ಹೊಸದಿಲ್ಲಿ: ಜಾಗತಿಕ ಅಂತರ್ಜಾಲ ದೈತ್ಯ ಸಂಸ್ಥೆಗಳಾದ ಗೂಗಲ್ ಮತ್ತು ಫೇಸ್‌ಬುಕ್‌ಗಳು ಇನ್ನು ಮುಂದೆ ಭಾರತದಲ್ಲೂ, ಸ್ಥಳೀಯ ಸುದ್ದಿಮಾಧ್ಯಮಗಳೊಂದಿಗೆ ಆದಾಯ ಹಂಚಿಕೊಳ್ಳಬೇಕಾಗಬಹುದು!
ಕಳೆದ ವರ್ಷ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರಕಾರ ತಮ್ಮ ಮುಂದೆ ಅಂತಹ ಯಾವುದೇ ಯೋಜನೆಗಳಿಲ್ಲ ಎಂದಿತ್ತು. ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ಮತ್ತು ವಿದ್ಯುನ್ಮಾನ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಭಾರತೀಯ ಸುದ್ದಿ ಸಂಸ್ಥೆಗಳ ಪರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಇದನ್ನು ನೋಡಿದರೆ ಆಸ್ಟ್ರೇಲಿಯ, ಫ್ರಾನ್ಸ್ ನಂತೆ ಭಾರತದಲ್ಲೂ ಗೂಗಲ್, ಫೇಸ್‌ಬುಕ್, ಅಮೆಜಾನ್‌ನಂತಹ ಕಂಪೆನಿಗಳು ಸ್ಥಳೀಯ ಸುದ್ದಿಸಂಸ್ಥೆಗಳೊಂದಿಗೆ ಆದಾಯ ಹಂಚಿ ಕೊಳ್ಳುವ ದಿನಗಳು ದೂರವಿಲ್ಲ ಎನ್ನಬೇಕಾಗು ತ್ತದೆ! ಇಂತಹದ್ದೊಂದು ಕಾನೂನು ಜಾರಿ ಯಾಗಬೇಕೆಂದು ಡಿಎನ್‌ಪಿಎ (ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಶನ್), ಕೇಂದ್ರ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ದೂರು ನೀಡಿತ್ತು. ಇದನ್ನು ಪರಿಶೀಲಿಸಿದ್ದ ಸಿಸಿಐ ಈ ಬಗ್ಗೆ ತನಿಖೆ ಮಾಡಿ ಎಂದು ಸೂಚಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜೀವ್ ಚಂದ್ರಶೇಖರ್, ಡಿಜಿಟಲ್ ಮಾಧ್ಯಮಗಳಲ್ಲಿನ ಜಾಹೀರಾತು ಮಾರುಕಟ್ಟೆಯ ಮೇಲೆ ಬೃಹತ್ ತಾಂತ್ರಿಕ ಸಂಸ್ಥೆಗಳು ನಿಯಂತ್ರಣ ಹೊಂದಿವೆ. ಇದು ಭಾರತೀಯ ಸ್ಥಳೀಯ ಮಾಧ್ಯಮಗಳಿಗೆ ಹೊಡೆತ ನೀಡುತ್ತಿದೆ. ಇದನ್ನು ಹೊಸ ಕಾನೂನು ನಿರ್ಮಾಣದ ವೇಳೆ ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ.
ಗೂಗಲ್, ಫೇಸ್‌ಬುಕ್‌ಗಳು ವಿವಿಧ ಸುದ್ದಿಸಂಸ್ಥೆಗಳು ಅಂತರ್ಜಾಲದಲ್ಲಿ ಪ್ರಕಟಿಸುವ ಸುದ್ದಿಗಳ ಕೊಂಡಿಗಳನ್ನು ಹಂಚಿಕೊಳ್ಳುತ್ತವೆ. ಇದರಿಂದ ಗೂಗಲ್‌ಗೆ ಆದಾಯ ವಿದೆ. ಆದರೆ ಈ ಸುದ್ದಿಗಳನ್ನು ನೀಡುವ ಸಂಸ್ಥೆಗಳಿಗೆ ಲಾಭವಿಲ್ಲ. ಈ ಲಾಭವನ್ನು ಹಂಚಿಕೊಳ್ಳಬೇಕೆನ್ನುವುದೇ ಸದ್ಯದ ಆಗ್ರಹ. ಇದು ಈಗಾಗಲೇ ಆಸ್ಟ್ರೇಲಿಯ, ಫ್ರಾನ್ಸ್‌ನಲ್ಲಿ ಜಾರಿಗೆ ಬಂದಿದೆ. ಕೆನಡಾದಲ್ಲಿ ಇಂತಹ ಕಾನೂನನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಭಾರತದಲ್ಲೂ ಜಾರಿಯಾದರೆ ಅಚ್ಚರಿ ಪಡಬೇಕಾಗಿದ್ದೇನಿಲ್ಲ.