ವೆಲ್ಲಿಂಗ್ಟನ್: ಪ್ರವಾಸಿ ಭಾರತದೆದುರಿನ 3 ಪಂದ್ಯಗಳ ಏಕದಿನ ಸರಣಿಗಾಗಿ ನ್ಯೂಜಿಲ್ಯಾಂಡ್ ತಂಡ ಪ್ರಕಟಗೊಂಡಿದೆ. ಅತೀ ಎತ್ತರದ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವೇಗಿ ಕೈಲ್ ಜಾಮೀಸನ್ ಮೊದಲ ಸಲ ಏಕದಿನ ತಂಡಕ್ಕೆ ಕರೆ ಪಡೆದಿದ್ದಾರೆ.
ಪ್ರಮುಖ ವೇಗಿಗಳಾದ ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್, ಮ್ಯಾಟ್ ಹೆನ್ರಿ ಮೊದಲಾದವರು ಗಾಯಾಳಾಗಿರುವ ಕಾರಣ ನ್ಯೂಜಿಲ್ಯಾಂಡ್ ಹೊಸಬರಿಗೆ ಅವಕಾಶ ನೀಡುವುದು ಅನಿವಾರ್ಯವಾಗಿತ್ತು. ಅದರಂತೆ 6 ಅಡಿ, 8 ಇಂಚು ಎತ್ತರದ ಜಾಮೀಸನ್ ಆಯ್ಕೆಯಾಗಿದ್ದಾರೆ. ಸ್ಕಾಟ್ ಕ್ಯುಗೆಲೀನ್, ಹಾಮಿಶ್ ಬೆನೆಟ್ ಬಹಳ ಸಮಯದ ಬಳಿಕ ತಂಡಕ್ಕೆ ಮರಳಿದ್ದಾರೆ.
“ಕಿಲ್ಲ’ ಎಂದು ಕರೆಯಲ್ಪಡುವ ಕೈಲ್ ಜಾಮೀಸನ್ ಭಾರತ “ಎ’ ತಂಡದೆದುರಿನ ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯಕ್ಕಾಗಿ ನ್ಯೂಜಿಲ್ಯಾಂಡ್ “ಎ’ ತಂಡಕ್ಕೆ ಆಯ್ಕೆಯಾಗಿದ್ದರು. ಆದರೀಗ “ಎ’ ತಂಡದಿಂದ ಬಿಡುಗಡೆಗೊಂಡಿದ್ದಾರೆ. ಕಳೆದ ವಿಶ್ವಕಪ್ ಫೈನಲ್ ಸೋಲಿನ ಬಳಿಕ ನ್ಯೂಜಿಲ್ಯಾಂಡ್ ಆಡುತ್ತಿರುವ ಮೊದಲ ಏಕದಿನ ಸರಣಿ ಇದಾಗಿದೆ. ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪರಾಭವಗೊಳ್ಳುವ ಮೂಲಕ ಭಾರತ ಕೂಟದಿಂದ ಹೊರಬಿದ್ದಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಕೊಹ್ಲಿ ಪಡೆಯ ಮುಂದಿದೆ. ಸರಣಿಯ 3 ಪಂದ್ಯಗಳು ಫೆ. 5, 8 ಮತ್ತು 11ರಂದು ನಡೆಯಲಿವೆ.
ನ್ಯೂಜಿಲ್ಯಾಂಡ್ ತಂಡ
ಕೇನ್ ವಿಲಿಯಮ್ಸನ್ (ನಾಯಕ), ಹಾಮಿಶ್ ಬೆನೆಟ್, ಟಾಮ್ ಬ್ಲಿಂಡೆಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಕೈಲ್ ಜಾಮೀಸನ್, ಸ್ಕಾಟ್ ಕ್ಯುಗೆಲೀನ್, ಟಾಮ್ ಲ್ಯಾಥಂ, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಐಶ್ ಸೋಧಿ (ಮೊದಲ ಪಂದ್ಯಕ್ಕೆ ಮಾತ್ರ).