Advertisement
ಯಾಕೆ ಪತ್ರಿಕಾ ವಿತರಕರ ದಿನ?ಒಂದು ಸುದ್ದಿ ಪತ್ರಿಕೆ ಮುದ್ರಣವಾಗಿ ಓದುಗರ ಕೈ ಸೇರುವ ಹೊತ್ತಿಗೆ, ಅದರ ಹಿಂದೆ ಸಾವಿರಾರು ಜನರ ಪರಿಶ್ರಮವಿರುತ್ತದೆ. ಈ ಪೈಕಿ ಪತ್ರಿಕಾ ವಿತರಕರ ಪಾತ್ರ ಮಹತ್ವದ್ದು. ಎಷ್ಟೇ ಅತ್ಯುತ್ತಮವಾಗಿ ಪತ್ರಿಕೆ ರೂಪಿಸಿದರೂ, ಸರಿಯಾದ ಸಮಯಕ್ಕೆ ಓದುಗರ ಕೈ ಸೇರಿದಿದ್ದರೆ ಎಲ್ಲರ ಶ್ರಮ ವ್ಯರ್ಥವಾಗುತ್ತದೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ 191 ವರ್ಷಗಳ ಹಿಂದೆ ಅಂದರೆ 1833 ಸೆಪ್ಟಂಬರ್ 4ರಂದು ಪತ್ರಿಕೆ ಮಾರಾಟಕ್ಕೆ “ದ ನ್ಯೂಯಾರ್ಕ್ ಸನ್’ ಪತ್ರಿಕೆ ಪ್ರಕಾಶಕ ಬೆಂಜಮಿನ್ ಡೇ 10 ವರ್ಷದ ಬಾಲಕ ಬಾರ್ನಿ ಫ್ಲಾಹರ್ಟಿಗೆ ಪತ್ರಿಕೆ ಮಾರಾಟ ಕೆಲಸ ವಹಿಸಿದರು. ಈ ಬಾಲಕ ರಸ್ತೆ ಬದಿಯಲ್ಲಿ ನಿಂತ “ಪೇಪರ್… ಪೇಪರ್ ತೆಗೆದುಕೊಳ್ಳಿ’ ಎಂದು ಜೋರಾಗಿ ಹೇಳುತ್ತಾ ಮಾರಾಟ ಮಾಡಲಾರಂಭಿಸಿದ.ಅನಂತರ, ಪೇಪರ್ ಮಾರಾಟಕ್ಕೆ ಇನ್ನಷ್ಟು ಹುಡುಗರು ಜತೆಯಾದರು.
Related Articles
Advertisement
ಸೆ.8ಕ್ಕೆ ಚಿತ್ರದುರ್ಗದಲ್ಲಿ 4ನೇ ರಾಜ್ಯಮಟ್ಟದ ಪತ್ರಿಕಾ ವಿತರಕರ ಸಮ್ಮೇಳನದ ವಿಶೇಷಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಪತ್ರಿಕಾ ವಿತರಕರ ದಿನವನ್ನು ಸೆ.8ರಂದು ಆಚರಿಸಲಿದೆ. ಇದರ ಅಂಗವಾಗಿ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಗ ವಿಕಲ ಪತ್ರಿಕಾ ವಿತರಕರೊಬ್ಬರಿಗೆ ಸಮ್ಮಾನ ಮಾಡಲಾಗುತ್ತಿದೆ. ಜತೆಗೆ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೂಡ ಇರಲಿದೆ. ಪತ್ರಿಕಾ ವಿತರಣೆಗೆ ಸಂಬಂಧಿಸಿದಂತೆ, “ಪತ್ರಿಕೆ ವಿತರಣೆ ಅಂದು-ಇಂದು-ಮುಂದು’ ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ಇರಲಿದೆ. ಈ ಸಮ್ಮೇಳನಕ್ಕೆ 3,000ಕ್ಕೂ ಹೆಚ್ಚು ವಿತರಕರು ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಸಚಿವರು ಹಾಗೂ ಪತ್ರಿಕೋದ್ಯಮದ ಹಿರಿಯರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಕೆ. ತಿಳಿಸಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಪತ್ರಿಕಾ ವಿತರಕ ಕೆಲಸಕ್ಕೆ ಹೊಸಬರು ಬರುತ್ತಿಲ್ಲ. ಈ ಹಿಂದಿನಿಂದಲೂ ಈ ವೃತ್ತಿ ಮಾಡಿಕೊಂಡವರೇ ಈಗಲೂ ಮುಂದುವರಿಸುತ್ತಿದ್ದಾರೆ. ಈ ಹಿಂದೆಯಾದರೆ ಪೇಪರ್ ಹಂಚಲು ಹುಡುಗರು ಓಡೋಡಿ ಬರುತ್ತಿದ್ದರು. ಅವರ ವಿದ್ಯಾಭ್ಯಾಸಕ್ಕೆ ಒಂಚೂರು ಕಾಸು ಆಗುತ್ತಿತ್ತು. ಈಗ ಪತ್ರಿಕೆ ಹಂಚಲು ಹುಡುಗರೇ ಸಿಗುತ್ತಿಲ್ಲ ಎಂಬುದು ವಿತರಕರ ಅಳಲು. ವಿತರಕರ ಸಮಸ್ಯೆ, ಸವಾಲುಗಳು
* ನಗರವೇ ಇರಲಿ, ಹಳ್ಳಿಯೇ ಇರಲಿ ಪತ್ರಿಕಾ ವಿತರಣೆ ಕಾರ್ಯವು ಸುಲಭದ್ದಲ್ಲ, ಬಹಳ ಸವಾಲಿನ ಕೆಲಸ
* ಬಹುತೇಕ ನಗರಗಳಲ್ಲಿ ನಸುಕಿನಲ್ಲಿ ಪತ್ರಿಕಾ ವಿತರಣೆಗೆ ಹೊರಟಾಗ ನಾಯಿಗಳದ್ದೇ ಕಾಟ ಹೆಚ್ಚು.
* ಅನೇಕ ಬಾರಿ ಕಳ್ಳಕಾಕರ ಬೆದರಿಕೆಯನ್ನು ವಿತರಕರು ಎದುರಿಸುತ್ತಾರೆ. ಜೀವ ಭಯ ಎದುರಾಗುತ್ತದೆ.
* ಗಗನಚುಂಬಿ ಅಪಾರ್ಟ್‌ಮೆಂಟ್‌ಗಳ ಓದುಗರ ಫ್ಲಾಟ್‌ಗೆ ಪತ್ರಿಕೆ ತಲುಪಿಸುವುದೇ ದೊಡ್ಡ ಸಾಹಸ.
* ಭದ್ರತೆ ಕಾರಣಕ್ಕೆ ಬಹಳಷ್ಟು ಅಪಾರ್ಟ್‌ಮೆಂಟ್‌ನವರು ಲಿಫ್ಟ್ನಲ್ಲಿ ಹೋಗಲು ಅವಕಾಶ ಕಲ್ಪಿಸುವುದಿಲ್ಲ.
* ಇಂಥ ಸಂದರ್ಭದಲ್ಲಿ ಪರ್ಯಾಯವಾಗಿ ಅಪಾರ್ಟ್‌ಮೆಂಟ್ ಸೆಕ್ಯುರಿಟಿಗೆ ಪತ್ರಿಕೆ ನೀಡಬೇಕಾಗುತ್ತದೆ. ಹೀಗಾದಾಗ ಕೆಲವೊಮ್ಮೆ ಓದುಗರಿಗೆ ಪತ್ರಿಕೆ ತಲುಪುವುದೇ ಇಲ್ಲ.
* ಕೆಲವೊಂದು ಸಂದರ್ಭದಲ್ಲಿ ಪತ್ರಿಕಾ ವಾಹನಗಳು ತಡವಾದಾಗ, ವಿತರಣೆಯೂ ವಿಳಂಬವಾಗುತ್ತದೆ.
* ಮನೆಗಳಿಗೆ ಪತ್ರಿಕೆ ವಿಳಂಬವಾಗಿ ಪತ್ರಿಕೆ ತಲುಪಿದಾಗ ಓದುಗರಿಂದ ಆಕ್ರೋಶದ ಮಾತು ಕೇಳಬೇಕಾಗುತ್ತದೆ.
* ಗ್ರಾಮೀಣ ಪ್ರದೇಶದಲ್ಲೂ ವಿತರಣೆಯಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಪತ್ರಿಕಾ ವಿತರಕರ ಬೇಡಿಕೆಗಳೇನು?
1. ಜೀವ ವಿಮೆ- 70 ವರ್ಷ ಮೇಲ್ಪಟ್ಟವರ ಪರಿಗಣನೆ
ಸರಕಾರ ಪತ್ರಿಕಾ ವಿತರಕರಿಗೆ ಜೀವವಿಮೆ ಸೌಲಭ್ಯ ಒದಗಿಸುತ್ತಿದೆ. ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂ., ಗಾಯ ಗೊಂಡವರಿಗೆ 1 ಲಕ್ಷ ರೂ. ನೆರವು ಒದಗಿಸಲಾಗುತ್ತಿದೆ. ಈ ಸೌಲಭ್ಯಕ್ಕೆ 70 ವರ್ಷ ಮೇಲ್ಪಟ್ಟವರನ್ನೂ ಪರಿಗಣಿಸಬೇಕು.
2. 10 ಕೋಟಿ ರೂ. ಕ್ಷೇಮ ನಿಧಿ
ಪತ್ರಿಕಾ ವಿತರಕರ ಕ್ಷೇಮಕ್ಕಾಗಿ ಸರಕಾರ 10 ಕೋಟಿ ರೂ. ಕ್ಷೇಮ ನಿಧಿ ಸ್ಥಾಪಿಸಬೇಕು. ವಿತರಕರು ಅಕಾಲಿಕ ಮೃತಪಟ್ಟಾಗ ಅಥವಾ ಇನ್ನಿತರ ಗಂಭೀರ ಕಾಯಿಲೆಗೆ ತುತ್ತಾದ ವೇಳೆ ಪತ್ರಿಕಾ ವಿತರಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕ್ಷೇಮನಿಧಿ ಬಳಸುವ ಉದ್ದೇಶವಿದೆ. 3. ಮಾಧ್ಯಮ ಅಕಾಡೆಮಿಗೆ ನೇಮಕ
ಪತ್ರಿಕೋದ್ಯಮದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕರು, ಪತ್ರಿಕೆಗೆ ಸಂಬಂಧಿಸಿದ ಅನೇಕ ಸಂಘ, ಸಂಸ್ಥೆಗಳು, ಅಕಾಡೆಮಿಗಳಲ್ಲಿ ಸ್ಥಾನವಿಲ್ಲ. ಈ ಹಿನ್ನೆಲೆಯಲ್ಲಿ ಮಾಧ್ಯಮ ಅಕಾಡೆಮಿ ಯಲ್ಲಿ ಪತ್ರಿಕಾ ವಿತರಕರೊಬ್ಬರಿಗೆ ಸ್ಥಾನ ನೀಡಬೇಕೆಂಬ ಒತ್ತಾಯ. 4. ರಾಜ್ಯೋತ್ಸವ ಪ್ರಶಸ್ತಿ ನಿರಂತರ
ವಿತರಕರ ಬೇಡಿಕೆಯಂತೆ ಪತ್ರಿಕಾ ವಿತರಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ. ಆದರೆ ಇದು ಒಂದೇ ವರ್ಷಕ್ಕೆ ಸೀಮಿತವಾಗದೇ ಪ್ರತೀ ವರ್ಷವೂ ವಿತರಕರನ್ನು ಪ್ರಶಸ್ತಿಗೆ ಪರಿಗಣಿಸಬೇಕು. 5. ಅರ್ಹ ಪ್ರಶಸ್ತಿಗಳಿಗೂ ಪರಿಗಣಿಸಿ
ಮಾಧ್ಯಮ ಅಕಾಡೆಮಿ, ಪ್ರಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಾರ್ಷಿಕ ದತ್ತಿ ಪ್ರಶಸ್ತಿ ವಿತರಕರನ್ನು ಆಯ್ಕೆ ಮಾಡಬೇಕು. 6. ಕಚೇರಿಗೆ ಜಾಗ ನೀಡಿ
ಪತ್ರಿಕಾ ವಿತರಕರಿಗಾಗಿ ಒಂದು ಕಚೇರಿಯ ವ್ಯವಸ್ಥೆಯಾಗಬೇಕಿದೆ. ಸರಕಾರವು ಖಾಲಿ ನಿವೇಶನ ಅಥವಾ ಬಡ್ಡಿ ರಹಿತ ಸಾಲದಲ್ಲಿ ನಿವೇಶನ ನೀಡಬೇಕು. 3,000ಕ್ಕೂ ಅಧಿಕ ಸದಸ್ಯರಿರುವ ವಿತರಕರ ಒಕ್ಕೂಟದ ಕಾರ್ಯನಿರ್ವಹಣೆಗೆ ಸುಲಭವಾಗಲಿದೆ. 7. ಎಲೆಕ್ಟ್ರಿಕಲ್ ಬೈಕ್
ಈ ಮೊದಲು ಸೈಕಲ್‌ಲ್ಲಿ ಪೇಪರ್ ಹಂಚಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ವಿತರಣೆಗೆ ವೇಗ ನೀಡಲು ಎಲೆಕ್ಟ್ರಿಕಲ್ ಬೈಕ್ ಸೌಲಭ್ಯ ದೊರೆತರೆ ಹೆಚ್ಚು ಅನುಕೂಲ. ಹಾಗಾಗಿ, ಈ ಬೈಕ್‌ಗಳನ್ನು ಕೊಳ್ಳಲು ಸರಕಾರವು ಬಡ್ಡಿರಹಿತ ಸಾಲ ನೀಡಬೇಕೆಂಬುದು ಬೇಡಿಕೆ. ಮಳೆಯ ವೇಳೆ ವಿತರಣೆಯು ಭಾರೀ ಕಷ್ಟವಾಗುತ್ತದೆ. ಹಾಗಿದ್ದೂ, ಪತ್ರಿಕೆ ಹಂಚಲೇಬೇಕು. – ಮಲ್ಲಿಕಾರ್ಜುನ ತಿಪ್ಪಾರ