಚ್ಚವಾಗುವ ಕಾರಣ ಕೆರೆಯ ಸಮೀಪದಲ್ಲೇ ಬಿಡಿಎಗೆ ಸೇರಿದ ಜಾಗದಲ್ಲಿ ಗುಂಡಿ ತೋಡಿ ಮುಚ್ಚಲು ಚಿಂತಿಸಲಾಗಿದೆ. ಕೆರೆಗೆ ಒಳಚರಂಡಿ ನೀರು ಸೇರ್ಪಡೆಯಾಗುವುದು ಸ್ಥಗಿತಗೊಂಡ ಬಳಿಕವಷ್ಟೇ ಹೂಳು ತೆರವುಗೊಳಿಸಲು ಚಿಂತನೆ ನಡೆಸಲಾಗಿದೆ. ಸದ್ಯದಲ್ಲೇ ತಜ್ಞರ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಬಿಡಿಎ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next